

ಮೈಸೂರು: ಪ್ರಸಕ್ತ ಸಾಲಿನ ನಾಡಹಬ್ಬ ದಸರಾ ಮಹೋತ್ಸವ ಮುಗಿದ ತಕ್ಷಣವೇ ಖರ್ಚು-ವೆಚ್ಚದ ಲೆಕ್ಕ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಸಂಜೆ ದಸರಾ ಕಾರ್ಯಕಾರಿ ಸಮಿತಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷ ದಸರಾ ಮುಗಿದ ಬಳಿಕ ಲೆಕ್ಕ ನೀಡಲಾಗಿದೆ. ಈ ಬಾರಿಯೂ ಅದೇ ರೀತಿ ಲೆಕ್ಕಪತ್ರವನ್ನು ಸಾರ್ವಜನಿಕರ ಮುಂದಿಡಲಾಗುವುದು ಎಂದರು.
ದಸರಾ ಸಿದ್ಧತೆಗಾಗಿ ಅಧಿಕಾರಿಗಳನ್ನು ಒಳಗೊಂಡ 16 ಉಪಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿಗಳಿಗೆ ಶಾಸಕರು, ನಿಗಮ-ಮಂಡಳಿ ಅಧ್ಯಕ್ಷರು, ಇತರ ಜನಪ್ರತಿನಿಧಿಗಳನ್ನು ಸೇರಿಸುವಂತೆ ಸಲಹೆ ಬಂದಿದೆ. ಆದರೆ, ಈ ಕುರಿತು ಇನ್ನೂ ತೀರ್ಮಾನವಾಗಿಲ್ಲ ಎಂದು ತಿಳಿಸಿದರು.
ಕಳೆದ ಎರಡು ವರ್ಷ ಸರಳವಾಗಿ ದಸರಾ ನಡೆದಿದೆ. ಈ ಸಲ ಅದ್ದೂರಿಯಾಗಿ ನಡೆಸುವ ಮೂಲಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಕ್ರಮ ವಹಿಸಲಾಗುವುದು ಎಂದರು.
ಯುವ ದಸರಾ, ರೈತ ದಸರಾ ಸೇರಿದಂತೆ ಯಾವುದು ಅಗತ್ಯವೋ ಅದನ್ನು ಅದ್ದೂರಿಯಾಗಿ ಮಾಡಲಾಗುವುದು. ಕೆಲ ಕಾರ್ಯಕ್ರಮಗಳನ್ನು ಸರಳವಾಗಿ ನಡೆಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ಇತ್ತೀಚೆಗೆ ಮಳೆಯಿಂದ ಹೆಚ್ಚಿನ ಹಾನಿಯಾಗಿ ಸಾರ್ವಜನಿಕರು ಸಂಕಷ್ಟದಲ್ಲಿ ಇರುವಾಗ ದಸರಾ ಅದ್ದೂರಿ ಆಚರಣೆ ಅಗತ್ಯ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವ ಎಸ್.ಟಿ.ಸೋಮಶೇಖರ್, ಇನ್ನೂ ನಾಲ್ಕೈದು ದಿನ ಮಳೆ ಆಗುವ ಮುನ್ಸೂಚನೆ ಇದೆ. ಇದೇ ರೀತಿ ನಿರಂತರವಾಗಿ ಮಳೆಯಾದರೆ ಆ ಕುರಿತು ಮರುಪರಿಶೀಲನೆ ಮಾಡಲಾಗುವುದು ಎಂದರು.
ಅರಮನೆ ಒಳಗೆ ನಡೆಯುವ ದಸರಾ ಚಟುವಟಿಕೆಗಳ ವೆಚ್ಚವನ್ನು ಅರಮನೆ ಆಡಳಿತ ಮಂಡಳಿ ಭರಿಸಲಿದೆ. ಅರಮನೆ ಆಚೆ ನಡೆಯುವ ಕಾರ್ಯಕ್ರಮಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 10 ಕೋಟಿ ರೂ. ದೊರೆಯಲಿದೆ. ಹೆಚ್ಚುವರಿ ಖರ್ಚು-ವೆಚ್ಚಗಳ ಕುರಿತು ಜಿಲ್ಲಾಡಳಿತ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ. ಅದಕ್ಕೆ ತಕ್ಕಂತೆ ಹಣ ಮಂಜೂರಾಗಲಿದೆ ಎಂದು ಹೇಳಿದರು.
ಶ್ರೀರಂಗಪಟ್ಟಣ ಮತ್ತು ಚಾಮರಾಜನಗರ ದಸರಾ ಕಾರ್ಯಕ್ರಮಕ್ಕೆ ತಲಾ ಒಂದು ಕೋಟಿ ರೂ. ಬಿಡುಗಡೆಯಾಗಿದೆ. ಶ್ರೀರಂಗಪಟ್ಟಣ ದಸರಾಕ್ಕೆ ಗಜಪಡೆಯ 3 ಆನೆಗಳನ್ನು ಕಳುಹಿಸಿಕೊಡಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
ದಸರಾ ಉದ್ಘಾಟಕರನ್ನು ಆಯ್ಕೆ ಮಾಡುವ ಅಧಿಕಾರವನ್ನು ಮುಖ್ಯಮಂತ್ರಿಗೆ ನೀಡಲಾಗಿದೆ. ಆದರೆ, ಈ ಬಾರಿ ಯಾರೊಬ್ಬರ ಹೆಸರೂ ಈವರೆಗೆ ಬಂದಿಲ್ಲ. ಕಳೆದ ವರ್ಷ ಇಷ್ಟೊತ್ತಿಗೆ ಕೆಲ ಹೆಸರುಗಳು ಸೂಚನೆಯಾಗಿದ್ದವು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಸಲ ದಸರಾ ಗೋಲ್ಡ್ ಪಾಸ್ ಇರುವುದಿಲ್ಲ. ಈ ಕುರಿತು ಎರಡ್ಮೂರು ದಿನಗಳಲ್ಲಿ ತೀರ್ಮಾನ ಕೈಕೊಳ್ಳಲಾಗುವುದು ಎಂದರು.
ಮೇಯರ್, ಉಪ ಮೇಯರ್ ಮೀಸಲಾತಿ ಶೀಘ್ರ ಪ್ರಕಟ:
ಮೈಸೂರು ಮಹಾನಗರಪಾಲಿಕೆಯ ಮೇಯರ್, ಉಪ ಮೇಯರ್ ಸ್ಥಾನಗಳಿಗೆ ಎರಡ್ಮೂರು ದಿನಗಳಲ್ಲಿ ಮೀಸಲಾತಿ ಪ್ರಕಟವಾಗಲಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಪಾಲಿಕೆಯಲ್ಲಿ ಸದ್ಯ ಬಿಜೆಪಿ-ಜೆಡಿಎಸ್ ಮೈತ್ರಿಯಿದ್ದು, ಮುಂದಿನ ಅವಧಿಗೆ ಮೇಯರ್, ಉಪ ಮೇಯರ್ ಅಭ್ಯರ್ಥಿಗಳ ಆಯ್ಕೆ ಕುರಿತು ಇನ್ನೂ ನಿರ್ಧಾರವಾಗಿಲ್ಲ ಎಂದರು.
ಅತಿವೃಷ್ಟಿ ಪರಿಹಾರಕ್ಕೆ 15 ಕೋಟಿ ರೂ. ಬಿಡುಗಡೆ
ಮಳೆಯಿಂದ ಜಿಲ್ಲೆಯಲ್ಲಿ 10 ಕೋಟಿ ರೂ. ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿದ್ದು, ಪರಿಹಾರಕ್ಕಾಗಿ ಸರ್ಕಾರದಿಂದ ಜಿಲ್ಲಾಡಳಿತಕ್ಕೆ 15 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ತಕ್ಷಣ ಸಂತ್ರಸ್ತರಿಗೆ ಪರಿಹಾರ ನೀಡಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಜಿಲ್ಲೆಯಲ್ಲಿ 1,645 ಮನೆಗಳಿಗೆ ಹಾನಿಯಾಗಿದೆ. ಈ ಪೈಕಿ ಪಿರಿಯಾಪಟ್ಟಣದಲ್ಲಿ 500, ಹುಣಸೂರಿನಲ್ಲಿ 300, ಎಚ್.ಡಿ.ಕೋಟೆಯಲ್ಲಿ 250, ಸರಗೂರಿನಲ್ಲಿ 250, ಕೆ.ಆರ್.ನಗರದಲ್ಲಿ 175, ಮೈಸೂರಿನಲ್ಲಿ 80, ನಂಜನಗೂಡಿನಲ್ಲಿ 80, ತಿ.ನರಸೀಪುರ ತಾಲೂಕಿನಲ್ಲಿ 30 ಮನೆಗಳಿಗೆ ಹಾನಿಯಾಗಿದೆ. ಹುಣಸೂರಿನಲ್ಲಿ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. 11 ಜಾನುವಾರು ಸಾವಿಗೀಡಾಗಿವೆ. ಪಿರಿಯಾಪಟ್ಟಣದಲ್ಲಿ ಹೆಚ್ಚಿನ ಹಾನಿಯಾಗಿದೆ. ಆ. 7ರಂದು ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುವುದು ಎಂದು ಹೇಳಿದರು.