

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಲಿರುವ ಗಜಪಡೆಯ ಎರಡನೇ ತಂಡ ಬುಧವಾರ ಅರಮನೆ ಆವರಣಕ್ಕೆ ಬಂದಿಳಿದವು.
ಅರಣ್ಯ ಸಚಿವ ಉಮೇಶ್ ಕತ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ಆನೆಗಳಿಗೆ ಯಾವುದೇ ಸ್ವಾಗತ ಕಾರ್ಯಕ್ರಮ ನಡೆಸದೇ ಸಂಪ್ರದಾಯದಂತೆ ಕಬ್ಬು, ಬೆಲ್ಲ ತಿನ್ನಿಸಿ ಬರಮಾಡಿಕೊಳ್ಳಲಾಯಿತು.
ಕೊಡಗು ಜಿಲ್ಲೆಯ ದುಬಾರೆ ಆನೆ ಶಿಬಿರದಿಂದ ಗೋಪಿ (41), ಶ್ರೀರಾಮ (40), ಸುಗ್ರೀವ(40) ಹಾಗೂ ವಿಜಯಾ (63) ಬಂದರೆ ಬಂಡೀಪುರ ಹುಲಿ ಸಂರಕ್ಷಿತಾರಣ್ಯಪ್ರದೇಶದಲ್ಲಿರುವ ರಾಮಪುರ ಸಾಕಾನೆ ಶಿಬಿರದಿಂದ ಅತಿ ಕಿರಿ ವಯಸ್ಸಿನ ಪಾರ್ಥಸಾರಥಿ(18) ಆಗಮಿಸಿ ದಸರಾ ಗಜಪಡೆ ಸೇರಿಕೊಂಡಿವು.
ಇದರಿಂದ ಒಂದು ತಿಂಗಳ ಹಿಂದೆ ಅಂಬಾರಿ ಆನೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಆಗಮಿಸಿದ 9 ಆನೆಗಳ ಜೊತೆಗೆ ಬುಧವಾರ ಆಗಮಿಸಿದ ಗೋಪಿ ನೇತೃತ್ವದ ಎರಡನೇ ತಂಡದ 5 ಆನೆಗಳು ಸೇರಿದ್ದರಿಂದ ದಸರಾ ಗಜಪಡೆ ಬಲ ಈಗ 14ಕ್ಕೆ ಏರಿದೆ.
ಮೂರು ಹೊಸ ಆನೆಗಳು:
ದಸರಾ ಉತ್ಸವದಲ್ಲಿ ಭಾಗವಹಿಸಲು ಆಗಮಿಸಿದ ಎರಡನೇ ತಂಡದಲ್ಲಿ ಆಗಮಿಸಿರುವ 5 ಆನೆಗಳ ಪೈಕಿ 3 ಹೊಸ ಆನೆಗಳಿರುವುದು ವಿಶೇಷ.
ದುಬಾರೆ ಆನೆ ಶಿಬಿರದ ಗೋಪಿ ಮತ್ತು ಹೆಣ್ಣಾನೆ ವಿಜಯ ಈ ಹಿಂದೆ ಹಲವು ಬಾರಿ ದಸರಾ ಉತ್ಸವದಲ್ಲಿ ಭಾಗವಹಿಸಿವೆ. ಶ್ರೀರಾಮ, ಸುಗ್ರೀವ ಹಾಗೂ ರಾಮಪುರ ಆನೆ ಶಿಬಿರದ ಪಾರ್ಥಸಾರಥಿ ಹೊಸ ಆನೆಗಳಾಗಿದ್ದು. ಇದೇ ಮೊದಲ ಬಾರಿಗೆ ದಸರಾದಲ್ಲಿ ಭಾಗವಹಿಸುತ್ತಿವೆ. ಇದರ ಜೊತೆಗೆ ಮೊದಲ ತಂಡದಲ್ಲಿ ಬಳ್ಳೆ ಆನೆ ಶಿಬಿರದಿಂದ ಆಗಮಿಸಿರುವ 39 ವರ್ಷದ ಮಹೇಂದ್ರ ಕೂಡಾ ಇದೇ ಮೊದಲ ಬಾರಿಗೆ ದಸರಾ ಉತ್ಸವದಲ್ಲಿ ಭಾಗವಹಿಸುತ್ತಿರುವುದರಿಂದ ಈ ಬಾರಿ ದಸರಾದಲ್ಲಿ ನಾಲ್ಕು ಆನೆಗಳಿಗೆ ಅವಕಾಶ ದೊರೆತಂತಾಗಿದೆ.
ಕಳೆದ ಎರಡು ವರ್ಷ ಕರೋನಾದಿಂದಾಗಿ ಸರಳ ದಸರಾ ಆಚರಣೆ ಮಾಡಿದ್ದರಿಂದ ಎರಡನೇ ತಂಡದ ಆನೆಗಳು ಆಗಮಿಸಿದೆ ಕೆಲ ಆನೆಗಳಿಂದ ಮಾತ್ರ ಉತ್ಸವ ಆಚರಿಸಲಾಗಿತ್ತು.
ಹೊಸ ಆನೆಗಳಿಗೆ ತೂಕ ಪರೀಕ್ಷೆ:
ದಸರಾ ಉತ್ಸವದಲ್ಲಿ ಭಾಗವಹಿಸಲು ಆಗಮಿಸಿರುವ 2ನೇ ತಂಡದ ಆನೆಗಳಿಗೆ ಸೆ. 9 ಅಥವಾ 10ರಂದು ತೂಕ ಪರೀಕ್ಷೆ ನಡೆಯಲಿದೆ.
ಇವುಗಳ ಜೊತೆಗೆ ಮೊದಲ ತಂಡದಲ್ಲಿ ಬಂದಿದ್ದ ಅಭಿಮನ್ಯು, ಅರ್ಜುನ ನೇತೃತ್ವದಲ್ಲಿ ಆಗಮಿಸಿರುವ 9 ಆನೆಗಳಿಗೂ ಅಂದೇ 2ನೇ ಹಂತದ ತೂಕ ಪರೀಕ್ಷೆ ನಡೆಸಲಾಗುವುದು. ಇದರಿಂದ ಯಾವ ಆನೆಗಳು ಸುಧಾರಿಸುವೆ, ಸಮರ್ಥ ಇವೆ ಎನ್ನುವುದನ್ನು ಆರಣ್ಯ ಇಲಾಖೆ ಅಧಿಕಾರಿಗಳು ಲೆಕ್ಕ ಹಾಕಿ ಮುಂದಿನ ಪೋಷಣೆಗೆ ಮಾರ್ಗದರ್ಶನ ನೀಡಲಿದ್ದಾರೆ.