ದಸರಾ ಸಿದ್ಧತೆ ತ್ವರಿತವಾಗಿ ಆಗಲಿ

16 Chn 1
Published on

ಚಾಮರಾಜನಗರ: ಜಿಲ್ಲಾ ದಸರಾ ಪೂಜಾ ಕೈಂಕರ್ಯ, ವೇದಿಕೆ ಸಿದ್ಧತೆ, ಕಲಾತಂಡಗಳ ಮೆರವಣಿಗೆ ಸೇರಿದಂತೆ ಇತರ ಕಾರ್ಯಕ್ರಮಗಳಿಗೆ ಪೂರ್ವ ಸಿದ್ಧತೆಯನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸೂಚಿಸಿದರು.


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ದಸರಾ, ಮಹದೇಶ್ವರಬೆಟ್ಟದ ಮಹಾಲಯ ಅಮಾವಾಸ್ಯೆ, ದೀಪಾವಳಿ ಜಾತ್ರಾ ಮಹೋತ್ಸವ ಸಿದ್ಧತೆ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ತಾಲೂಕು ಮಟ್ಟದ ದಸರಾ ಕಾರ್ಯಕ್ರಮಗಳಿಗೂ ಸೂಕ್ತ ಏರ್ಪಾಡುಗಳನ್ನು ಮಾಡಿಕೊಳ್ಳಬೇಕು. ಚಾಮರಾಜನಗರ ಪಟ್ಟಣದಲ್ಲಿ ಆಕರ್ಷಕ ದೀಪಾಲಂಕಾರ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ತ್ವರಿತವಾಗಿ ಪ್ರಕ್ರಿಯೆ ಆರಂಭಿಸಬೇಕು ಎಂದರು.


ಲಪುಷ್ಪ ಪ್ರದರ್ಶನ ಸಹ ಜಿಲ್ಲಾಡಳಿತ ಭವನದ ಆವರಣದಲ್ಲಿ ಏರ್ಪಾಡಾಗುತ್ತಿದ್ದು, ಇದರಲ್ಲಿ ವಿವಿಧ ಇಲಾಖೆಗಳು ಜಾಗೃತಿ ಹಾಗೂ ಇಲಾಖೆ ಯೋಜನೆಯ ಬಗ್ಗೆ ತಿಳಿಸಿಕೊಡುವ ಕೆಲಸವೂ ಆಗಬೇಕು. ರೈತ ದಸರಾ, ಮಹಿಳಾ ದಸರಾ, ಮ್ಯಾರಥಾನ್ ಸೇರಿದಂತೆ ಇನ್ನಿತರ ದಸರಾ ಅಂಗವಾಗಿ ಈಗಾಗಲೇ ಸೂಚಿಸಿರುವ ಎಲ್ಲ ಕಾರ್ಯಕ್ರಮಗಳಿಗೆ ಕೂಡಲೇ ಪ್ರಕ್ರಿಯೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸೂಚಿಸಿದರು.


ಇದಾದ ಬಳಿಕ ಮಲೆ ಮಹದೇಶ್ವರಬೆಟ್ಟದಲ್ಲಿ ನಡೆಯಲಿರುವ ಮಹಾಲಯ ಅಮಾವಾಸ್ಯೆ, ದಸರಾ ದೀಪಾವಳಿ, ಕಾರ್ತಿಕ ಮಾಸದ ಜಾತ್ರಾ ಮಹೋತ್ಸವದ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ಪರಿಶೀಲಿಸಿದರು.


ಭಕ್ತರ ಸೌಲಭ್ಯಕ್ಕಾಗಿ ಕೈಗೊಳ್ಳಲಾಗಿರುವ ಕುಡಿಯುವ ನೀರು, ವಾಸ್ತವ್ಯ, ದಾಸೋಹ, ಬಸ್‌ಗಳ ನಿಯೋಜನೆ, ಶೌಚ, ಸ್ನಾನಗೃಹಗಳ ವ್ಯವಸ್ಥೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.


ಜಾತ್ರಾ ಸಂದರ್ಭದಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ, ಸುಗಮ ಸಂಚಾರ, ವಾಹನಗಳ ನಿಲುಗಡೆ, ಮಾಹಿತಿ ಕೇಂದ್ರಗಳು ಸೇರಿದಂತೆ ಇನ್ನಿತರ ಸಿದ್ಧತೆಗಳನ್ನು ಡಿಸಿ ಚಾರುಲತಾ ಸೋಮಲ್ ಪರಿಶೀಲಿಸಿದರು.


ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ, ಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಸ್.ಕಾತ್ಯಾಯಿನಿದೇವಿ, ಉಪಕಾರ್ಯದರ್ಶಿ ಬಸವರಾಜು, ಎಎಸ್ಪಿ ಕೆ.ಎಸ್.ಸುಂದರ್‌ರಾಜ್, ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ, ತಹಸೀಲ್ದಾರ್ ಬಸವರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಲಿಂಗಯ್ಯ ಇತರ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net