

ನಾಡಹಬ್ಬ ದಸರಾ ಮಹೋತ್ಸವದಲ್ಲಿ ಹೂವಿನ ಪರಿಮಳ ಹೊರಸೂಸುವ ದಸರಾ ಫಲಪುಷ್ಪ ಪ್ರದರ್ಶನದ ಅಂದ ಹೆಚ್ಚಿಸಲು ವಿವಿಧ ಬಗೆಯ 1 ಲಕ್ಷ ಹೂವಿನ ಗಿಡ ಬೆಳೆಸಲಾಗಿದೆ. ಇದಕ್ಕಾಗಿ ಸಿದ್ಧತೆ ಭರದಿಂದ ಸಾಗಿದೆ.
ಸಬರಮತಿ ಆಶ್ರಮ ಮಾದರಿ ಈ ಸಲದ ವಿಶೇಷವಾಗಿದೆ. ಜತೆಗೆ, ಹೊರ ರಾಜ್ಯದಿಂದ ತರುವ ಹೂವಿನ ಗಿಡಗಳು ಫಲಪುಷ್ಪ ಪ್ರದರ್ಶನಕ್ಕೆ ಮೆರುಗು ನೀಡಲಿದೆ. ಕಳೆದ ಬಾರಿಗಿಂತ ಇನ್ನಷ್ಟು ಆಕರ್ಷಕಗೊಳಿಸಲಾಗುತ್ತಿದೆ.
ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಗರದ ಹಾರ್ಡಿಂಗ್ ವೃತ್ತದ ಬಳಿಯ ಕುಪ್ಪಣ್ಣ ಉದ್ಯಾನದಲ್ಲಿ ಸೆ.22ರಿಂದ ಅ.3ರ ವರೆಗೆ ದಸರಾ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗುತ್ತಿದೆ.
ಇಲ್ಲಿ ಬಳಸುವ ಗಿಡಗಳು ಹಂತ ಹಂತವಾಗಿ ಹೂ ಬಿಡುವುದರಿಂದ ಈಗಾಗಲೇ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಈ ಸಲ ಅಂದಾಜು 40 ತಳಿಯ ವಿವಿಧ ಬಣ್ಣಗಳ ಹೂವಿನ ಹಾಗೂ ಅಲಂಕಾರಿಕ ಗಿಡಗಳು ಹೂವಿನ ಪ್ರೇಮಿಗಳನ್ನು ಸೆಳೆಯಲಿವೆ.
ಈಗಾಗಲೇ ವಿವಿಧ ನರ್ಸರಿಗಳಲ್ಲಿ 120 ದಿನದಿಂದ 30 ದಿನದಲ್ಲಿ ಹೂ ಬಿಡುವ ಗಿಡಗಳನ್ನು 75 ಸಾವಿರ ಕುಂಡಗಳಲ್ಲಿ ಬೆಳೆಸಲಾಗುತ್ತಿದೆ. ಫಲಪುಷ್ಪ ಪ್ರದರ್ಶನ ಈ ಬಾರಿ ಜನಾಕರ್ಷಣೀಯವಾಗಿಸಲು ಕ್ರಮ ತೆಗೆದುಕೊಳ್ಳಲಾಗಿದೆ.
ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಈ ಸಲ ವಿವಿಧ ಬಗೆಯ ಹೂವಿನ ಗಿಡಗಳು ವೀಕ್ಷಕರಿಗೆ ಕಣ್ತುಂಬಿಕೊಳ್ಳಲು ದೊರೆಯಲಿವೆ.
ಒಂದು ಲಕ್ಷಕ್ಕೂ ಹೆಚ್ಚು ಹೂವಿನ ಕುಂಡಗಳಲ್ಲಿ ಬೆಳೆದಿರುವ ಬಗೆ ಬಗೆಯ ಹೂವಿನ ಗಿಡಗಳನ್ನು ಜೋಡಣೆ ಮಾಡಲಾಗುತ್ತದೆ. ಅದಕ್ಕಾಗಿ ಫಲಪುಷ್ಪ ಪ್ರದರ್ಶನಕ್ಕೆ ಬಳಸುವ ಹೂವಿನ ಗಿಡಗಳುಳ್ಳ ಹೂವಿನ ಕುಂಡಗಳನ್ನು ಕೇಂದ್ರ ಸಸ್ಯಾಗಾರ, ಕುಪ್ಪಣ್ಣ ಪಾರ್ಕ್, ಸರ್ಕಾರಿ ಅತಿಥಿ ಗೃಹ, ಜಲದರ್ಶಿನಿ ವಿಭಾಗ, ಕರ್ಜನ್ ಪಾರ್ಕ್, ಗೋರ್ಡಾನ್ ಪಾರ್ಕ್ ಮತ್ತು ವಸ್ತು ಪ್ರದರ್ಶನದಲ್ಲಿರುವ ತೋಟಗಾರಿಕೆ ವಿಭಾಗಗಳಲ್ಲಿ ಪಾಲನೆ ಮಾಡಲಾಗುತ್ತಿದೆ.
ಗಿಡಗಳಿಗೆ ಗೊಬ್ಬರ ಹಾಕಿ ಸಕಾಲಕ್ಕೆ ನೀರುಣಿಸುವ ಮೂಲಕ ಹೂವಿನ ಗಿಡದ ಸತ್ವವನ್ನು ಕಾಪಾಡಿಕೊಳ್ಳಲಾಗುತ್ತಿದೆ. ಹೂವಿನ ಗಿಡಗಳ ಪಾಟ್‌ಗಳಲ್ಲಿ ಕುಪ್ಪಣ್ಣ ಪಾರ್ಕ್‌ನ ಆಯ್ದ ಸ್ಥಳದಲ್ಲಿ, ವಾಕಿಂಗ್‌ಪಾಥ್‌ನಲ್ಲಿ ಜೋಡಿಸಲಾಗುತ್ತದೆ. ಅದಕ್ಕಾಗಿ ತಯಾರಿ ನಡೆದಿದೆ. ವಿವಿಧ ನರ್ಸರಿಯಲ್ಲಿ ಬೆಳೆಸಿರುವ ಗಿಡಗಳಲ್ಲದೆ, ಹೊರ ರಾಜ್ಯದಿಂದ 25 ಸಾವಿರ ಹೂವಿನ ಗಿಡಗಳು ಬರಲಿವೆ. ಕುಂಡಗಳಲ್ಲಿ ಬೆಳೆದಿರುವ ಹೂವಿನ ಗಿಡಗಳನ್ನು ಖರೀದಿಸಿ ತರಲಾಗುತ್ತಿದೆ.
ಈ ಬಾರಿ 35 ರಿಂದ 40 ಬಗೆಯ ಹೂವಿನ ತಳಿಯ ಗಿಡಗಳನ್ನು ಬೆಳೆಸಲಾಗಿದೆ. ದಸರಾ ಫಲಪುಷ್ಪ ಪ್ರದರ್ಶನಕ್ಕೆ 120 ದಿನದ ಮೊದಲೇ ಹೂವಿನ ಗಿಡಗಳ ಬೀಜವನ್ನು ಬಿತ್ತನೆ ಮಾಡಲಾಗಿದ್ದು, ಅವಧಿಯ ಸರಿಯಾಗಿ ಹೂ ಬಿಡುವ ಗಿಡಗಳನ್ನು ಬೆಳೆಸಲಾಗಿದೆ.
ಅವುಗಳಲ್ಲಿ ಜಿನ್ನಿಯಾ, ಸ್ನಾಪ್ ಡ್ರಾಗನ್, ಸಾಲ್ವಿಯಾ, ಜೆರೇನಿಯಂ, ಕಾಸ್ಮೋಸ್, ಮಾರಿಗೋಲ್ಡ್, ಗೈಲಾರ್ಡಿಯಾ, ಗಜೆನಿಯಾ, ಕ್ಯಾಲೆಡುಲ, ಪೆಟುನಿಯಾ, ಪೆಂಟಾಸ್, ಥೋರೇನಿಯಂ, ಕಾಕ್ಸ್‌ಕಾಂಬ್, ಜೇಡ, ಚೀನಾ ಆಸ್ಟರ್, ಕೋಲಿಯಸ್, ಕ್ರೈಸಾಂಥೆಮಮ್ ವಿಶೇಷವಾಗಿವೆ. ವಿವಿಧ ಬಗೆಯ ಹೂವಿನ ಗಿಡಗಳು ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.
ಇಲಾಖೆಗೆ ಸಂಬಂಧಿಸಿದ ಮಳಿಗೆಗಳು, ಕೃಷಿಗೆ ಸಂಬಂಧಿಸಿದ ಮಳಿಗೆಗಳು ಇರಲಿವೆ. ಸರ್ಕಾರದ ವಿವಿಧ ಸೌಲಭ್ಯದ ಕುರಿತು ರೈತರಿಗೆ ಮಾಹಿತಿ ದೊರೆಯಲಿದೆ. ಸಂಜೆ ಹೊತ್ತಿನಲ್ಲಿ ಸಂಗೀತ ಕಾರಂಜಿ ರಾಗಲಹರಿಯನ್ನು ಹೊರಹೊಮ್ಮಿಸಲಿದೆ. ವಿವಿಧ ಮನರಂಜನಾತ್ಮಕ ಕಾರ್ಯಕ್ರಮ ಆಯೋಜನೆಗೂ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.
ಮಕ್ಕಳನ್ನು ಸೆಳೆಯುವ ಸಲುವಾಗಿ ವಿವಿಧ ಪ್ರಾಣಿ, ಪಕ್ಷಿಗಳ ಗೊಂಬೆಗಳನ್ನು ಹೂಗಳಿಂದ ನಿರ್ಮಿಸಲು ಯೋಜಿಸಲಾಗಿದೆ. ಇಡೀ ಕುಪ್ಪಣ್ಣ ಉದ್ಯಾನವನ್ನು ಹೂಗಳಿಂದ ಅಲಂಕರಿಸಲಾಗುತ್ತಿದೆ. ಸಾವಿರಾರು ಹೂವಿನ ಗಿಡಗಳನ್ನು ಬೆಳೆದಿದ್ದು, ಅವುಗಳಲ್ಲಿ ಮುಖ್ಯವಾಗಿ ಮಾರಿಗೋಲ್ಡ್, ಫ್ರೆಂಚ್ ಮಾರಿಗೋಲ್ಡ್, ಜಿನಿಯಾ, ಡಾಲಿಯಾ ಸೇರಿದಂತೆ ಹಲವು ಪ್ರಭೇದದ ಹೂವಿನ ಗಿಡಗಳಿವೆ.
ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಈ ಸಲ ವಿಶೇಷ ಸಬರಮತಿ ಆಶ್ರಮ ಮಾದರಿಯಾಗಲಿದೆ. ಕುಪ್ಪಣ್ಣ ಪಾರ್ಕ್‌ನಲ್ಲಿರುವ ಗಾಜಿನ ಮನೆಯಲ್ಲಿ ಲಕ್ಷಾಂತರ ಹೂಗಳಿಂದ ನಿರ್ಮಿಸಲು ಉದ್ದೇಶಿಸಲಾಗಿದೆ.
ಅದಕ್ಕಾಗಿ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿ ಇದೆ. ಅದಕ್ಕಾಗಿ ಅಲಂಕಾರಿಕಾ ಸಂಸ್ಥೆಗಳನ್ನು ಆಹ್ವಾನಿಸಲಾಗಿದೆ. ಅಲ್ಲದೆ ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಬಣ್ಣದ ಹೂಗಳಿಂದ ವಿವಿಧ ಆಕೃತಿಗಳು ತಲೆ ಎತ್ತಲಿವೆ. ಈ ಬಾರಿ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೀಯ ಕೇಂದ್ರ ಬಿಂದುವಾಗಿ ಜನರನ್ನು ಕೈಬಿಸಿ ಕರೆಯಲಿದೆ.