ದಸರಾಗೆ ಹೆಣ್ಣಾನೆಗಳ ಆಯ್ಕೆಯೇ ಸವಾಲು: ಹಿರಣ್ಯ, ಲಕ್ಷ್ಮೀ ಕರೆತರುವುದು ಅನುಮಾನ

mysore
Published on

ಮೈಸೂರು: ನಾಡಹಬ್ಬ ಮೈಸೂರು ದಸರಾ ಜಂಬೂ ಸವಾರಿಯ ಪ್ರಮುಖ ಆಕರ್ಷಣೆಯಾದ ಗಜಪಡೆಯ ಹೆಣ್ಣಾನೆ ಆಯ್ಕೆ ಪ್ರಕ್ರಿಯೆ ಈ ಸಲ ಸವಾಲಾಗಿ ಪರಿಣಮಿಸಿದ್ದು, ಗರ್ಭಧಾರಣೆಯಿಂದಾಗಿ ದಸರಾ ಗಜಪಡೆಯಿಂದ ‘ಹಿರಣ್ಯ’ ಹೊರಬೀಳಬಹುದು. ಜತೆಗೆ, ‘ಲಕ್ಷ್ಮೀ’ ಕರೆತರುವುದು ಸಹ ಅನುಮಾನ ಇದೆ.

ಈಗಾಗಲೇ ಆರೋಗ್ಯ ಪರಿಶೀಲಿಸಿದ್ದ ಐದು ಹೆಣ್ಣಾನೆಗಳಲ್ಲಿ ಈ ಎರಡು ಆನೆ ಗರ್ಭಿಣಿಯಾಗಿರುವುದು ದೃಢಪಟ್ಟಿರುವುದರಿಂದ ಈ ಬಾರಿ ಹೊಸ ಹೆಣ್ಣಾನೆಗಳನ್ನು ಕರೆತರಲು ಶೋಧ ನಡೆಸಲಾಗುತ್ತಿದೆ.

ಲಕ್ಷ್ಮೀ ಮತ್ತು ಹಿರಣ್ಯ ಈ ಬಾರಿ ದಸರಾ ಗಜಪಡೆಯಲ್ಲಿ ಸ್ಥಾನ ಪಡೆದುಕೊಳ್ಳುವ ನಿರೀಕ್ಷೆ ಇತ್ತು.

ಕಳೆದ ಸಲ ಜಂಬೂಸವಾರಿ ಮೆರವಣಿಗೆಯಲ್ಲಿ ಅಂಬಾರಿ ಹೊತ್ತ ಅಭಿಮನ್ಯುವಿನ ಎಡ ಮತ್ತು ಬಲಭಾಗದಲ್ಲಿ ಯಶಸ್ವಿಯಾಗಿ ಹೆಜ್ಜೆ ಹಾಕಿದ್ದ ಈ ಆನೆಗಳ ಆರೋಗ್ಯ ತಪಾಸಣೆಯನ್ನೂ ಸಹ ಮಾಡಲಾಗಿತ್ತು. ಆದರೀಗ ಮೂತ್ರ ಪರೀಕ್ಷೆಯಲ್ಲಿ ಈ ಎರಡೂ ಆನೆಗಳು ಗರ್ಭಿಣಿಯಾಗಿರುವುದು ಖಚಿತವಾಗಿದೆ. ಆದರೂ, ಆನೆಗಳ ಗರ್ಭಾವಸ್ಥೆಯ ನಿಖರ ಮಾಹಿತಿ ನೀಡುವ ಗರ್ಭಧಾರಣೆ ತಪಾಸಣಾ ಪರೀಕ್ಷೆ ಮಾಡಿಸಲಾಗಿತ್ತು. ಎರಡು ವಾರದಲ್ಲಿ ಆ ಪರೀಕ್ಷೆಯ ವರದಿ ಬರುವ ನಿರೀಕ್ಷೆಯಲ್ಲಿ ಇದೆ.

ದಸರಾ ಗಜಪಡೆಯಲ್ಲಿ ಕುಮ್ಕಿ ಆನೆಯಾಗಿ ಕರೆದೊಯ್ಯಲು ಗುರುತಿಸಿದ್ದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಂಪುರ ಕ್ಯಾಂಪ್‌ನ ಹಿರಣ್ಯ(48) ಸೇರಿದಂತೆ ಐದು ಆನೆಗಳನ್ನು ಬಂಡೀಪುರದ ಹಳೇ ಕ್ಯಾಂಪಸ್‌ನಲ್ಲಿಟ್ಟು ವಿಶೇಷವಾಗಿ ಆರೈಕೆ ಮಾಡಲಾಗುತ್ತಿತ್ತು. ಆದರೆ, ಇತ್ತೀಚಿಗೆ ಹಿರಣ್ಯಳ ವರ್ತನೆಯಲ್ಲಿ ಬದಲಾವಣೆ ವ್ಯಕ್ತವಾಗಿದೆ. ಮರಿಗೆ ಜನ್ಮ ನೀಡುವಂತೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಹಿರಣ್ಯಳನ್ನು ಕಾಡೊಳಗಿರುವ ರಾಂಪುರನಲ್ಲಿರುವ ಮತ್ತೊಂದು ಕ್ಯಾಂಪ್‌ಗೆ ಸ್ಥಳಾಂತರಿಸಲಾಗಿದೆ.

ಮೈಸೂರು-ಊಟಿ ಮುಖ್ಯರಸ್ತೆ ಬಳಿಯೇ ಬೀಡುಬಿಟ್ಟಿದ್ದ ಹಿರಣ್ಯ, ಮರಿಗೆ ಜನ್ಮ ನೀಡಿದರೆ ವಾಹನಗಳ ಸಂಚಾರದಿಂದ ಕಿರಿಕಿರಿಯುಂಟಾಗಬಹುದೆಂಬ ಮುಂದಾಲೋಚನೆಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಆ ಆನೆಯ ಪರಿಸ್ಥಿತಿ ಗಮನಿಸಿದರೆ ಕೆಲ ದಿನಗಳಲ್ಲೇ ಮರಿಗೆ ಜನ್ಮ ನೀಡುವುದು ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈ ಬಾರಿ ದಸರಾ ಗಜಪಡೆಯಿಂದ ಹಿರಣ್ಯ ಆನೆ ಹೊರಬೀಳುವುದು ನಿಶ್ಚಿತವಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸುಪ್ರಿಂಕೋರ್ಟ್ ಆದೇಶದ ಮೇರೆಗೆ ಹಿರಣ್ಯ ಆನೆಯನ್ನು ಅರಣ್ಯ ಇಲಾಖೆಯು 2021ರಲ್ಲಿ ಕೊಡಗಿನ ಆನೆ ಮನೆ ಫೌಂಡೇಷನ್‌ನಿಂದ ವಶಕ್ಕೆ ಪಡೆದು ರಾಂಪುರ ಕ್ಯಾಂಪ್‌ನಲ್ಲಿ ಪಾಲನೆ ಮಾಡಲಾಗುತ್ತಿತ್ತು.

ಸೌಮ್ಯ ಸ್ವಭಾವಿಯಾಗಿರುವ ಈ ಆನೆ ಎರಡು ಬಾರಿ ದಸರಾದಲ್ಲಿ ಭಾಗವಹಿಸಿತ್ತು. ಕಳೆದ ಸಲ ಕುಮ್ಕಿ ಆನೆಯಾಗಿ ಜವಾಬ್ದಾರಿ ನಿಭಾಯಿಸಿ ಗಮನ ಸೆಳೆದಿತ್ತು.

ಲಕ್ಷ್ಮೀ ಆನೆ ಬರುವುದು ಅನುಮಾನ:

ದಸರಾ ಮಹೋತ್ಸವದಲ್ಲಿ ಪಾಲ್ಗೊಂಡ 3ನೇ ಸಲದಲ್ಲೇ ಲಕ್ಷ್ಮೀ ಮೆಚ್ಚುಗೆ ಪಡೆದುಕೊಂಡಿತ್ತು. ಕುಮ್ಕಿ ಆನೆಯಾಗಿ ಕಳೆದ ವರ್ಷ ಯಶಸ್ವಿಯಾಗಿ ಸಾಗಿದ ರಾಂಪುರ ಕ್ಯಾಂಪ್‌ನ 24 ವರ್ಷದ ಲಕ್ಷ್ಮೀ ಆನೆಯೂ ಪ್ರಸ್ತಕ ದಸರಾ ಗಜಪಡೆಯಲ್ಲಿ ಸ್ಥಾನ ಪಡೆಯುವುದು ಅನುಮಾನ ಇದೆ.

ಆರೋಗ್ಯ ತಪಾಸಣೆ ಹಾಗೂ ಮೂತ್ರ ಪರೀಕ್ಷೆಯಲ್ಲಿ ಲಕ್ಷ್ಮೀ ಆನೆ ಗರ್ಭಿಣಿ ಎಂದು ಪತ್ತೆಯಾಗಿದೆ. ಆದರೂ ಎಷ್ಟು ತಿಂಗಳಾಗಿದೆ ಎಂದು ಖಚಿತಪಡಿಸಿಕೊಳ್ಳಲು ಗರ್ಭಧಾರಣೆ ತಪಾಸಣಾ ಪರೀಕ್ಷೆ ವರದಿಯನ್ನು ಎದುರುನೋಡಲಾಗುತ್ತಿದೆ.

ಗಜಗರ್ಭವು 18ರಿಂದ 22 ತಿಂಗಳಾಗಿದ್ದು, ಒಂದು ವೇಳೆ 10 ತಿಂಗಳಾಗಿದ್ದರೆ ದಸರಾ ಮಹೋತ್ಸವದ ಗಜಪಡೆಯಲ್ಲಿ ಸ್ಥಾನಗಿಟ್ಟಿಸಿಕೊಳ್ಳುವ ಸಾಧ್ಯತೆ ಇದೆ. 12 ತಿಂಗಳು ಮೇಲ್ಪಟ್ಟಿದ್ದರೆ ಗಜಪಡೆಯೊಂದಿಗೆ ಕರೆತಂದರೆ, ಇಲ್ಲಿ ನೀಡುವ ಪೌಷ್ಠಿಕ ಆಹಾರ ಹಾಗೂ ತಾಲೀಮಿನಿಂದ ಅವಧಿ ಪೂರ್ವ ಹೆರಿಗೆ ಆಗಬಹುದು. ಆದ್ದರಿಂದ ಅರಣ್ಯಾಧಿಕಾರಿಗಳು ಎಚ್ಚರಿಕೆಯಿಂದ ಹೆಜ್ಜೆ ಇಡುವುದಕ್ಕೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆನೆ ಕ್ಯಾಂಪ್‌ಗಳಲ್ಲಿರುವ ಎಲ್ಲ ಆನೆಗಳನ್ನು ರಾತ್ರಿ ವೇಳೆ ಮೇಯಲು ಕಾಡಿಗೆ ಬಿಡಲಾಗುತ್ತದೆ. ಈ ವೇಳೆ ಹೆಣ್ಣಾನೆಗಳು ಕಾಡಿನ ಗಂಡಾನೆಗಳ ಸಂಪರ್ಕಕ್ಕೆ ಬರುತ್ತವೆ. ಆ ಕಾರಣದಿಂದ ಹೆಣ್ಣಾನೆಗಳು ಗರ್ಭಿಣಿಯಾಗುತ್ತವೆ. ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಗಜಪಡೆಯಲ್ಲಿ ಕರೆತರುವಾಗ ಅರಣ್ಯ ಇಲಾಖೆ ಸೂಕ್ಷ್ಮವಾಗಿ ಹೆಜ್ಜೆ ಇಡಬೇಕಾಗುತ್ತದೆ.

 ಅರಮನೆ ಆವರಣದಲ್ಲೇ ಮರಿಗೆ ಜನ್ಮ:

2019ರಲ್ಲಿ 18 ವರ್ಷ ವಯಸ್ಸಲ್ಲೇ ಮೊದಲ ಬಾರಿಗೆ ಆಗಮಿಸಿದ್ದ ಲಕ್ಷ್ಮೀ ಸಿಡಿಮದ್ದು ಶಬ್ದಕ್ಕೆ ಹೆದರಿತ್ತು. ಈ ಹಿನ್ನೆಲೆಯಲ್ಲಿ ಆ ವರ್ಷ ಜಂಬೂಸವಾರಿ ಮೆರವಣಿಗೆಯಿಂದ ಅದಕ್ಕೆ ವಿನಾಯಿತಿ ನೀಡಿ ಅರಮನೆ ಆವರಣದಲ್ಲೇ ಕಟ್ಟಿಹಾಕಲಾಗಿತ್ತು.

2022ರಲ್ಲಿ 2ನೇ ಬಾರಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಲಕ್ಷ್ಮೀ ಅರಮನೆ ಆವರಣದಲ್ಲೇ ಗಂಡು ಮರಿಗೆ ಜನ್ಮ ನೀಡಿತ್ತು. ಆ ಮರಿಗೆ ರಾಜವಂಸ್ಥರು ‘ದತ್ತಾತ್ರೇಯ’ ಎಂದು ನಾಮರಣ ಮಾಡಿದ್ದರು. ಕಳೆದ ವರ್ಷ ಕುಮ್ಕಿ ಆನೆಯಾಗಿ ಸಾಗುವ ಮಹತ್ತರ ಜವಾಬ್ದಾರಿ ನಿರ್ವಹಣೆ ಮಾಡಿತ್ತು.

ಪದ್ಮಜಾ ಲಕ್ಷ್ಮೀ ಆದ ಕಥೆ:

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮಂಗಲ ರಸ್ತೆಯಲ್ಲಿ ತಾಯಿಯಿಂದ ಬೇರ್ಪಟ್ಟಿದ್ದ 4 ತಿಂಗಳ ಮರಿಯನ್ನು 2002ರಲ್ಲಿ ರಕ್ಷಣೆ ಮಾಡಿದ್ದ ಅರಣ್ಯ ಸಿಬ್ಬಂದಿ, ಅದನ್ನು ಪಾಲನೆ ಮಾಡಲು ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಹೋದರಿ ವಿಶಾಲಾಕ್ಷ್ಮೀ ದೇವಿ ಅವರ ಸುಪರ್ದಿಗೆ ಒಪ್ಪಿಸಿದ್ದರು.

ಅವರು ಆ ಮರಿಗೆ ಪದ್ಮಜಾ ಎಂದು ನಾಮಕರಣ ಮಾಡಿದ್ದರು. ಮತ್ತೆ ಆ ಆನೆಯನ್ನು ಅರಣ್ಯ ಇಲಾಖೆ ತನ್ನ ಸುಪರ್ಧಿಗೆ ತೆಗೆದುಕೊಂಡ ನಂತರ ಪದ್ಮಜಾಳಿಗೆ ಲಕ್ಷ್ಮೀ ಎಂದು ಮರು ನಾಮಕರಣ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net