

ಮಡಿಕೇರಿ : ಬಹುಭಾಷಾ ನಟಿ, ಕೊಡಗು ಮೂಲದ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಅವರ ವಿವಾಹ ಗುರುವಾರ ವಿರಾಜಪೇಟೆ ಸಮೀಪದ ಅಮ್ಮತ್ತಿ ಕೊಡವ ಸಮಾಜದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಡಾ. ಸುಧಾಕರ್ ಸೇರಿದಂತೆ ರಾಜಕೀಯ ರಂಗದ ಗಣ್ಯರು, ಚಲನಚಿತ್ರ ಕಲಾವಿದರಾದ ಗಣೇಶ್, ಅನುಪ್ರಭಾಕರ್, ಜೈಜಗದೀಶ್, ದೊಡ್ಡಣ್ಣ, ತಬಲ ನಾಣಿ, ಪೂಜಾ ಗಾಂಧಿ ಸೇರಿದಂತೆ ಚಿತ್ರರಂಗದ ಖ್ಯಾತನಾಮರು ಸ್ಯಾಂಡಲ್‌ವುಡ್‌ನ ಈ ಸಿನಿಜೋಡಿಯ ವಿವಾಹ ಸಂಭ್ರಮಕ್ಕೆ ಸಾಕ್ಷಿಯಾದರು.
ಸಂಪೂರ್ಣ ಕೊಡವ ಪದ್ಧತಿಯಂತೆಯೇ ವಿವಾಹ ಕಾರ್ಯಕ್ರಮ ನೆರವೇರಿತು. ಕೊಡವ ಸಾಂಪ್ರದಾಯಿಕ ದಿರಿಸಿನಲ್ಲಿ ನವ ಜೋಡಿ ಗಮನ ಸೆಳೆದರು. ಶಾಸ್ತ್ರೋಕ್ತವಾಗಿ ನಡೆದ ಮದುವೆ ವಿಧಿ-ವಿಧಾನಗಳಲ್ಲಿ ಎರಡೂ ಕುಟುಂಬದ ಹಿರಿಯರು, ಬಂಧುಗಳು, ಸ್ನೇಹಿತರು ಹಾಜರಿದ್ದು ಆಶೀರ್ವದಿಸಿದರು.
ಮದುವೆಗಾಗಿ ಕೊಡಗಿನ ವಿಶೇಷ ಖಾದ್ಯಗಳನ್ನು ತಯಾರಿಸಿ ಅತಿಥಿಗಳಿಗೆ ಬಡಿಸಲಾಯಿತು. ಕೊಡವ ಶೈಲಿಯ ನೂಪಟ್ಟು, ಫೋರ್ಕ್ ಪ್ರೈ, ಫೋರ್ಕ್ ಕರಿ, ಮಟನ್ ಬಿರಿಯಾನಿ, ಮಟನ್ ಫ್ರೈ , ಚಿಕನ್ ಫ್ರೈ, ವೆಜಿಟೆಬಲ್ ಪಲಾವ್, ಅಲಸಂದೆ ಪಲ್ಯ, ಬೆಂಡೆ ಫ್ರೈ , ಅನಾನಸ್ ಕರಿ, ಈರುಳ್ಳಿ ಕರಿ, ಮೊಸರು ವಡೆ, ತೆಂಗಿನ ಹಾಲು, ವೆಜ್ ಕುರ್ಮಾಗಳನ್ನು ಮದುವೆಗೆ ಆಗಮಿಸಿದ್ದವರು ಸವಿದರು.
ಭುವನ್ ಪೊನ್ನಣ್ಣ ಮೂಲತಃ ಮಡಿಕೇರಿಯವರು. ಕೊಡವ ಭಾಷೆಯ ಬ್ರಹ್ಮಗಿರಿ ವಾರಪತ್ರಿಕೆ ಸಂಪಾದಕ ಉಳ್ಳಿಯಡ ಪೂವಯ್ಯ ಮತ್ತು ಡಾಟಿ ದಂಪತಿ ಪುತ್ರ. ಹರ್ಷಿಕಾ ಪೂಣಚ್ಚ ಅವರು ಅಮ್ಮತ್ತಿ ನಿವಾಸಿ ಉದ್ದಪಂಡ ದಿ. ಪೂಣಚ್ಚ ಮತ್ತು ಶಾಂಭವಿ ದಂಪತಿ ಪುತ್ರಿ.
ಫ್ಯಾಷನ್ ಷೋಗಳ ಕೊರಿಯೋಗ್ರಾಫರ್ ಆಗಿರುವ ಭುವನ್ ನಟನಾಗಿಯೂ ಹೆಸರು ಮಾಡಿದ್ದಾರೆ. ಹರ್ಷಿಕಾ ಪೂಣಚ್ಚ ವಿವಿಧ ಭಾಷೆಗಳ ಚಿತ್ರಗಳಲ್ಲಿ ನಟಿಸಿ ಜನಪ್ರಿಯ ನಟಿ ಎನಿಸಿಕೊಂಡಿದ್ದಾರೆ. ಇವರು 12 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇದೀಗ ವೈವಾಹಿಕ ಜೀವನಕ್ಕೆ ಪದಾರ್ಪಣೆ ಮಾಡಿದ್ದು ವಿಶೇಷ.