ದಸರಾ: ಮೂರು ದಿನಗಳ ಸ್ವಚ್ಛತಾ ಅಭಿಯಾನ

18 (2)
Published on

ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮೂರು ದಿನಗಳ ಸ್ವಚ್ಛತಾ ಅಭಿಯಾನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ದೊಡ್ಡಕೆರೆ ಮೈದಾನದಲ್ಲಿ ಮೇಯರ್ ಶಿವಕುಮಾರ್ ಸ್ವಚ್ಛತಾ ಕಾರ್ಯಕ್ಕೆ ಹಸಿರು ನಿಶಾನೆ ತೋರಿದರು. ಪಾಲಿಕೆಯ 65 ವಾರ್ಡ್‌ಗಳಲ್ಲಿ ಸಚ್ಛತಾ ಕಾರ್ಯ ನಡೆಯಲಿದೆ. ಕಟ್ಟಡ ತ್ಯಾಜ್ಯ(ಡೆಬ್ರಿಸ್), ತ್ಯಾಜ್ಯ ಸೇರಿ ಎಲ್ಲ ಮಾದರಿಯ ಕಸವನ್ನು ಸಂಗ್ರಹಿಸಲಾಗುತ್ತದೆ.

ಮಳೆ ನೀರಿನ ಚರಂಡಿ, ಒಳಚರಂಡಿಗಳನ್ನು ಶುಚಿಗೊಳಿಸಿ ಸರಾಗವಾಗಿ ನೀರು ಹರಿಯುವಂತೆ ಮಾಡಲಾಗುತ್ತದೆ. ನಗರದ ಮುಖ್ಯ ರಸ್ತೆ ಬದಿಯಲ್ಲಿರುವ ಮರಗಳ ರೆಂಬೆ ಕೊಂಬೆ ತೆರವು ಮಾಡಲಾಗುವುದು. ಸಂಗ್ರಹಿಸಿದ ಕಸವನ್ನು ಮುಡಾ ಗುರುತಿಸಿರುವ ಮೈಸೂರು ತಾಲೂಕಿನ ಹಂಚ್ಯಾ-ಸಾತಗಳ್ಳಿ, ವಿದ್ಯಾರಣ್ಯಪುರಂ ಪ್ಲಾಂಟ್‌ನಲ್ಲಿ ಹಾಕಲಾಗುತ್ತದೆ.
ಅಭಿಯಾನಕ್ಕೆ ವಾರ್ಡಿಗೊಂದರಂತೆ 65 ಜೆಸಿಬಿ, 6 ಡೋಜರ್ಸ್‌, 3 ಹಿಟಾಚಿ, 80 ಟಿಪ್ಪರ್ಸ್‌, ಟ್ರಾೃಕ್ಟರ್ಸ್‌ ಬಳಸಿಕೊಳ್ಳಲಾಗುತ್ತಿದೆ. ವಲಯ ಅಧಿಕಾರಿಗಳು, ಆರೋಗ್ಯ ನಿರೀಕ್ಷಕರ ಮುಂದಾಳತ್ವದಲ್ಲಿ ನಡೆಯಲಿರುವ ಅಭಿಯಾನ ಸೆ. 25ರಂದು ಮುಕ್ತಾಯಗೊಳ್ಳಲಿದೆ. ಸೆ.26ರಂದು ಚಾಮುಂಡಿಬೆಟ್ಟದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ದಸರಾ ಉತ್ಸವ ಉದ್ಘಾಟಿಸಲಿದ್ದಾರೆ.

ಉಪ ಮೇಯರ್ ಡಾ.ಜಿ.ರೂಪಾ, ಶಾಸಕ ಎಲ್.ನಾಗೇಂದ್ರ, ಪಾಲಿಕೆ ಸದಸ್ಯರಾದ ಸತೀಶ್, ಎಂ.ಯು.ಸುಬ್ಬಯ್ಯ, ಪುಷ್ಪಲತಾ ಜಗನ್ನಾಥ್, ಪ್ರಮೀಳಾ ಭರತ್, ಛಾಯಾದೇವಿ, ಸೌಮ್ಯಾ ಉಮೇಶ್, ರವೀಂದ್ರ, ಅಭಿಯಂತರ ಅಧೀಕ್ಷಕ ಉಮೇಶ್, ಇಂಜಿನಿಯರ್‌ಗಳಾದ ರಂಜಿತ್‌ಕುಮಾರ್, ಮಧುಸೂದನ್, ಸುರ್ವಣ, ಸಿಂಧು, ಅಭಿವೃದ್ಧಿ ಅಧಿಕಾರಿಗಳು, ಪರಿಸರ ಇಂಜಿನಿಯರ್‌ಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net