

ಚಿತ್ರದುರ್ಗ: ಒಬ್ಬರನ್ನೊಬ್ಬರು ನೋಡುತ್ತ, ಮುಗುಳ್ನಗೆ ಬೀರುತ್ತ, ಹಾರಗಳನ್ನು ಬದಲಿಸಿಕೊಂಡ ನವ ವಧು-ವರರಲ್ಲಿ ಪರಸ್ಪರ ಮಂದಹಾಸ, ಸಂಭ್ರಮ ಮನೆ ಮಾಡಿತ್ತು. ಕುಟುಂಬಸ್ಥರ ಸಂತಸಕ್ಕೂ ಪಾರವೇ ಇರಲಿಲ್ಲ...
ಮುರುಘಾಮಠದಲ್ಲಿ ಗುರುವಾರ ಜರುಗಿದ 35ನೇ ವರ್ಷದ 6ನೇ ತಿಂಗಳ ಸರಳ ಸಾಮೂಹಿಕ ಕಲ್ಯಾಣ ಮಹೋತ್ಸವ ದಾಂಪತ್ಯಕ್ಕೆ ಕಾಲಿರಿಸಿದ ಒಟ್ಟು 26 ಜೋಡಿಗಳ, ನೆರೆದಿದ್ದ ಸಾವಿರಾರು ಮಂದಿಯ ಸಡಗರಕ್ಕೆ ಸಾಕ್ಷಿಯಾಯಿತು.
ಮಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಮಾತನಾಡಿ, ನವ ಜೋಡಿಗಳು, ಅವರ ಸಂಬಂಧಿಕರು ಹಾಗೂ ಸ್ನೇಹಿತರು ತಮ್ಮ ಮನೆಗಳ ಮುಂದೆ ಸಸಿ ನೆಡುವ ಮೂಲಕ ಹಸಿರು ಕ್ರಾಂತಿಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಶ್ರೀಮಠವು ಕಂದಾಚಾರ, ಮೌಢ್ಯ ನಿರಾಕರಿಸಿ ಅಮಾವಾಸ್ಯೆ, ಶೂನ್ಯಮಾಸ, ಆಷಾಡದಲ್ಲೂ ಪ್ರತಿ ವರ್ಷ ಸಾಮೂಹಿಕ ಕಲ್ಯಾಣ ಮಾಡುತ್ತ ಬಂದಿದೆ. ಸಾವಿರಾರು ಜೋಡಿಗಳ ವಿವಾಹವಾಗಿದೆ. ಅವರೆಲ್ಲ ಸುಖಿ ಜೀವನ ಸಾಗಿಸುತ್ತಿದ್ದಾರೆ ಎಂದರು.
ಡಾ. ಬಸವಪ್ರಭು ಸ್ವಾಮೀಜಿ ಮಾತನಾಡಿ, ಪ್ರೇಮ-ಬಾಂಧವ್ಯದಿಂದ ಯಶಸ್ಸು, ಸಂಪತ್ತು ಲಭಿಸಲಿದೆ. ಹೀಗಾಗಿ ನವಜೋಡಿಗಳಲ್ಲಿ ಸಾಮರಸ್ಯ, ಪರಸ್ಪರ ನಂಬಿಕೆ, ಪ್ರೀತಿ-ವಿಶ್ವಾಸ ಅತ್ಯಗತ್ಯ. ಶ್ರೀಮಠದ ಸಾಮೂಹಿಕ ಕಲ್ಯಾಣ ಕಾರ್ಯವೂ ಸಮಾನತೆಯ ಸಾರವಾಗಿದೆ ಎಂದು ಹೇಳಿದರು.
ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಮಾತನಾಡಿ, ಶ್ರೀಮಠವು ಸತತ 35 ವರ್ಷಗಳಿಂದ ಸಾಮೂಹಿಕ ಕಲ್ಯಾಣ ಏರ್ಪಡಿಸುತ್ತಿದೆ. ಜೊತೆಗೆ ಮೌಢ್ಯ ನಿವಾರಣೆ, ಅಕ್ಷರ ಮತ್ತು ಅನ್ನ ದಾಸೋಹ ಸೇರಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವುದು ಸ್ವಾಗತಾರ್ಹ ಎಂದರು.
ದುಂದು ವೆಚ್ಚದ ವಿವಾಹಗಳನ್ನು ತಪ್ಪಿಸಲು ಈ ರೀತಿಯ ಕಾರ್ಯ ಮಾಡುತ್ತಿದೆ. ನವ ವಧು-ವರರು ಕೂಡಿ ಬಾಳುವ ಸಂಕಲ್ಪದೊಂದಿಗೆ ನೆಮ್ಮದಿ ಬದುಕನ್ನು ಸಾಗಿಸಬೇಕು ಎಂದು ಸಲಹೆ ನೀಡಿದರು.
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ವಧು-ವರರಿಗೆ ತಾಳಿ, ವಸ್ತ್ರಗಳನ್ನು ವಿತರಿಸಿ ಮಾತನಾಡಿ, ಪರಸ್ಪರರಲ್ಲಿ ಪ್ರೀತಿ ಹೆಚ್ಚಿರಬೇಕು. ಅಪನಂಬಿಕೆಗೆ ಎಂದಿಗೂ ಅವಕಾಶ ಮಾಡಿಕೊಡಬಾರದು ಎಂದು ಕಿವಿಮಾತು ಹೇಳಿದರು.
25 ಸಾವಿರ ವಧು-ವರರ ಕಲ್ಯಾಣವಾಗಿದೆ: ಶ್ರೀಮಠದ ಸಾಮೂಹಿಕ ಕಲ್ಯಾಣದಲ್ಲಿ ಸತತ 35 ವರ್ಷಗಳಿಂದ ಸುಮಾರು 25 ಸಾವಿರ ವಧು-ವರರು ಗೃಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದಾರೆ ಎಂದು ಜಗಳೂರು ಶಾಸಕ ದೇವೇಂದ್ರಪ್ಪ ತಿಳಿಸಿದರು. ಅತ್ತೆ-ಸೊಸೆ ಹೊಂದಿಕೊಳ್ಳದಿದ್ದರೆ ಜೀವನವೇ ಅಯೋಮಯ ಆಗುತ್ತದೆ. ಸ್ವರ್ಗ-ನರಕ ಎಲ್ಲಿಯೂ ಇಲ್ಲ. ನಾವೇ ಸೃಷ್ಟಿ ಮಾಡಿಕೊಳ್ಳುವ ರೀತಿ ನೀತಿಯಲ್ಲಿದೆ ಎಂದು ಸಲಹೆ ನೀಡಿದರು.
5 ಜೋಡಿ ಅಂತರ್ಜಾತಿ ವಿವಾಹ: ಎಸ್.ಹೇಮತ್ (ವಿಶ್ವಕರ್ಮ)-ಸ್ನೇಹಾ (ಆದಿಕರ್ನಾಟಕ), ಎ.ಎನ್. ಉಪೇಂದ್ರ (ಕೊಡವ)-ಸಿ.ಎಂ. ಚೊಂದಮ್ಮ (ಲಿಂಗಾಯತ), ಇ. ನಾಗರಾಜ (ಲಿಂಗಾಯತ)-ಬಿ. ಶಶಿಕಲಾ (ಕುರುಬ), ಬಿ. ಪ್ರಕಾಶ್ (ಲಿಂಗಾಯತ)-ಡಿ. ಪ್ರೇಮಜ್ಯೋತಿ (ಕ್ರಿಶ್ಚಿಯನ್), ವಿ. ಮಂಜುನಾಥ್ (ಲಿಂಗಾಯತ)-ಅನ್ನಪೂರ್ಣ ಪ್ರಕಾಶ್ ಭಜಂತ್ರಿ (ಕೊರವ) ಸೇರಿ 5 ಜೋಡಿ ಅಂತಜಾರ್ತಿ ವಿವಾಹ ನಡೆದವು.
ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು. ಇದೇ ವೇಳೆ ನೂತನ ವಧು ವರರಿಗೆ ಸಸಿಗಳನ್ನು ವಿತರಿಸಲಾಯಿತು. ಡಾ.ಜೆ.ಎಸ್. ಪ್ರಫುಲ್ ತುಮಾಟಿ, ನಿವೃತ್ತ ಅಧಿಕಾರಿ ಮಹೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಮಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ, ಸದಸ್ಯರಾದ ಎಸ್.ಎನ್. ಚಂದ್ರಶೇಖರ್, ಡಾ.ಕೆ. ಮಂಜುನಾಥ ನಾಯ್ಕ, ಗಂಜಿಗಟ್ಟೆ ಕೃಷ್ಣಮೂರ್ತಿ, ಎಸ್.ಆರ್. ನೇತ್ರಾವತಿ, ಟಿ.ಪಿ. ಜ್ಞಾನಮೂರ್ತಿ ಇತರರಿದ್ದರು.