

ಮೈಸೂರು: ರಾಜ್ಯ ಸರ್ಕಾರ ಈ ವರ್ಷ ನಡೆಸಲು ಉದ್ದೇಶಿಸಿರುವ ದಸರಾ ಆಚರಣೆಗಳು ಮತ್ತು ವಿಶೇಷವಾಗಿ ಚಾಮುಂಡಿ ಬೆಟ್ಟದಲಿರುವ ಪವಿತ್ರ ಚಾಮುಂಡೇಶ್ವರಿ ದೇವಸ್ಥಾನದ ಸುತ್ತ ರಾಜಕೀಯವು ನಡೆಯುತ್ತಿರುವ ಸಂಗತಿ ತೀವ್ರ ಬೇಸರ ತಂದಿದೆ ಎಂದು ರಾಜವಂಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದ್ದಾರೆ.
ಈ ವರ್ಷದ ನಾಡಹಬ್ಬ (ಜನತಾ ದಸರಾ) ಉದ್ಘಾಟನೆಗೆ ಆಹ್ವಾನಿಸಲಾದ ಗಣ್ಯರ ಆಯ್ಕೆ ಭಿನ್ನಾಭಿಪ್ರಾಯಗಳಿಗೆ ಎಡೆಮಾಡಿದ್ದು, ಇದನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಚಾಮುಂಡೇಶ್ವರಿ ದೇವಸ್ಥಾನ ಹಿಂದು ಧರ್ಮಕ್ಕೆ ಸೇರಿಲ್ಲ ಎಂಬಂತಹ ಹೇಳಿಕೆಗಳು ಅನಗತ್ಯ ಎಂದು ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.
ದೇವಸ್ಥಾನದಲ್ಲಿ ಹಿಂದು ಧಾರ್ಮಿಕ ಪದ್ಧತಿಗೆ ಅನುಗುಣವಾಗಿ ಪೂಜೆ, ಆಚರಣೆ ನಡೆದರೂ ಹಿಂದಿನಿಂದಲೂ ಅನ್ಯಧರ್ಮೀಯರಿಗೂ ದೇವಸ್ಥಾನದಲ್ಲಿ ಪ್ರವೇಶದ ಅವಕಾಶವಿತ್ತು. ಈಗಲೂ ಇದೆ. ಅದು ಹಿಂದು ದೇವಸ್ಥಾನವಲ್ಲದಿದ್ದರೆ ಅದನ್ನು ಎಂದಿಗೂ ಮುಜರಾಯಿ ಇಲಾಖೆಯ ಅಡಿಯಲ್ಲಿ ತರಲಾಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರದ ದಸರಾ ಒಂದು ಸಾಂಸ್ಕೃತಿಕ ಆಚರಣೆ ಎಂಬುದು ಪರಿಗಣಿತ ಅಭಿಪ್ರಾಯ. ಸರ್ಕಾರದ ವತಿಯಿಂದ ಯಾವುದೇ ಧಾರ್ಮಿಕ ಪಂಗಡದ ಆಚರಣೆಗಳಿಗೆ ಅವಕಾಶವಿಲ್ಲವಾಗಿದ್ದು, ಅಂತಹ ಉತ್ಸವವನ್ನು ನಡೆಸುವಲ್ಲಿ ಧಾರ್ಮಿಕ ಪಾವಿತ್ರ್ಯ, ಸಂಪ್ರದಾಯ ಅಥವಾ ಪರಂಪರೆಯನ್ನು ಪಡೆಯಲು ಸಾಧ್ಯವಿಲ್ಲ. ಈ ಕಾರಣದಿಂದ ರಾಜ್ಯ ಸರ್ಕಾರ ಆಯೋಜಿಸುವ ಆಚರಣೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳೇ ಹೊರತು ಧಾರ್ಮಿಕ ಸಂಪ್ರದಾಯವಾಗಿಲ್ಲ ಎಂದು ಹೇಳಿದ್ದಾರೆ.
ಆಶ್ವಯುಜ ಶರನ್ನವರಾತ್ರಿ ಸಮಯದಲ್ಲಿ ನಾವು ಖಾಸಗಿಯಾಗಿ ನವರಾತ್ರಿ ಸಂಬಂಧ ಆಚರಿಸುವ ಧಾರ್ಮಿಕ ಆಚರಣೆ ಹಳೆಯ ಪದ್ಧತಿ ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿದ್ದು, ಅರಮನೆಯ ಒಳಾಂಗಣದಲ್ಲಿ ಮತ್ತು ಅರಮನೆ ಹೊರಾಂಗಳದಲ್ಲಿ ಶಾಸ್ತ್ರೋಕ್ತವಾಗಿ ಪಾಡ್ಯದಿಂದ ನವಮಿ ಪರ್ಯಂತ ಪೂಜೆ ನಡೆಸಿ ವಿಜಯದಶಮಿ ಆಚರಣೆಯೊಂದಿಗೆ ಪೂರ್ಣಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ಇದೇ ದಿನಗಳಲ್ಲಿ ರಾಜ್ಯ ಸರ್ಕಾರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅರಮನೆ ಮುಂದೆ ಆಯೋಜಿಸಲಾಗಿರುವುದರಿಂದ ನಮ್ಮ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಸಮಯದ ಅತಿಕ್ರಮಣವನ್ನು ತಪ್ಪಿಸಲು, ಶ್ರೀ ಚಾಮುಂಡೇಶ್ವರಿಯ ಉದ್ಘಾಟನೆ ಮತ್ತು ಶ್ರೀ ಚಾಮುಂಡೇಶ್ವರಿಯ ಭವ್ಯ ಮೆರವಣಿಗೆಗೆ ಶುಭ ಮತ್ತು ಸೂಕ್ತ ಸಮಯ ನಿಗದಿಪಡಿಸಲಾಗುತ್ತದೆ.
ಈ ನಿಟ್ಟಿನಲ್ಲಿ ಇಂದಿನ ಗಣೇಶ ಚತುರ್ಥಿಯ ಆಚರಣೆ ಮತ್ತು ಅನುಗ್ರಹದಿಂದ ಎಲ್ಲ ಅಡೆತಡೆಗಳು, ತಪ್ಪು ಕಲ್ಪನೆಗಳು ಮತ್ತು ಸಂಘರ್ಷ ನಿವಾರಣೆಯಾಗಿ ಶೀಘ್ರದಲ್ಲೇ ಒಮ್ಮತ ತಲುಪುತ್ತದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.