

ಮೈಸೂರು: ದಸರಾ ಮಹೋತ್ಸವಕ್ಕೆ ಮೈಸೂರು ನಗರದಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ನಗರ ಪಾಲಿಕೆಗೆ 26 ಕೋಟಿ ರೂ. ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿರುವುದಾಗಿ ಮೇಯರ್ ಶಿವಕುಮಾರ್ ತಿಳಿಸಿದರು.
ಈ ವರ್ಷ ಅದ್ದೂರಿ ದಸರಾ ಆಚರಿಸಲು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯ ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ. ನಗರದ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ವಿಶೇಷ ಅನುದಾನ ನೀಡುವಂತೆ ಕೋರಿದ್ದೇವೆ ಎಂದು ಹೇಳಿದರು.
ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ವಿಶೇಷ ಅನುದಾನಕ್ಕೆ ಮನವಿ ಸಲ್ಲಿಸಿದಾಗ ಮುಖ್ಯಮಂತ್ರಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಎರಡ್ಮೂರು ದಿನಗಳಲ್ಲಿ ಪಾಲಿಕೆಯ ಸರ್ವಪಕ್ಷ ಸದಸ್ಯರ ನಿಯೋಗ ತೆರಳಿ ಮತ್ತೊಮ್ಮೆ ಮನವಿ ಸಲ್ಲಿಸಲಾಗುವುದು ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ಕಳೆದ ವರ್ಷ ದಸರಾ ಮಹೋತ್ಸವದ ವೇಳೆ ನಗರ ಪಾಲಿಕೆಯಿಂದ 16 ಕೋಟಿ ರೂ. ಖರ್ಚು ಮಾಡಿದ್ದು, ಈ ಸಲ ಪಾಲಿಕೆ ಆರ್ಥಿಕವಾಗಿ ಸದೃಢವಾಗಿಲ್ಲದ ಕಾರಣ ಕ್ರಿಯಾ ಯೋಜನೆ ಸಿದ್ಧಪಡಿಸಿ ಸಿಎಂ ಗಮನಕ್ಕೆ ತರಲಾಗುವುದು ಎಂದರು.
ಗುಂಡಿಮುಕ್ತ ರಸ್ತೆಗಳ ನಿರ್ಮಾಣ, ಸೌಂದರ್ಯೀಕರಣ, ಬೀದಿ ದೀಪಗಳ ನಿರ್ವಹಣೆ, ಹಲವು ರಸ್ತೆಗಳ ಅಭಿವೃದ್ಧಿ ಮಾಡಬೇಕಿದೆ. ವಾರ್ಡ್‌ವಾರು ಆಯೋಜಿಸುವ ಮನೆ ಮನೆ ದಸರಾಗೆ ಅನುದಾನ ನೀಡಬೇಕಿದೆ. ದಸರಾ ಜಂಬೂಸವಾರಿ ಮೆರವಣಿಗೆ ರಾಜ ಮಾರ್ಗದಲ್ಲಿ ಕಾಮಗಾರಿ ಕೈಗೊಳ್ಳಬೇಕಿದೆ ಎಂದು ತಿಳಿಸಿದರು.
ವಲಯ ಕಚೇರಿ 1ರಿಂದ 9ರವರೆಗೆ ಕೈಗೊಳ್ಳಲಿರುವ ಕಾಮಗಾರಿಗೆ 22 ಕೋಟಿ ರೂ., ವಿದ್ಯುತ್ ಕಾಮಗಾರಿಗೆ 2.50 ಕೋಟಿ ರೂ., ತೋಟಗಾರಿಕೆ ಕಾಮಗಾರಿಗೆ 40 ಲಕ್ಷ ರೂ., ಆರೋಗ್ಯ ಶಾಖೆಯ ಕಾಮಗಾರಿಗೆ 80 ಲಕ್ಷ ರೂ., ನೀರು ಸರಬರಾಜು ಮತ್ತು ಒಳಚರಂಡಿ ವಿಭಾಗದ ಕಾಮಗಾರಿಗಳಿಗೆ 30 ಲಕ್ಷ ರೂ. ಸೇರಿದಂತೆ 26 ಕೋಟಿ ರೂ.ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದು ವಿವರಿಸಿದರು.