

ಚಿಕ್ಕಬಳ್ಳಾಪುರ : ನಾಡಹಬ್ಬ ದಸರಾದಲ್ಲಿ ಮೈಸೂರಿನ ರಾಜಪಥದಲ್ಲಿ ಸಾಗಬೇಕಿದ್ದ ಜಿಲ್ಲೆಯ ವಿಶೇಷತೆಯನ್ನು ಬಿಂಬಿಸುವ ಸ್ತಬ್ಧಚಿತ್ರ ತಯಾರಿಕೆಯನ್ನು ಜಿಲ್ಲಾಡಳಿತ ಕೈಬಿಟ್ಟಿದೆ, ಕರೊನಾ ಹಿನ್ನೆಲೆಯಲ್ಲಿ ಈ ಬಾರಿಯ ದಸರಾವನ್ನು ಸರಳವಾಗಿ ಆಚರಿಸಲಾಗುತ್ತಿದ್ದು ಸರ್ಕಾರದ ಆದೇಶದಂತೆ ಮೆರವಣಿಗೆ ರದ್ದುಮಾಡಲಾಗಿದೆ.
ಈ ಬಾರಿ ಆಕರ್ಷ ಸ್ತಬ್ಧಚಿತ್ರ ನಿರ್ಮಾಣಕ್ಕೆ ಜಿಲ್ಲಾಡಳಿತ 10 ಲಕ್ಷ ರೂ ಮತ್ತು ದಸರಾ ಮಹೋತ್ಸವದಲ್ಲಿ ಮಳಿಗೆ ತೆರೆಯಲು 4 ಲಕ್ಷ ರೂ.ಮೀಸಲಿಟ್ಟಿತ್ತು. ವಿಶೇಷತೆಯನ್ನು ಸಾರುವ ಸ್ತಬ್ಧಚಿತ್ರ ರೂಪಿಸುವಷ್ಟರಲ್ಲಿ ಮೆರವಣಿಗೆಯೇ ರದ್ದಾಗಿದೆ.ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ನಾಡಿನ ಕಲೆ, ಸಂಸ್ಕೃತಿ, ಪರಂಪರೆಯನ್ನು ಸಾರುವ ಸ್ತಬ್ಧಚಿತ್ರಗಳ ಮೆರವಣಿಗೆಯೂ ಒಂದು. ರಾಜ್ಯದ 30 ಜಿಲ್ಲೆಗಳಿಂದಲೂ ಒಂದೊಂದು ಸ್ತಬ್ಧ ಚಿತ್ರ ಮೆರವಣಿಗೆಯಲ್ಲಿ ಭಾಗವಹಿಸುತ್ತದೆ, ಆದರೆ ಈ ಬಾರಿ ಕರೊನಾ ಸೋಂಕು ಅಡ್ಡಿಯಾಗಿದೆ.
ಕಳೆದ ವರ್ಷ ಜಿಲ್ಲಾಡಳಿತ ಚಿಕ್ಕಬಳ್ಳಾಪುರ ಸಿಲ್ಕ್‌ಗೆ ಹೆಸರುವಾಸಿಯಾಗಿರುವುದನ್ನು ಗಮನದಲ್ಲಿಸಿರಿಕೊಂಡು ಆಕರ್ಷಕ ಸ್ತಬ್ಧಚಿತ್ರ ಕಳುಹಿಸಿತ್ತು, ಗೌರಿಬಿದನೂರಿನ ವಿದುರಾಶ್ವತ್ಥದ ಅಶ್ವತ್ಥನಾರಾಯಣ ದೇಗುಲ, ಚಿಕ್ಕಬಳ್ಳಾಪುರ ತಾಲೂಕಿನ ರಂಗಸ್ಥಳದ ಶ್ರೀ ರಂಗನಾಥಸ್ವಾಮಿ ದೇಗುಲ, ಚಿಂತಾಮಣಿ ಪಂಚಲಿಂಗಗಳ ಕ್ಷೇತ್ರ ಕೈವಾರದ ಕಾಲಜ್ಞಾನಿ ಶ್ರೀಕೈವಾರ ತಾತಯ್ಯನವರ ಸ್ತಬ್ದಚಿತ್ರ, ಪ್ರವಾಸಿತಾಣ ನಂದಿಗಿರಿಧಾಮ, ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಜನ್ಮಸ್ಥಳ ಮುದ್ದೇನಹಳ್ಳಿ, ವೈಚಾರಿಕ ಶಿಕ್ಷಣ ತಜ್ಞ ಡಾ.ಎಚ್.ನರಸಿಂಹಯ್ಯ, ವಿದುರಾಶ್ವತ್ಥದ ವೀರಸೌಧ ಸ್ತಬ್ಧಚಿತ್ರಗಳು ಈ ಹಿಂದಿನ ದಸರಾ ಜಂಜೂಸವಾರಿಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.