

ಮೈಸೂರು: ದಸರಾ ಗಜಪಡೆಯೊಂದಿಗೆ 2ನೇ ತಂಡ ಶೀಘ್ರದಲ್ಲೇ ಸೇರಿಕೊಳ್ಳಲಿದೆ. ಅರಮನೆ ಅಂಗಳದಲ್ಲಿ ಈಗಾಗಲೇ ಬೀಡುಬಿಟ್ಟಿರುವ ಆನೆ ಗಳು ನಿತ್ಯ ತಾಲೀಮು ನಡೆಸಿವೆ. ಸೆ.7ರಂದು 2ನೇ ಆನೆಗಳ ತಂಡ ಕೂಡ ಆಗಮಿಸಲಿದೆ. ಎರಡನೇ ಹಂತದಲ್ಲಿ 4 ಆನೆಗಳನ್ನು ಕರೆತರಲು ಅರಣ್ಯ ಇಲಾಖೆ ತೀರ್ಮಾನಿಸಿದೆ. ದುಬಾರೆ ಕ್ಯಾಂಪ್‌ನಿಂದ ವಿಕ್ರಮ್(59), ಶ್ರೀರಾಮ(40) ಹಾಗೂ ವಿಜಯ(63) ಮತ್ತು ರಾಂಪುರ ಕ್ಯಾಂಪ್‌ನಿಂದ ಪಾರ್ಥಸಾರಥಿ(18)ಯನ್ನು ಕರೆತರಲಾಗುತ್ತದೆ.
ಕಾಡಿನಿಂದ ನಾಡಿಗೆ ಬಂದಿರುವ ಅಂಬಾರಿ ಆನೆ ಅಭಿಮನ್ಯು, ಹೊಸ ಆನೆ ಮಹೇಂದ್ರ, ಕುಮ್ಕಿ ಆನೆಗಳಾದ ಕಾವೇರಿ, ಚೈತ್ರಾ, ಲಕ್ಷ್ಮೀ, ಮಾಜಿ ಕ್ಯಾಪ್ಟನ್ ಅರ್ಜುನ, ಇತರ ಆನೆಗಳಾದ ಗೋಪಾಲಸ್ವಾಮಿ, ಧನಂಜಯ, ಭೀಮ ನಗರದ ವಾತಾವರಣಕ್ಕೆ ಹೊಂದಿಕೊಳ್ಳುತ್ತಿವೆ. ಇವುಗಳೊಂದಿಗೆ ಹಳೆ ಸಂಗಾತಿಗಳು ಸೇರ್ಪಡೆಯಾಗಲಿವೆ. ಇದರಿಂದ 13 ಆನೆಗಳು ಬಂದಂತಾಗಲಿದೆ.
ನವರಾತ್ರಿಗೂ ಮುನ್ನವೇ ದೀಪಾಲಂಕಾರ:
ಗಜಪಡೆಗೆ ದೀಪಾಲಂಕಾರದ ಬೆಳಕಿನ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಈ ಬಾರಿ ನವರಾತ್ರಿ ಆರಂಭಕ್ಕೂ 5 ದಿನ ಮುನ್ನವೇ ವಿಜಯದಶಮಿ ಮೆರವಣಿಗೆ ಸಾಗುವ ರಾಜಬೀದಿಯಲ್ಲಿ ದೀಪಾಲಂಕಾರ ಮಾಡಲಾಗುತ್ತಿದೆ
ಈ ಸಲವೂ ದೀಪಾಲಂಕಾರ ನೋಡಲು ಜನಜಂಗುಳಿ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ದೀಪಾಲಂಕಾರದ ಬೆಳಕಿನಲ್ಲಿ ಗಜ ಪಡೆಗೆ ತಾಲೀಮು ನಡೆಸುವುದಕ್ಕೆ ಯೋಚಿಸಲಾಗಿದೆ. ಅದಕ್ಕಾಗಿ 5 ದಿನ ಮುನ್ನವೇ ಅರಮನೆಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಜಂಬೂಸವಾರಿ ಮಾರ್ಗದಲ್ಲಿ ದೀಪಾಲಂಕಾರದ ವ್ಯವಸ್ಥೆ ಮಾಡಿಕೊಡುವಂತೆ ಅರಣ್ಯ ಇಲಾಖೆ ವಿನಂತಿಸಿದೆ. ಇದಕ್ಕೆ ಜಿಲ್ಲಾಡಳಿತ ಸಕಾರಾತ್ಮಕವಾಗಿ ಸ್ಪಂದಿಸಿದೆ.
ಈಗಾಗಲೇ ಮೊದಲ ತಂಡದ ಆನೆಗಳು ಸಂಜೆ ವೇಳೆ ತಾಲೀಮಿನಲ್ಲಿ ಪಾಲ್ಗೊಳ್ಳುತ್ತಿದ್ದು, ಬೀದಿ ದೀಪ, ವಾಹನಗಳ ಲೈಟ್ ಬೆಳಕಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿವೆಯಾದರೂ, ದೀಪಾಲಂಕಾರದ ಬೆಳಕು ಹೆಚ್ಚಾಗಿ ಪ್ರಕಾಶಿಸುತ್ತದೆ. ಪ್ರಖರ ಬೆಳಕಿನ ವಾತಾವರಣಕ್ಕೆ ಹೊಸ ಆನೆಗಳು ಹೊಂದಿಕೊಳ್ಳುವಂತೆ ಮಾಡಲು ಈ ಕ್ರಮ ವಹಿಸಲಾಗುತ್ತಿದೆ.
3ನೇ ಹಂತದ ತಾಲೀಮಿಗೆ ಚಾಲನೆ
ಗಜಪಡೆಗೆ 3ನೇ ಹಂತದ ಭಾರ ಹೊರಿಸುವ ತಾಲೀಮು ಶುರು ಮಾಡಲಾಗಿದೆ. ಈಗಾಗಲೇ 2ನೇ ಹಂತದ ಭಾ ರ ಹೊರಿಸುವ ತಾಲೀಮು ಪೂರ್ಣಗೊಂಡಿದೆ. 3ನೇ ಹಂತದ ಭಾರ ಹೊರಿಸುವ ತಾಲೀಮಿಗೆ ಚಾಲನೆ ನೀಡಲಾಗಿದೆ
ಜಂಬೂಸವಾರಿ ಸಮೀಪಿಸುತ್ತಿರುವುದರಿಂದ ಚಿನ್ನದ ಅಂಬಾರಿ ತೂಕದಷ್ಟು ಭಾರ ಹೊರಿಸಿ ಅಭ್ಯಾಸ ಮಾಡಿಸಬೇಕಾಗಿದೆ. ಈ ಹಿನ್ನೆಲೆ ಯಲ್ಲಿ 3ನೇ ಹಂತದ ತಾಲೀಮಲ್ಲಿ 750 ಕೆ.ಜಿ ತೂಕದ ಮರಳಿನ ಮೂಟೆ ಇಟ್ಟು ಆನೆಗಳಿಗೆ ಅಭ್ಯಾಸ ಮಾಡಿಸಲಾಯಿತು. ಈ ಹಂತದ ಅಭ್ಯಾಸ ಸೆ.4ರಂದು ಪೂರ್ಣಗೊಳ್ಳಲಿದ್ದು, ಸೆ.5ರಿಂದ 5ನೇ ಹಂತದಲ್ಲಿ ಮರದ ಅಂಬಾರಿ ಹೊರಿಸಿ ತಾಲೀಮಿಗೆ ಕರೆದೊಯ್ಯಲಾಗುತ್ತದೆ. ಮೊದಲ ತಂಡದಲ್ಲಿ ಆಗಮಿಸಿರುವ ಗಂಡಾನೆಗಳಾದ ಅಭಿಮನ್ಯು, ಗೋಪಾಲಸ್ವಾಮಿ, ಧನಂಜಯ, ಭೀಮ ಹಾಗೂ ಮಹೇಂದ್ರ ಆನೆ ಗಳಿಗೂ ಮರದ ಅಂಬಾರಿ ಹೊರಿಸುವ ತಾಲೀಮು ನಡೆಸಲಾಗುತ್ತದೆ.