ದಸರಾ ಯಶಸ್ವಿಗೆ ಅಧಿಕಾರಿಗಳು ಕೈಜೋಡಿಸಿ

20HDK1
ಎಚ್.ಡಿ.ಕೋಟೆ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಶಾಸಕ ಅನಿಲ್ ಚಿಕ್ಕಮಾದು ಅಧ್ಯಕ್ಷತೆಯಲ್ಲಿ ಗ್ರಾಮೀಣ ದಸರಾ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಯಿತು.
Published on

ಎಚ್.ಡಿ.ಕೋಟೆ: ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನಲ್ಲಿ ಪ್ರತ್ಯೇಕವಾಗಿ ಗ್ರಾಮೀಣ ದಸರಾ ಆಯೋಜಿಸಲಾಗಿದ್ದು, ಯಾವುದೇ ಸಮಸ್ಯೆಯಾಗದ ರೀತಿ ಕಾರ್ಯಕ್ರಮ ಯಶಸ್ವಿಗೆ ಅಧಿಕಾರಿಗಳು ಕೈಜೋಡಿಸಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಮನವಿ ಮಾಡಿದರು.

ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಸೋಮವಾರ ಕರೆಯಲಾಗಿದ್ದ ಗ್ರಾಮೀಣ ದಸರ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸೆ.28 ಸರಗೂರಿನಲ್ಲಿ, ಸೆ.29 ಎಚ್.ಡಿ.ಕೋಟೆ ಪಟ್ಟಣದಲ್ಲಿ ಗ್ರಾಮೀಣ ದಸರಾ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದರು.


ಕಳೆದ 2 ವರ್ಷಗಳಿಂದ ಕರೊನಾ ಮಹಾಮಾರಿಯಿಂದಾಗಿ ತಾಲೂಕಿನಲ್ಲಿ ಗ್ರಾಮೀಣ ದಸರಾ ಕಾರ್ಯಕ್ರಮ ಅದ್ಧೂರಿಯಾಗಿ ಆಚರಣೆ ಮಾಡಲು ಸಾಧ್ಯವಾಗಿರಲಿಲ್ಲ, ಈ ಬಾರಿ ಅರ್ಥಪೂರ್ಣ ಗ್ರಾಮೀಣ ದಸರಾ ಮಾಡಲು ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು. ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 2 ತಾಲೂಕು ಆಗಿರುವುದರಿಂದ ಪ್ರತ್ಯೇಕವಾಗಿ ಆಚರಣೆ ಮಾಡಲು ತೀರ್ಮಾನಿಸಲಾಗಿದೆ ಎಂದರು.

ಗ್ರಾಮೀಣ ದಸರ ಕಾರ್ಯಕ್ರಮ ಅಂಗವಾಗಿ ಸೆ.26ರಂದು ಎರಡೂ ತಾಲೂಕಿನಲ್ಲಿ ಗ್ರಾಮೀಣ ಪ್ರತಿಭೆಗಳಿಗೆ, ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಸೆ.27ರಂದು ಚಲನಚಿತ್ರೋತ್ಸವ ಹಾಗೂ ಸೆ.28, 29 ಹಾಗೂ 30 ರಂದು ಮೈಸೂರು ನಗರ ಪ್ರೇಕ್ಷಣೀಯ ಸ್ಥಳಗಳಿಗೆ ಕ್ಷೇತ್ರದ ಜನತೆಗೆ ಉಚಿತವಾಗಿ ಪ್ರತಿನಿತ್ಯ 6 ಬಸ್‌ಗಳ ಮೂಲಕ ಪ್ರವಾಸವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ತಹಸೀಲ್ದಾರ್ ರತ್ನಾಂಬಿಕಾ, ಗ್ರೇಡ್-2 ತಹಸೀಲ್ದಾರ್ ಸಣ್ಣರಾಮಪ್ಪ, ತಾಲೂಕು ಪಂಚಾಯಿತಿ ಎಚ್.ಡಿ.ಕೋಟೆ ಇಒ ರಾಜೇಶ್ ಜರಾಲ್ಡ್, ಸರಗೂರು ಇಒ ಸುಷ್ಮಾ, ಸರ್ಕಲ್ ಇನ್‌ಸ್ಪೆಕ್ಟರ್‌ಗಳಾದ ಆನಂದ್, ಬಸವರಾಜು, ಅಧಿಕಾರಿಗಳಾದ ರಾಮೇಗೌಡ, ಜಗನ್ನಾಥ್, ರಂಗಸ್ವಾಮಿ, ಗೋಪಾಲ್ ಕೃಷ್ಣಮೂರ್ತಿ, ಉದಯ್ ಕುಮಾರ್, ಸಿದ್ದರಾಜು, ರಾಮಸ್ವಾಮಿ, ಟಿಎಚ್‌ಒ ಡಾ.ಟಿ. ರವಿಕುಮಾರ್, ನಾರಾಯಣಸ್ವಾಮಿ ಅನಸೂಯಾ, ಎಸಿಎಫ್ ಪರಮೇಶ್, ಮಧು, ಡಿಶ್ ಪೂರ್ಣೇಶ ಸೇರಿದಂತೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net