

ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೂ ಮುನ್ನವೇ ನಗರದ ರಸ್ತೆಗಳ ಗುಂಡಿಗಳನ್ನು ಮುಚ್ಚಬೇಕು ಎಂದು ಮೇಯರ್ ಶಿವಕುಮಾರ್ ಅಧಿಕಾರಿಗಳಿಗೆ ತಾಕೀತು ಮಾಡಿದರು
ಮೇಯರ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಸೋಮವಾರ ಪಾಲಿಕೆ ಕಚೇರಿಯಲ್ಲಿ ಅಧಿಕಾರಿಗಳ ಮೊದಲ ಸಭೆ ನಡೆಸಿದರು. ಮಳೆಯಿಂದಾಗಿ ನಗರದ ಬಹುತೇಕ ರಸ್ತೆಗಳು ಗುಂಡಿ ಬಿದ್ದಿವೆ. ಕೆಲವು ಕಡೆ ಶಾಸಕರ ಅನುದಾನದಿಂದ ಕಾಮಗಾರಿ ಆರಂಭವಾಗಿವೆ. ಮಳೆ ನವೆಂಬರ್ ತನಕ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ತಿಂಗಳ ಅಂತ್ಯಕ್ಕೆ ದಸರಾ ಆರಂಭಗೊಳ್ಳಲಿದೆ. ಹದಗೆಟ್ಟಿರುವ ರಸ್ತೆಯನ್ನು ಅಭಿವೃದ್ಧಿಪಡಿಸುವುದು ಸವಾಲಿನ ಕೆಲಸವಾಗಿದೆ. ಆದ್ದರಿಂದ ತಕ್ಷಣಕ್ಕೆ ದಸರಾ ಆರಂಭಕ್ಕೂ ಮುನ್ನ ಗುಂಡಿ ಮುಚ್ಚಲು ಕ್ರಮ ತೆಗೆದುಕೊಳ್ಳಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿವಿಲ್ ಇಂಜಿನಿಯರ್ ವಿಭಾಗದ ಅಧಿಕಾರಿ, ಮೂರ‌್ನಾಲ್ಕು ದಿನಗಳು ಮಳೆ ಬರುವುದಿಲ್ಲ ಎಂಬ ಮಾಹಿತಿ ಇದೆ. ಅಷ್ಟರಲ್ಲಿ ಗುಂಡಿಗಳನ್ನು ಮುಚ್ಚಲು ಕ್ರಮವಹಿಸಿದ್ದೇವೆ ಎಂದರು.
ಒಂದು ವಾರ ಗಡುವು: ಪಾಲಿಕೆ ವ್ಯಾಪ್ತಿಯಲ್ಲಿ 44 ಸಾವಿರ ವರ್ತಕರು ನೋಂದಣಿ ಮಾಡಿಸಿರುವುದಾಗಿ ಮಾಹಿತಿ ಇದೆ. ಇತ್ತೀಚೆಗೆ ನಡೆದ ನಗರ ಸಮೀಕ್ಷೆಯಲ್ಲಿ 20 ಸಾವಿರ ಟ್ರೇಡರ್ಸ್ ಇದ್ದಾರೆ. ಈಗ ವಾರ್ಡ್‌ಗಳಲ್ಲಿ ಬೀದಿವಾರು ಸಮೀಕ್ಷೆ ಮಾಡಿದ್ದೇವೆ ಎಂದು ಅಧಿಕಾರಿ ಮಾಹಿತಿ ನೀಡಿದರು.
ಟ್ರೇಡರ್ಸ್ ಬಗ್ಗೆ ನಿಖರವಾದ ಮಾಹಿತಿ ಇಲ್ಲ. 2008ರಿಂದಲೂ ಈ ವಿಚಾರ ಪ್ರಸ್ತಾಪವಾಗುತ್ತಿದೆ. ಸಮರ್ಪಕ ಮಾಹಿತಿಯೇ ಇಲ್ಲದಿದ್ದರೆ ಕೆಲಸ ಮಾಡುವುದು ಹೇಗೆ? ವಾರದೊಳಗೆ ವಾರ್ಡ್‌ವಾರು, ವಲಯವಾರು ಮಾಹಿತಿ ನೀಡಬೇಕು ಎಂದು ಮೇಯರ್ ನಿರ್ದೇಶಿಸಿದರು.
ಇಂಜಿನಿಯರ್‌ಗಳ ವಿರುದ್ಧ ಕಿಡಿ:
ಪರಿಸರ ಇಂಜಿನಿಯರ್ ವಿರುದ್ಧ ಗರಂ ಆದ ಮೇಯರ್ ಶಿವಕುಮಾರ್ ಅವರು, ಕಳೆದ ವಾರ ಯಾವ ಸ್ಥಳಕ್ಕೆ ಭೇಟಿ ನೀಡಿದ್ದೀರಿ? ಯಾವ ಸಮಸ್ಯೆ ಬಗೆಹರಿಸಿದ್ದೀರಿ ಎಂದು ಪ್ರಶ್ನಿಸಿದರು. ಕೊಟ್ಟಿರುವ ವಾಕಿಟಾಕಿಗಳನ್ನು ಬಳಸದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಸ್ವಚ್ಛತಾ ಅಭಿಯಾನದಲ್ಲಿ ಮೈಸೂರು 4 ವರ್ಷಗಳಿಂದ ಸ್ಥಾನ ಪಡೆದಿಲ್ಲ. ಪ್ರಥಮ ಸ್ಥಾನ ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಭರವಸೆ ಕೊಟ್ಟಿದ್ದೇನೆ. ನಮ್ಮ ಭರವಸೆ ಈಡೇರಬೇಕಾದರೆ ಅಧಿಕಾರಿಗಳು ಶಿಸ್ತುಬದ್ಧವಾಗಿ ಕೆಲಸ ಮಾಡಬೇಕು. ಪರಿಸರ ಇಂಜಿನಿಯರ್‌ಗಳು ಸ್ಥಳ ಪರಿಶೀಲನೆ ನಡೆಸಬೇಕು. ಡೈರಿ ನಿರ್ವಹಿಸಬೇಕು. ಶೀಘ್ರದಲ್ಲಿ ವಲಯವಾರು ಭೇಟಿ ನೀಡುವುದಾಗಿ ತಿಳಿಸಿದರು.
ಮದ್ಯದಂಗಡಿ ತೆರವುಗೊಳಿಸಿ:
ಚಾಮರಾಜ ಜೋಡಿ ರಸ್ತೆಯಲ್ಲಿ ಪಾಲಿಕೆ ನಡೆಸುತ್ತಿರುವ ಅಂಬಳೆ ಅಣ್ಣಯ್ಯ ವಿದ್ಯಾರ್ಥಿನಿಯರ ನಿಲಯದಲ್ಲಿ 45 ವಿದ್ಯಾರ್ಥಿನಿಯರಿದ್ದಾರೆ. ಈ ಹಾಸ್ಟೆಲ್ ಎದುರು ಇರುವ ಮದ್ಯದಂಗಡಿಯನ್ನು ತೆರವುಗೊಳಿಸಬೇಕು ಎಂದು ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಈ ಕಟ್ಟಡದಲ್ಲಿ 19 ಮಳಿಗೆಗಳಿದ್ದು, ಮಾಸಿಕ 26,250 ರೂ. ಬಾಡಿಗೆ ಪಾವತಿಸುತ್ತಿದ್ದಾರೆ. ಹಾಸ್ಟೆಲ್ ಮುಂಭಾಗದಲ್ಲಿರುವ ವೈನ್ ಸ್ಟೋರ್ ತೆರವು ಪ್ರಕರಣ 2 ವರ್ಷಗಳಿಂದ ನ್ಯಾಯಾಲಯದಲ್ಲಿದೆ ಎಂದು ತಿಳಿಸಿದರು. ಆಗ ಮೇಯರ್ ಅವರು 2 ವರ್ಷಗಳಿಂದ ಪ್ರಕ್ರಿಯೆ ಪೂರ್ಣಗೊಳ್ಳದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಉಪ ಮೇಯರ್ ಜಿ.ರೂಪಾ ಧ್ವನಿಗೂಡಿಸಿದರು.
ಜಾಹೀರಾತು ಹಣ ವಸೂಲಿ ಮಾಡಿ:
ಪಾಲಿಕೆ ವಿರುದ್ಧವಾಗಿಯೇ ನ್ಯಾಯಾಲಯಕ್ಕೆ ಹೋಗಿರುವ ಜಾಹೀರಾತು ಸಂಸ್ಥೆಗಳಿಗೆ ಮತ್ತೆ ಜಾಹೀರಾತು ನೀಡುವುದು ಬೇಡ. ಅವರಿಂದ ದಂಡ ಸಮೇತ ಜಾಹೀರಾತು ಹಣ ವಸೂಲಿ ಮಾಡಬೇಕು. ಪಾಲಿಕೆ ವಿರುದ್ಧ ಹೋಗುವವರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಈ ಬಗ್ಗೆ ಕೌನ್ಸಿಲ್‌ನಲ್ಲಿ ಚರ್ಚೆಯಾಗಿರುವುದನ್ನು ಅಧಿಕಾರಿಗಳು ಗಮನಹರಿಸಬೇಕು ಎಂದು ಮೇಯರ್ ತಿಳಿಸಿದರು.
ಹದಗೆಟ್ಟಿರುವ ಮೇಯರ್ ಮನೆ:
ಮೇಯರ್ ಅಧಿಕೃತ ಮನೆ ಹದಗೆಟ್ಟಿದೆ. ಇದರ ಒಳಗೆ ಕಾಲಿಡಲು ಆಗದಂತಹ ದುಸ್ಥಿತಿ ಇದೆ. ಶೀಘ್ರ ಕ್ರಿಯಾಯೋಜನೆ ಸಿದ್ಧಪಡಿಸಿ ಮನೆಯನ್ನು ದುರಸ್ತಿ ಮಾಡಬೇಕು ಎಂದು ಆಯುಕ್ತರಿಗೆ ಸೂಚಿಸಿದರು. ಹಾಗೆಯೆ, ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಣೆಗೆ ದಿನಾಂಕ ನಿಗದಿಪಡಿಸುವಂತೆ ಹೇಳಿದರು.
ಉಪಮೇಯರ್ ಜಿ.ರೂಪಾ, ನಗರ ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತರೆಡ್ಡಿ ಭಾಗವಹಿಸಿದ್ದರು.