

ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೂ ಮುನ್ನವೇ ಕ್ರೀಡಾಕೂಟ ಆಯೋಜನೆಗೆ ಜಿಲ್ಲಾಡಳಿತದ ವತಿಯಿಂದ ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಬಿ.ನಾಗೇಂದ್ರ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಯಿತು.
ದಸರಾ ಕ್ರೀಡಾಕೂಟ ಸಂಬಂಧ ಹಳೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಸಭೆಯಲ್ಲಿ ಈ ವಿಷಯ ಚರ್ಚೆ ಆಯಿತು.
ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ದಸರಾ ಸಂದರ್ಭದಲ್ಲಿ ಹತ್ತಾರು ಕಾರ್ಯಕ್ರಮಗಳು ನಡೆಯುತ್ತವೆ. ಅವುಗಳೊಂದಿಗೆ ಕ್ರೀಡಾಕೂಟ ವ್ಯವಸ್ಥಿತವಾಗಿ ಆಯೋಜನೆ ಆಗುವುದಿಲ್ಲ. 27 ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಅಂದಾಜು 5 ಸಾವಿರ ಕ್ರೀಡಾಪಟುಗಳು ಬರಲಿದ್ದಾರೆ. ಅವರಿಗೆ ವಾಸ್ತವ್ಯ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸುವುದು ಕಷ್ಟಕರವಾಗಿದೆ. ಈ ಸಂದರ್ಭದಲ್ಲಿ ಕ್ರೀಡಾಕೂಟದ ವ್ಯವಸ್ಥೆ ಕಡೆಗೆ ಹೆಚ್ಚು ಗಮನ ನೀಡಲು ಸಹ ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಕಳೆದ ಬಾರಿ ಕ್ರೀಡಾಕೂಟದಲ್ಲಿ ಕೆಲ ಲೋಪದೋಷಗಳು ಉಂಟಾಗಿವೆ. ಅದು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕಿದೆ. ಜತೆಗೆ, ಕೆಎಸ್ಆರ್ಟಿಸಿ ಬಸ್ನಲ್ಲಿ ಮಹಿಳೆಯರಿಗೆ ಉಚಿತ ಸಂಚಾರ ವ್ಯವಸ್ಥೆ ಕಲ್ಪಿಸಿರುವ ಶಕ್ತಿ ಯೋಜನೆಯಿಂದಾಗಿ ಈ ಬಾರಿ ದಸರಾಕ್ಕೆ ಹೆಚ್ಚಿನ ಜನರು ಬರಲಿದ್ದಾರೆ. ಕಳೆದ ವರ್ಷಕ್ಕಿಂತ ಶೇ.25ರಷ್ಟು ಜನದಟ್ಟಣೆ ಹೆಚ್ಚಾಗಲಿದೆ. ಆದ್ದರಿಂದ ಕ್ರೀಡಾಕೂಟವನ್ನು ದಸರಾಕ್ಕೂ ಮುಂಚೆ ನಡೆಸುವುದು ಹೆಚ್ಚು ಸೂಕ್ತ. ಇದರಿಂದ ಪ್ರತಿಯೊಂದು ಸ್ಪರ್ಧೆಯನ್ನು ಅಚ್ಚುಕಟ್ಟಾಗಿ ಏರ್ಪಡಿಸಬಹುದಾಗಿದೆ ಎಂದು ಅಭಿಪ್ರಾಯಿಸಿದರು.
ವಿವಿಧ ಸ್ಪರ್ಧೆಗಳ ಅಂತಿಮ ಪಂದ್ಯವನ್ನು ದಸರಾ ಸಂದರ್ಭದಲ್ಲಿ ನಡೆಸಿ ವಿಜೇತರಿಗೆ ಬಹುಮಾನ ಸಹ ವಿತರಿಸಬಹುದು. ವಿಜೇತರಾದ ಪ್ರಮುಖ ಕ್ರೀಡಾಪಟುಗಳನ್ನು ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗಿಯಾಗುವಂತೆ ಮಾಡಿ ಅವರಿಗೂ ಮನ್ನಣೆ ಕೊಡಬಹುದಾಗಿದೆ ಎಂದು ಡಿಸಿ ಹೇಳಿದರು.
ಆ.14ರಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಸಭೆ ನಡೆಯಲಿದ್ದು, ಅಲ್ಲಿಯೂ ಈ ವಿಷಯ ಕುರಿತು ಚರ್ಚೆ ಮಾಡಲಾಗುವುದು. ಒಂದು ವೇಳೆ, ದಸರಾ ಮಹೋತ್ಸವ ಸಂದರ್ಭದಲ್ಲೇ ಕ್ರೀಡಾಕೂಟ ಆಯೋಜನೆಗೆ ಸೂಚಿಸಿದರೆ, ಅದಕ್ಕೂ ಜಿಲ್ಲಾಡಳಿತ ಸಿದ್ಧವಿದೆ. ಅದಕ್ಕಾಗಿ ಅಗತ್ಯ ತಯಾರಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ದಸರಾಕ್ಕೂ ಮುನ್ನವೇ ಕ್ರೀಡಾಕೂಟ ಆಯೋಜನೆಗೆ ಕ್ರೀಡಾ ಸಚಿವರು, ಕ್ರೀಡಾ ಇಲಾಖೆಯ ಆಯುಕ್ತ ಶಶಿಕುಮಾರ್ ಸಹಮತ ವ್ಯಕ್ತಪಡಿಸಿದರು. ಆದರೆ, ಈ ಪ್ರಸ್ತಾವನೆಗೆ ಅಸಮ್ಮತಿ ವ್ಯಕ್ತಪಡಿಸಿದ ಶಾಸಕ ಕೆ.ಹರೀಶ್ಗೌಡ , ದಸರಾ ಸಂದರ್ಭದಲ್ಲೇ ಕ್ರೀಡಾಕೂಟ ನಡೆಸಬೇಕು. ಕ್ರೀಡಾಪಟುಗಳು ಉಳಿದುಕೊಳ್ಳಲು ಕಲ್ಯಾಣ ಮಂಟಪಗಳು, ಹಾಸ್ಟೆಲ್ನಲ್ಲಿ ವ್ಯವಸ್ಥೆ ಮಾಡಬೇಕು. ಆ ರೀತಿ ಮಾಡಿದರೆ ಏನೂ ಸಮಸ್ಯೆಯಾಗಲ್ಲ ಎಂದರು. ವಿಷಯ ಆಲಿಸಿದ ಸಚಿವರು, ಈ ಕುರಿತು ಮುಖ್ಯಮಂತ್ರಿ ಮಟ್ಟದಲ್ಲಿ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಸಚಿವರು, ಕಳೆದ ಬಾರಿ ಕ್ರೀಡಾಕೂಟ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಸ್ಪರ್ಧಿಗಳ ವಾಸ್ತವ್ಯ, ಊಟ ಕಲ್ಪಿಸುವಲ್ಲಿ ಕೆಲ ನ್ಯೂನತೆ ಆಗಿತ್ತು. ಈ ಸಲ ಇದು ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕು. ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ಆಯೋಜಿಸಬೇಕು ಎಂದು ಸೂಚಿಸಿದರು.
ಕಾಂಗ್ರೆಸ್ ನೇತೃತ್ವದಲ್ಲಿ ಹೊಸ ಸರ್ಕಾರ ಬಂದಿದೆ. ಹೀಗಾಗಿ ಸಹಜವಾಗಿಯೇ ಹೊಸ ನಿರೀಕ್ಷೆಗಳೂ ಇವೆ. ಕ್ರೀಡಾಕೂಟವನ್ನು ಉತ್ತಮವಾಗಿ ನಡೆಸಬೇಕೆಂಬ ಆಸೆ ಇದೆ. ಯಾವುದೇ ಕಾರಣಕ್ಕೂ ಕ್ರೀಡಾಪಟುಗಳಿಗೆ ತೊಂದರೆ ಉಂಟಾಗದಂತೆ ಅಗತ್ಯ ಕ್ರಮ ತೆಗದುಕೊಳ್ಳಬೇಕು ಎಂದು ನಿರ್ದೇಶಿಸಿದರು.
ದಸರಾದಲ್ಲಿ ದುಂದುವೆಚ್ಚಕ್ಕೆ ಅವಕಾಶವಿಲ್ಲ. ಈ ಕುರಿತು ಸಿಎಂ ಸ್ಪಷ್ಟ ಸೂಚನೆ ನೀಡಿದ್ದಾರೆ. ಕ್ರೀಡಾಕೂಟದಲ್ಲೂ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಬೇಕು ಎಂದು ತಾಕೀತು ಮಾಡಿದರು. ಶಾಸಕರಾದ ಕೆ.ಹರೀಶ್ಗೌಡ, ಅನಿಲ್ ಚಿಕ್ಕಮಾದು ಇನ್ನಿತರರಿದ್ದರು.