ದಸರಾ ವಿಜೃಂಭಣೆ ಆಚರಣೆಗೆ ಸರ್ಕಾರಕ್ಕೆ 30 ಕೋಟಿ ರೂ. ಪ್ರಸ್ತಾವನೆ: ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ

6
Published on

ಮೈಸೂರು: ನಾಡಹಬ್ಬ ದಸರಾವನ್ನು ಅದ್ದೂರಿಯಾಗಿ ಆಚರಿಸಲು ಸರ್ಕಾರ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಈ ಬಾರಿ ವಿಜೃಂಭಣೆಯ ಆಚರಣೆಗಾಗಿ 30 ಕೋಟಿ ರೂ. ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ದಸರಾ ಸಿದ್ಧತೆ ಕುರಿತಂತೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಮೈಸೂರು, ಚಾಮರಾಜನಗರ, ಮಂಡ್ಯ ಜನಪ್ರತಿನಿಧಿಗಳ ಪೂರ್ವಭಾವಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
2023ರ ದಸರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ದಸರೆಗೆ ಮುಖ್ಯಮಂತ್ರಿಗಳು ಹಣ ಕೊಡುವ ನಂಬಿಕೆ ಇದೆ. ಮಂಗಳವಾರ ಅಥವಾ ಬುಧವಾರ ಭೇಟಿ ಮಾಡಿ ಬೇಡಿಕೆ ಸಲ್ಲಿಸಲಾಗುವುದು. ಮುಂಚಿತವಾಗಿ ಹಣ ನೀಡಿದರೆ ದಸರಾ ಕೆಲಸಗಳನ್ನು ಆರಂಭಿಸಲು ಸುಲಭವಾಗುತ್ತದೆ ಎಂದರು.
ಕಳೆದ ವರ್ಷ ಚಾಮರಾಜನಗರ ಮತ್ತು ಶ್ರೀರಂಗಪಟ್ಟಣ ದಸರಾಗೆ ತಲಾ ಒಂದು ಕೋಟಿ ರೂ. ಅನುದಾನ ನೀಡಲಾಗಿತ್ತು. ಅದನ್ನು 2 ಕೋಟಿ ರೂ.ಗೆ ಹೆಚ್ಚಿಸುವಂತೆ ಶಾಸಕರು ಮನವಿ ಮಾಡಿದ್ದಾರೆ. ಮೈಸೂರು ಜಿಲ್ಲೆಯಲ್ಲಿ ತಾಲೂಕು ದಸರಾ ಆಚರಣೆಗೆ ಪ್ರತಿ ತಾಲೂಕಿಗೆ 10 ಲಕ್ಷ ರೂ. ನೀಡಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.

16 ಸಮಿತಿಗಳ ರಚನೆ:
ದಸರಾ ಆಚರಣೆಯಲ್ಲಿ ಯಾವುದೇ ಲೋಪವಾಗದಂತೆ ವ್ಯವಸ್ಥಿತವಾಗಿ ಸಿದ್ಧತೆ ಮಾಡಿಕೊಳ್ಳಲು ದಸರಾ ಕಾರ್ಯಕಾರಿ ಸಮಿತಿ ರಚಿಸಲಾಗುವುದು. 16 ವಿವಿಧ ಸಮಿತಿಗಳನ್ನು ನಿಯೋಜಿಸಲು ಚರ್ಚಿಸಲಾಗಿದ್ದು, ಹೆಚ್ಚುವರಿ 3 ಸಮಿತಿಗಳನ್ನು ರಚಿಸುವ ಕುರಿತು ಚರ್ಚೆ ನಡೆಸಲಾಗಿದೆ ಎಂದು ಸಚಿವರು ಹೇಳಿದರು.
ದಸರಾದಲ್ಲಿ ದೀಪಾಲಂಕಾರವೇ ಆಕರ್ಷಣೆ ಅಗಿರುವುದರಿಂದ ಅದಕ್ಕಾಗಿ 7 ಕೋಟಿ ರೂ. ನೀಡುವಂತೆ ಪ್ರಸ್ತಾವನೆ ಬಂದಿದೆ. ಕಳೆದ ಬಾರಿ 6.5 ಕೋಟಿ ರೂ. ಅನುದಾನ ನೀಡಲಾಗಿತ್ತು. ಈ ಬಾರಿ ಹೆಚ್ಚಿನ ಅನುದಾನ ನೀಡುವಂತೆ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರು ಕೋರಿದ್ದಾರೆ ಎಂದರು.
ದೀಪಾಲಂಕಾರದಲ್ಲಿ 5 ಗ್ಯಾರಂಟಿಗಳ ಪರಿಚಯ ಇರಲಿದೆ. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಖಾಸಗಿ ಸಹಭಾಗಿತ್ವ ಮತ್ತು ಸಿಎಸ್‌ಆರ್ ಅನುದಾನವನ್ನು ದಸರಾಗೆ ಬಳಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ದಸರಾ ಕ್ರೀಡಾಕೂಟದಲ್ಲಿ 32 ಕ್ರೀಡೆಗಳು ಇರಲಿದ್ದು, 8 ಕೋಟಿ ರೂ. ಅನುದಾನ ನೀಡುವಂತೆ ಇಲಾಖೆಯಿಂದ ಬೇಡಿಕೆ ಬಂದಿದೆ. ಕ್ರೀಡಾಪಟುಗಳಿಗೆ ಯಾವುದೇ ಅನನುಕೂಲ ಆಗದಂತೆ, ಹಿಂದಿನ ವರ್ಷದ ಲೋಪಗಳು ಮರುಕಳಿಸದಂತೆ ಎಚ್ಚರ ವಹಿಸಲಾಗುವುದು ಎಂದು ತಿಳಿಸಿದರು.
ಶಕ್ತಿ ಯೋಜನೆಯಿಂದ ಹೆಚ್ಚು ಮಹಿಳೆಯರು ದಸರಾದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಅವರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಜಿಲ್ಲಾಡಳಿತ ಕ್ರಮ ವಹಿಸಲಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಡಲಾಗುವುದು. ಹೋಟೆಲ್ ಮಾಲೀಕರ ಸಭೆ ನಡೆಸಲಾಗುವುದು. ಮೈಸೂರು, ಚಿಕ್ಕಮಗಳೂರು, ಮಂಡ್ಯ, ಹಾಸನ, ಚಿಕ್ಕಮಗಳೂರು ಸೇರಿದಂತೆ ಟೂರಿಸ್ಟ್ ಸರ್ಕೀಟ್ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು. ಆಹಾರ ಮೇಳ, ಯುವ ದಸರಾಗೆ ಸೀಮಿತ ಮಾಡದೆ ಸಾಂಸ್ಕೃತಿಕ, ಸಾಹಿತ್ಯ, ಕ್ರೀಡೆಗೆ ಒತ್ತು ಕೊಡಲಾಗುವುದು ಎಂದು ಹೇಳಿದರು.

ಸೆ. 1ರಂದು ಗಜಪಯಣ
ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆಯಾದ ದಸರಾ ಗಜಪಯಣ ಸೆಪ್ಟೆಂಬರ್ 1 ರಂದು ಹುಣಸೂರು ತಾಲೂಕಿನ ವೀರನಹೊಸಳ್ಳಿಯಲ್ಲಿ ನಡೆಯಲಿದೆ ಎಂದು ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ಗಜಪಯಣದ ಮೊದಲ ತಂಡದಲ್ಲಿ 9 ಆನೆಗಳು ಬರಲಿವೆ. ಅವುಗಳನ್ನು ಸೆ. 4ರಂದು ಅರಮನೆಗೆ ಸ್ವಾಗತಿಸಲಾಗುವುದು. ಎರಡನೇ ಹಂತದಲ್ಲಿ 5 ಆನೆಗಳು ಬರಲಿವೆ ಎಂದು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net