

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಕಳೆಗಟ್ಟಿದ್ದು, ಈ ಸಡಗರ, ಸಂಭ್ರಮ ಕಣ್ತುಂಬಿಕೊಳ್ಳಲು ಜನಸಾಗರವೇ ನಗರಕ್ಕೆ ಹರಿದು ಬರುತ್ತಿದೆ.
ಸೆ.22ರಂದು ಚಾಲನೆ ದೊರೆತಿರುವ ನಾಡಹಬ್ಬ ಏಳನೇ ದಿನ ಪೂರೈಸಿದೆ. ಜಂಬೂ ಸವಾರಿಗೆ ಇನ್ನೂ 4 ದಿನ ಮಾತ್ರ ಉಳಿದಿದೆ. ಪ್ರವಾಸಿಗರ, ಸಾರ್ವಜನಿಕರ ಕಾತರ ಹೆಚ್ಚಾಗಿದೆ. ವಾರಾಂತ್ಯವಾಗಿರುವ ಹಿನ್ನೆಲೆಯಲ್ಲಿ ದಸರಾ ಕಾರ್ಯಕ್ರಮ ಜನಸಮೂಹ ಲಗ್ಗೆ ಇಟ್ಟಿದೆ.
ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ಅರಮನೆ ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮ, ಬನ್ನಿಮಂಟಪದ ಕವಾಯತು ಮೈದಾನದಲ್ಲಿ ಸಂಜೆ ನಡೆದ ಡ್ರೋನ್ ಶೋ ಕಾರ್ಯಕ್ರಮದಲ್ಲಿ ಹೆಚ್ಚಿನ ಜನರು ಜಮಾವಣೆಗೊಂಡಿದ್ದರು. ಬೆಳಗ್ಗೆ ಜೆ.ಕೆ.ಮೈದಾನದಲ್ಲಿ ನಡೆದ ಮುದ್ದು ಸಾಕುಪ್ರಾಣಿಗಳ ಪ್ರದರ್ಶನದಲ್ಲೂ ಜನದಟ್ಟಣೆ ಹೆಚ್ಚಿತ್ತು. ಇಲ್ಲಿ ವಾಹನ ನಿಲುಗಡೆ, ವಾಹನ ಸಂಚಾರಕ್ಕೆ ಅಡೆತಡೆ ಉಂಟಾಯಿತು.
ಆರಂಭದಿಂದಲೂ ಆಹಾರ ಮೇಳ ಜನರಿಂದ ತುಂಬಿ ತುಳುಕುತ್ತಿದೆ. ಸಂಜೆಯಾಗುತ್ತಿದ್ದಂತೆ ಇಲ್ಲಿ ನಿಂತುಕೊಳ್ಳಲು ಜಾಗ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಶನಿವಾರ ಪ್ರವೇಶ ದ್ವಾರದಲ್ಲಿ ನೂಕುನುಗ್ಗಲು ಉಂಟಾಗಿತ್ತು. ಅದೇ ಸ್ಥಿತಿ ಭಾನುವಾರ ಸಂಜೆಯೂ ಪುನರಾವರ್ತನೆಯಾಗಿತ್ತು. ನಿರೀಕ್ಷೆ ಮೀರಿ ಜನರು ಬರುತ್ತಿರುವುದರಿಂದ ಆಹಾರ ಮೇಳ ನಡೆಯುತ್ತಿರುವ ಮಹಾರಾಜ ಕಾಲೇಜು ಮೈದಾನ ಎದುರಿನ ರಸ್ತೆಯನ್ನು ಬಂದ್ ಮಾಡಿ ಬದಲಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಆದರೂ, ಜನಸಮೂಹ ತಗ್ಗಲಿಲ್ಲ.
ಕುಪ್ಪಣ್ಣ ಉದ್ಯಾನದಲ್ಲಿ ನಡೆಯುತ್ತಿರುವ ಫಲಫುಷ್ಪ ಪ್ರದರ್ಶನಕ್ಕೂ ಸಹಸ್ರಾರು ಜನರು ದಾಳಿ ಇಡುತ್ತಿದ್ದಾರೆ. ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಸಹಜಸ್ಥಿತಿ ಇರುತ್ತದೆ. ಸಂಜೆಯಾಗುತ್ತಿದ್ದಂತೆ ಇಲ್ಲಿಯೂ ಜನರ ಜಾತ್ರೆ ಕಂಡು ಬರುತ್ತಿದೆ. ಅಲ್ಲಿರುವ ಗಾಜಿನ ಮನೆಯಲ್ಲಿ ತುಂಬಿ ಹೋಗುತ್ತಿದೆ.
ಯುವ ದಸರಾ, ರೈತ ದಸರಾ, ಮಹಿಳಾ ದಸರಾ, ಮಕ್ಕಳ ದಸರಾ, ಕ್ರೀಡಾಕೂಟಗಳು, ಯೋಗ ದಸರಾ, ಕವಿಗೋಷ್ಠಿ ಸೇರಿದಂತೆ ದಸರಾದ ಶೇ.75ರಷ್ಟು ಕಾರ್ಯಕ್ರಮಗಳು ಮುಕ್ತಾಯಗೊಂಡಿವೆ. ಕುಸ್ತಿ ಪಂದ್ಯಾವಳಿಗೆ ಭಾನುವಾರ ಸಂಜೆ ತೆರೆಬಿದ್ದಿದೆ. ಹೀಗಾಗಿ, ಸಾರ್ವಜನಿಕರು, ಪ್ರವಾಸಿಗರು ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ದಸರಾ ವಸ್ತುಪ್ರದರ್ಶನ, ಅರಮನೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನುಗ್ಗುತ್ತಿದ್ದಾರೆ. ನದಿ, ಉಪನದಿಯ ನೀರು ಜಲಾಶಯಕ್ಕೆ ಸೇರಿದಂತೆ ಈ ಸ್ಥಳಗಳಲ್ಲಿ ಜಮಾವಣೆಗೊಳ್ಳುತ್ತಿರುವುದು ಜನದಟ್ಟಣೆಗೆ ಕಾರಣವಾಗುತ್ತಿದೆ.
ಟ್ರಾಫಿಕ್ ಜಾಮ್ ಸಹ ಉಂಟಾಗಿ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಸಯ್ಯಜಿರಾವ್ ರಸ್ತೆ, ಆಲ್ಬರ್ಟ್ ವಿಕ್ಟರ್ ರಸ್ತೆ, ಜೆಎಲ್‌ಬಿ ರಸ್ತೆ, ಅಶೋಕರಸ್ತೆ, ಎನ್‌ಬಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ವಾಹನಗಳ ಜಾತ್ರೆಯೇ ನಿರ್ಮಾಣವಾಗುತ್ತಿದೆ. ಬೆಳಗ್ಗೆ ಅಂತಹ ಸಮಸ್ಯೆ ಕಾಣುತ್ತಿಲ್ಲ. ದಸರಾ ದೀಪಾಲಂಕಾರ ವೀಕ್ಷಣೆಗಾಗಿ ಜನರ ಬೈಕ್, ಕಾರ್‌ಗಳು ರಸ್ತೆಗಿಳಿಯುತ್ತಿವೆ. ಕೆಲ ರಸ್ತೆಯಲ್ಲಿ ವಾಹನಗಳ ಉದ್ದನೇ ಸಾಲು ಕಾಣಸಿಗುತ್ತಿದೆ. ನಗರದಲ್ಲಿ ಕಾರ್‌ಗಿಂತ ಬೈಕ್‌ನಲ್ಲಿ ಓಡಾಟವೇ ಸೂಕ್ತ ಎನ್ನುವ ಸ್ಥಿತಿ ಕಂಡುಬರುತ್ತಿದೆ. ಕೆಲ ಆಯ್ದ ಪ್ರದೇಶದಲ್ಲಿ ವಾಹನಗಳ ನಿಲುಗಡೆಗೂ ಸಮಸ್ಯೆಯಾಗುತ್ತಿದೆ. ಇವುಗಳಿಗೆ ಜಾಗವೂ ದೊರೆಯುತ್ತಿಲ್ಲ.
ವಾಹನಗಳ ಸಂಚಾರ ನಿಯಂತ್ರಣಕ್ಕೆ ಪೊಲೀಸರು ಶ್ರಮಿಸುತ್ತಿದ್ದಾರೆ. ಇದರಿಂದ ತಕ್ಕಮಟ್ಟಿಗೆ ವಾಹನ ಓಡಾಟ ಸುಗಮಗೊಂಡಿದೆ. ಪ್ರಮುಖ ವೃತ್ತ, ರಸ್ತೆಗಳಲ್ಲಿ ಸಂಚಾರ ಪೊಲೀಸರು, ಸಾಮಾನ್ಯ ಪೇದೆಗಳು ಮತ್ತು ಗೃಹ ರಕ್ಷಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ವಾಹನ ದಟ್ಟಣೆ ನಡುವೆ ರಸ್ತೆ ನಿಯಮ ಉಲ್ಲಂಘನೆ ಎಗ್ಗಿಲ್ಲದೇ ಸಾಗಿದೆ. ಮೂರು ಜನರ ಸವಾರಿ, ಹೆಲ್ಮೆಟ್ ರಹಿತ ಚಾಲನೆ ಸಾಮಾನ್ಯವಾಗಿ ಗೋಚರವಾಗುತ್ತಿದೆ.
ಮಾಂಸಾಹಾರಕ್ಕೆ ಬಲು ಬೇಡಿಕೆ ಬಂದಿದ್ದು, ಜನರು ಮುಗಿಬಿದ್ದು ನಾನ್ ವೆಜ್ ಖಾದ್ಯವನ್ನು ಭಕ್ಷಣೆ ಮಾಡುತ್ತಿದ್ದಾರೆ. ಆಹಾರದ ಮೇಳದಲ್ಲಿ 160 ಮಳಿಗೆಗಳ ಪೈಕಿ 130 ಮಳಿಗೆಗಳು ಮಾಂಸಾಹಾರ ಉಣಬಡಿಸುತ್ತಿವೆ.
30 ಮಳಿಗೆಗಳು ಸಸ್ಯಾಹಾರ ನೀಡುತ್ತಿವೆ. ದಸರಾ ವಸ್ತುಪ್ರದರ್ಶನ, ಫಲಪುಷ್ಪ ಪ್ರದರ್ಶನದಲ್ಲೂ ಶೇ.80ರಷ್ಟು ಮಳಿಗೆಗಳು ನಾನ್ ವೆಜ್‌ಗಳಾಗಿವೆ. ಶೇ.20ರಷ್ಟು ಮಳಿಗೆಗಳು ಸಸ್ಯಾಹಾರವಾಗಿವೆ. ನಾನ್ ವೆಜ್ ಮಳಿಗೆ ಎದುರು ಜನರು ಗಿಜಿಗುಡುತ್ತಿದ್ದಾರೆ. ಚಿಕನ್ ಬಿರಿಯಾನಿ, ಕಬಾಬ್ ಹೆಚ್ಚು ಬಿಕರಿಯಾಗುತ್ತಿವೆ. ಉಳಿದಂತೆ ಚಿಕನ್, ಮಟನ್, ಮೀನಿನ ಖಾದ್ಯಗಳೂ ತ್ವರಿತಗತಿಯಲ್ಲಿ ಮಾರಾಟವಾಗುತ್ತಿವೆ.
ಪುಸ್ತಕ ಮೇಳಕ್ಕೆ ನಿರೀಕ್ಷಿತ ಮಟ್ಟದಲ್ಲಿ ಜನರು ಬರುತ್ತಿಲ್ಲ. ಆಹಾರ ಮೇಳ, ಯುವ ದಸರಾ, ಏರ್ ಶೋ, ಡ್ರೋನ್ ಶೋಗಳಿಗೆ ಹೋಗುವ ಜನರು ಪುಸ್ತಕ ಸಂತೆಯತ್ತ ಮುಖ ಮಾಡುತ್ತಿಲ್ಲ. ಇದಕ್ಕೆ ಕಾರಣವೇನು ಪ್ರಕಾಶಕರ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ.
ಸಾಂಸ್ಕೃತಿಕ ನಗರಿಯತ್ತ ಪ್ರವಾಸಿಗರು ದೌಡಾಯಿಸುತ್ತಿದ್ದಾರೆ. ಬೆಂಗಳೂರು ಜನರು ಹೆಚ್ಚಿನ ಪ್ರಮಾಣದಲ್ಲಿ ನಗರದ ಮೇಲೆ ದಾಳಿ ಇಟ್ಟಿದ್ದಾರೆ.
ಉಳಿದಂತೆ ವಿವಿಧ ಭಾಗಗಳಿಂದ, ಅನ್ಯ ರಾಜ್ಯಗಳಿಂದಲೂ ಪ್ರವಾಸಿಗರು ಅರಮನೆ ನಗರಿ ಸೌಂದರ್ಯ ತುಂಬಿಕೊಳ್ಳಲು ಗುಂಪು ಗುಂಪಾಗಿ ಬಂದಿದ್ದಾರೆ. ಹೀಗಾಗಿ, ನಗರದಲ್ಲಿರುವ ಹೋಟೆಲ್‌ಗಳ ಕೊಠಡಿಗಳು ಬಹುತೇಕ ಭರ್ತಿಯಾಗಿವೆ. ನಗರದ ಹೊರಭಾಗದ ರೂಮ್ ಶೇ.80ರಷ್ಟು ತುಂಬಿವೆ ಎಂದು ಹೋಟೆಲ್ ಮಾಲೀಕರ ಸಂಘದ ತಿಳಿಸಿದೆ.