

ಮೈಸೂರು: ನಗರದ ದಸರಾ ವಸ್ತುಪ್ರದರ್ಶನದಲ್ಲಿ ದೇಶದ ಸಂಸ್ಕೃತಿ ಮತ್ತು ಪರಂಪರೆ ಪ್ರತಿನಿಧಿಸುವ ಫ್ಯೂಚರ್ ಮಾಡೆಲ್ ಆಫ್ ಇಂಡಿಯಾ ಸೀಸನ್-3 ಫ್ಯಾಷನ್ ಷೋ ಸ್ಪರ್ಧೆಯನ್ನು ಡಿ.18ರಂದು ಆಯೋಜಿಸಲಾಗಿದೆ.
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ, ತಿಬ್ಬಾಸ್ ಗ್ರೂಪ್ ಸಹಯೋಗದಲ್ಲಿ ಏರ್ಪಡಿಸಲಾಗಿದೆ. ಫ್ಯಾಷನ್ ಎಂದ ತಕ್ಷಣ ಅನೇಕರ ಮನಸ್ಸಲ್ಲಿ ಹಲವು ರೀತಿಯ ಆಲೋಚನೆ ಬರುತ್ತವೆ. ಆದರೆ, ಈ ಸ್ಪರ್ಧೆಯಲ್ಲಿ ನಮ್ಮ ದೇಶದ ಉಡುಗೆ ತೊಡುಗೆ, ಆಚಾರ ವಿಚಾರ ಪಸರಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್‌ಗೌಡ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಿಬ್ಬಾಸ್ ಗ್ರೂಪ್ ಮಾಡಲಿಂಗ್ ಕಂಪನಿಯ ಸಂಸ್ಥಾಪಕ ಡಿ.ಸಿ.ನಾಗೇಶ್ ಮಾತನಾಡಿ, 17 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. 1 ವರ್ಷದಿಂದ 75 ವರ್ಷ ವಯಸ್ಸಿನ ಎಲ್ಲ ಆಸಕ್ತ ಫ್ಯಾಷನ್ ಸ್ಪರ್ಧಾರ್ಥಿಗಳು ಭಾಗವಹಿಸಬಹುದು. ಈಗಾಗಲೇ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಡಿ.17ರವರೆಗೂ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಸ್ಪರ್ಧೆಯಲ್ಲಿ ಭಾಗವಹಿಸಿದ ಉತ್ತಮ ಜೋಡಿಗಳಿಗೆ ಸಮಾರಂಭ ನಡೆಯುವ ದಿನದಂದು ಸಂಜೆ 5ರ ನಂತರ ವಿಜೇತ ತಂಡಗಳನ್ನು ಘೋಷಣೆ ಮಾಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ತಂಡಗಳಿಗೂ ಸಂಸ್ಥೆಯ ವತಿಯಿಂದ ಪ್ರಮಾಣ ಪತ್ರ ನೀಡಲಾಗುತ್ತದೆ. ವಿಜೇತರಾದವರು ರಾಷ್ಟ್ರ ಮಟ್ಟದ ಫ್ಯಾಷನ್‌ಷೋನಲ್ಲಿ ಭಾಗವಹಿಸಬಹುದು. ವಿವರಗಳಿಗೆ ಮೊ: 9880647392/ 9169339888 ಸಂಪರ್ಕಿಸಬಹುದು ಎಂದು ಹೇಳಿದರು. ಪ್ರಾಧಿಕಾರದ ಸಿಇಒ ಕೆ.ರುದ್ರೇಶ್, ತಿಬ್ಬಾಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಶಿವಾನಿ ಹಾಜರಿದ್ದರು.