

ಚಿತ್ರದುರ್ಗ: ಎಪಿಎಂಸಿ ಮಾರುಕಟ್ಟೆಯಲ್ಲಿ ಹೆಚ್ಚಿದ್ದ ವಾಹನ ದಟ್ಟಣೆ ಹಾಗೂ ಜನಸಂದಣಿ. ಗ್ರಾಹಕರನ್ನು ಸೆಳೆದ ನಾನಾ ಬಗೆಯ ಪುಷ್ಪಗಳ ರಾಶಿ. ಒಳಗೆ ಪ್ರವೇಶಿಸಲು ಜನರ ಹರಸಾಹಸ. ಘಮ-ಘಮ ಪರಿಮಳದೊಂದಿಗೆ ಸೃಷ್ಟಿಯಾಗಿದ್ದ ಹೂವಿನ ಲೋಕ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿತ್ತು.
ಶುಕ್ರವಾರದ ದುರ್ಗಾಷ್ಟಮಿ, ಮಹಾನವಮಿ, ಗಜ-ಅಶ್ವ ಪೂಜೆ, ಅ. 12ರ ವಿಜಯದಶಮಿ ಹಬ್ಬದ ಆಚರಣೆಗಾಗಿ ಗುರುವಾರದಿಂದಲೇ ಕೋಟೆನಗರಿ ಸೇರಿ ಜಿಲ್ಲಾದ್ಯಂತ ಸಿದ್ಧತೆ ಜೋರಾಗಿತ್ತು.
ಆಯುಧ ಪೂಜೆಗಾಗಿ ದಸರಾ ಬೊಂಬೆಗಳು, ಯಂತ್ರೋಪಕರಣ, ವಾಹನಗಳು, ಕಚೇರಿ ಸೇರಿ ಮನೆಯ ವಸ್ತುಗಳನ್ನು ಅಲಂಕರಿಸಿ ಪೂಜಿಸುವ ಹಿನ್ನೆಲೆಯಲ್ಲಿ ಪುಷ್ಪಗಳಿಗೆ ಬೇಡಿಕೆ ಹೆಚ್ಚು. ಹೀಗಾಗಿ ಮಾರುಕಟ್ಟೆ ರಂಗೇರಿತ್ತು.
ಹೂವು, ಹಣ್ಣು, ತರಕಾರಿಗಳ ದುಬಾರಿಯಾಗಿತ್ತು. ಆಕಳು-ಎತ್ತುಗಳನ್ನು ಸಿಂಗರಿಸುವ ಆಕರ್ಷಕ ವಸ್ತುಗಳ ಬೆಲೆ ಹೆಚ್ಚಿದ್ದರೂ ಜನರು ಖರೀದಿಗೆ ಮುಗಿಬಿದ್ದಿದ್ದರು. ವಿವಿಧ ಬಗೆಯ ಹೂವುಗಳು ಉತ್ತಮ ಬೆಲೆಗೆ ಮಾರಾಟವಾದವು. ದ್ವಿಚಕ್ರ, ಕಾರು, ಇತರೆ ವಾಹನಗಳ ಬಿಕರಿಗೂ ಬೇಡಿಕೆ ಕಂಡು ಬಂದಿತು.
ಸಗಟು ಹೂವಿನ ಮಾರುಕಟ್ಟೆಯಲ್ಲಿ ಗುಣಮಟ್ಟದ ವಿವಿಧ ವರ್ಣದ ಸೇವಂತಿ, ಕನಕಾಂಬರ, ಮಲ್ಲಿಗೆ, ದುಂಡು ಮಲ್ಲಿಗೆ ಹೂವುಗಳು 5ರಿಂದ 8 ಮಾರಿಗೆ ತಲಾ 1 ಸಾವಿರ ರೂ. ಬೆಲೆ ನಿಗದಿಯಾಗಿತ್ತು.
ಗಾಂಧಿ ವೃತ್ತ, ಖಾಸಗಿ ಬಸ್ ನಿಲ್ದಾಣ ಹಿಂಭಾಗದ ಮಾರುಕಟ್ಟೆಯಲ್ಲಿ ಕಳಶದ ಹಾರ 300ರಿಂದ 500 ರೂ, ವಾಹನಗಳ ಹಾರಕ್ಕೆ 500ರಿಂದ 5 ಸಾವಿರ ರೂ.ವರೆಗೂ ದರವಿತ್ತು. ಗುಲಾಬಿ, ಚೆಂಡು ಹೂ, ಬನ್ನಿ ಮತ್ತು ಬಿಲ್ವ ಪತ್ರೆ, ಬಾಳೆಕಂದು, ವೀಳ್ಯದೆಲೆ, ಕಾಯಿ, ಅಲಂಕಾರಿಕ ವಸ್ತುಗಳಿಗೂ ಬೇಡಿಕೆ ಹೆಚ್ಚಿತ್ತು.
ಬೂದುಗುಂಬಳ ಕೆ.ಜಿ.ಗೆ 25 ರೂ.ರಂತೆ ಗಾತ್ರದ ಆಧಾರದಂತೆ ತಲಾ 100, 150 ರೂ.ನಂತೆ ಖರೀದಿಯಾದವು. ಮಾರುಕಟ್ಟೆಯಲ್ಲಿ ವಹಿವಾಟು ಭರ್ಜರಿಯಾಗಿತ್ತು. ಬಾಳೆ ಕಂದು ಜೋಡಿ 40 ರೂ, ಬಟನ್ಸ್ ಹೂವು ಕೆ.ಜಿಗೆ 500 ರಿಂದ 600 ರೂ, ಮಾವಿನ ಎಲೆಯ ತೋರಣ ಜೋಡಿಗೆ 40 ರೂ. ಇತ್ತು.
ಪ್ರತಿ ಕೆ.ಜಿ.ಗೆ ಸೇಬು 110ರಿಂದ 120 ರೂ., ದಾಳಿಂಬೆ 200 ರೂ., ಮೋಸಂಬಿ 80 ರೂ., ಕಿತ್ತಳೆ ಮತ್ತು ಬಿಕ್ಕೆ ಹಣ್ಣು ತಲಾ 60 ರೂ., ಏಲಕ್ಕಿ ಬಾಳೆ 100 ರೂ. ದರದಂತೆ ಚಿಲ್ಲರೆ ವ್ಯಾಪಾರಸ್ಥರು ಮಾರಾಟ ಮಾಡಿದರು.
ತಾತ್ಕಾಲಿಕ ಮಾರುಕಟ್ಟೆ ಸೃಷ್ಟಿ: ಗಾಂಧಿ ವೃತ್ತ, ಆನೆಬಾಗಿಲು, ಮೆದೇಹಳ್ಳಿ ರಸ್ತೆ, ಸಂತೆ ಹೊಂಡ ಸಮೀಪದ ಪ್ರಮುಖ ರಸ್ತೆಯ ಪಾದಚಾರಿ ಮಾರ್ಗ ಸೇರಿ ಹಲವೆಡೆ ತಾತ್ಕಾಲಿಕ ಮಾರುಕಟ್ಟೆಗಳು ಸೃಷ್ಟಿಯಾಗಿದ್ದವು. ಗ್ರಾಮೀಣ ಭಾಗದ ರೈತರು, ವ್ಯಾಪಾರಿಗಳು ನಗರಕ್ಕೆ ಬಂದು ಬೂದುಗುಂಬಳ, ಮಾವಿನ ಎಲೆ, ತರಕಾರಿ, ಹೂವು, ಹಣ್ಣು, ಸೊಪ್ಪುಗಳನ್ನು ಮಾರಾಟ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದಿತು.