ದಸರಾ ವೇದಿಕೆಯಲ್ಲಿ ನಾಲ್ವಡಿ ಜಯಂತಿ : ಪ್ರೊ. ನಂಜರಾಜೇ ಅರಸ್ ತೀವ್ರ ಅಸಮಾಧಾನ

nanjaraje urs
Published on

ಮೈಸೂರು: ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿಯನ್ನು ಅರಮನೆ ವೇದಿಕೆಯಲ್ಲಿ ಸೆ.30ರಂದು ಒಂದು ಗಂಟೆ ಕಾರ್ಯಕ್ರಮಕ್ಕೆ ಸೀಮಿತಗೊಳಿಸಲು ಜಿಲ್ಲಾಡಳಿತ ಮುಂದಾಗಿರುವುದು ಸರಿಯಲ್ಲ ಎಂದು ಇತಿಹಾಸತಜ್ಞ ಪ್ರೊ.ಪಿ.ವಿ. ನಂಜರಾಜೇ ಅರಸ್ ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿವರ್ಷ ಕಲಾಮಂದಿರದಲ್ಲಿ ಜೂ.4 ರಂದು ಅದ್ಧೂರಿಯಾಗಿ ನಾಲ್ವಡಿ ಅವರ ಜಯಂತಿಯನ್ನು ಆಚರಿಸಲಾಗುತ್ತದೆ. ಆದರೆ, ಈ ಬಾರಿ ಚುನಾ ವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡಲಾಯಿತು. ನಮ್ಮ ಹೋರಾಟದ ನಂತರ ಇದೀಗ ನಾಲ್ವಡಿ ಜಯಂತಿ ಆಚರಿಸಲು ಜಿಲ್ಲಾಡಳಿತ ಮುಂದಾಗಿದೆ. ಆದರೆ, ಜಯಂತಿಯನ್ನು ದಸರಾ ವೇದಿಕೆಯಲ್ಲಿ ಹಮ್ಮಿಕೊಂಡಿರುವುದು ಸರಿಯಲ್ಲ. ಜಯಂತಿ ಆಚರಣೆಗೆ ಪ್ರತ್ಯೇಕ ಅನುದಾನವಿದ್ದು, ದಸರಾ ಕಾರ್ಯಕ್ರಮದ ನಡುವೆ ಜಯಂತಿ ಆಚರಿಸಿ ಕೈ ತೊಳೆದುಕೊಳ್ಳುವುದು ಸರಿಯಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಬಲ ಸಮುದಾಯಗಳಿಗೆ ಸೇರಿದ ಮಹಾನ್ ವ್ಯಕ್ತಿಗಳ ಜಯಂತಿಯನ್ನು ಸರ್ಕಾರ ಹೆಚ್ಚು ಆಸಕ್ತಿ ಕೊಟ್ಟು ಆಚರಿಸುತ್ತದೆ. ಆದರೆ, ಅರಸು ಸಮುದಾಯ ರಾಜಕೀಯವಾಗಿ ಪ್ರಬಲವಿಲ್ಲದ ಕಾರಣ ನಾಲ್ವಡಿ ಜಯಂತಿಯನ್ನು ನಿರ್ಲಕ್ಷಿಸಲಾಗುತ್ತಿದೆ. ಈ ವಿಚಾರದಲ್ಲಿ ಉಸ್ತುವಾರಿ ಸಚಿವರು ಉಡಾಫೆಯಿಂದ ವರ್ತಿಸುವುದನ್ನು ಬಿಡಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಪುರುಷೋತ್ತಮ್, ಒಕ್ಕಲಿಗರ ವಿಕಾಸ ವೇದಿಕೆ ಅಧ್ಯಕ್ಷೆ ಯಮುನಾ, ಕನ್ನಡ ಜಾಗೃತಿ ಸಮಿತಿ ಸದಸ್ಯ ಅರವಿಂದ ಶರ್ಮ, ಭಾರತೀಯ ವಿದ್ಯಾರ್ಥಿ ಸಂಘದ ಸಂಯೋಜಕ ನಾರಾಯಣ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net