ದಸರಾ ಪ್ರಾಧಿಕಾರ ರಚನೆ ಯಾವಾಗ?

jambu savari
Published on

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಜಾಗತಿಕ ಪಾರಂಪರಿಕ, ಸಾಂಸ್ಕೃತಿಕ ಉತ್ಸವವಾಗಿ ಹೊರಹೊಮ್ಮಿರುವ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಆಯೋಜನೆಗಾಗಿ ಪ್ರತ್ಯೇಕ ‘ದಸರಾ ಪ್ರಾಧಿಕಾರ’ ರಚಿಸಬೇಕೆಂಬ ಬೇಡಿಕೆ ಮತ್ತೆ ಮುನ್ನಲೆಗೆ ಬಂದಿದೆ. ಇದು ಸಾಕಾರಗೊಳ್ಳುವ ನಿರೀಕ್ಷೆಗಳೂ ಗರಿಗೆದರಿವೆ.

ದಸರಾ ಸಮೀಪಿಸುತ್ತಿದ್ದಂತೆ ಈ ಬೇಡಿಕೆ ಪ್ರತಿಸಲ ಪ್ರತಿಧ್ವನಿಸುತ್ತದೆ. ದಸರಾ ಮುಗಿದ ಬಳಿಕ ಮರೆಯಾಗಿ ಮತ್ತೆ ಮುಂದಿನ ದಸರಾದಲ್ಲಿ ನೆನಪಿಗೆ ಬರುತ್ತದೆ. ಆದರೆ, ಈ ಸಲ ದಸರಾ ಪ್ರಾಧಿಕಾರದ ಪ್ರಸ್ತಾವನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಉನ್ನತ ಮಟ್ಟದ ಸಮಿತಿ ಸಭೆ ಕರೆದು ಈ ಕುರಿತು ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇದರಿಂದ ಹೊಸ ಆಶಾಭಾವ ಮೂಡಿದೆ.

ಜಿಲ್ಲೆಯವರೇ ಆದ ಸಿದ್ದರಾಮಯ್ಯ ಅವರಿಗೆ ದಸರಾದ ಸಂಪೂರ್ಣ ಚಿತ್ರಣ, ಅದರ ಲೋಪ-ದೋಷಗಳ ಕುರಿತು ಅರಿವಿದೆ. ಆದ್ದರಿಂದ ಈ ವಿಷಯ ಕುರಿತು ಸೂಕ್ತ ನಿರ್ಣಯ ತೆಗೆದುಕೊಳ್ಳಲಿದ್ದಾರೆ ಎಂಬ ಭರವಸೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಕಳೆದ ವರ್ಷವೂ ಪ್ರಸ್ತಾಪ:
2022ರ ದಸರಾ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ ಪ್ರತ್ಯೇಕ ದಸರಾ ಪ್ರಾಧಿಕಾರ ರಚನೆಗೆ ಶಾಸಕ ಜಿ.ಟಿ.ದೇವೇಗೌಡ ಆಗ್ರಹಿಸಿದ್ದರು. ಇದಕ್ಕೆ ಜಿಲ್ಲೆಯ ಶಾಸಕರು, ಸಂಸದರು, ಎಂಎಲ್ಸಿಗಳು ಧ್ವನಿಗೂಡಿಸಿ ಒತ್ತಡ ಹೇರಿದ್ದರು. ಬಳಿಕ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದಲ್ಲಿ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ್ದ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ದಸರಾ ಪ್ರಾಧಿಕಾರ ರಚನೆ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇವೆ ಎಂಬ ಭರವಸೆಯನ್ನೂ ನೀಡಿದ್ದರು. ಆದರೆ ನಂತರ ಏನೂ ಆಗಲಿಲ್ಲ.

ಇಚ್ಛಾಶಕ್ತಿ ಕೊರತೆ:
ಈ ಹಿಂದೆ ಶೋಭಾ ಕರಂದ್ಲಾಜೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಈ ಕುರಿತು ಪ್ರಸ್ತಾವನೆಯಾಗಿ, ರಾಜ್ಯ ಮಟ್ಟದಲ್ಲೂ ಚರ್ಚೆ ಆಗಿತ್ತು. ಅದನ್ನು ಹೊರತುಪಡಿಸಿ ಪ್ರಾಧಿಕಾರ ರಚನೆಗೆ ಈವರೆಗೂ ಬಂದು ಹೋಗಿರುವ ಯಾವ ಸರ್ಕಾರಗಳೂ ಇಚ್ಛಾಶಕ್ತಿ ಪ್ರದರ್ಶಿಸಿಲ್ಲ. ಈಗಲಾದರೂ ಪ್ರಾಧಿಕಾರ ರಚನೆಗೆ ಸಿದ್ದರಾಮಯ್ಯ ಸರ್ಕಾರ ಕ್ರಮ ವಹಿಸಬೇಕಿದೆ.

ಡಿಸಿ ಮೇಲೆ ಹೆಚ್ಚಿನ ಕಾರ್ಯ ಒತ್ತಡ:
ಜಿಲ್ಲಾಧಿಕಾರಿ ದಸರಾ ಮಹೋತ್ಸವದ ವಿಶೇಷಾಧಿಕಾರಿಯಾಗಿರುವುದರಿಂದ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ದೈನಂದಿನ ಕೆಲಸಗಳ ಜತೆಗೆ ಎರಡು ತಿಂಗಳ ಕಾಲ ದಸರಾದಲ್ಲಿ ಅವರು ಸಕ್ರಿಯವಾಗಬೇಕು. ಅದರ ಬದಲು ನಗರದಲ್ಲಿರುವ ಪ್ರಾಚ್ಯವಸ್ತು ಮತ್ತು ಪರಂಪರೆ ಇಲಾಖೆ ಆಯುಕ್ತರು, ಅರಮನೆ ಮಂಡಳಿಗೆ ಪ್ರತ್ಯೇಕ ನಿರ್ದೇಶಕರು ಇರುವಂತೆ ದಸರಾ ಪ್ರಾಧಿಕಾರಕ್ಕೂ ಪೂರ್ಣ ಪ್ರಮಾಣದ ಹಿರಿಯ ಐಎಎಸ್ ಅಧಿಕಾರಿಯನ್ನು ನಿಯೋಜಿಸಿದರೆ ಅನುಕೂಲವಾಗಲಿದೆ.

ಐಎಎಸ್ ಅಧಿಕಾರಿ ನೇಮಿಸಿ:
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಟ್ಟದ ಅಧಿಕಾರಿಯನ್ನು ನೇಮಿಸಿ, ಅವರ ಅಧೀನದಲ್ಲಿ ಬರುವ ಅಧಿಕಾರಿಗಳನ್ನು ಸದಸ್ಯರನ್ನಾಗಿ ನೇಮಿಸಿಕೊಳ್ಳಬಹುದು. ಅರಮನೆ ಆಡಳಿತ ಮಂಡಳಿ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಮಾದರಿಯಲ್ಲಿ ಜಿಲ್ಲಾಧಿಕಾರಿ ಅವರನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಿಸಬಹುದು. ಇದರಿಂದ ವರ್ಷಪೂರ್ತಿ ದಸರಾ ಕಾರ್ಯಕ್ರಮ ವಿಸ್ತರಿಸಲು ನೆರವಾಗಲಿದೆ.

ಸಮಸ್ಯೆ ನಿವಾರಣೆಗೆ ಇದುವೇ ಸೂಕ್ತ:
ಪ್ರತಿ ಸಲ ದಸರಾ ಸಿದ್ಧತೆಯನ್ನು ಕೊನೆಯ ಹಂತದಲ್ಲೇ ಕೈಗೊಳ್ಳಲಾಗುತ್ತದೆ. ಇದರಿಂದ ಅವ್ಯವಸ್ಥೆ, ಅವಾಂತರ, ಸಮಸ್ಯೆಗಳು, ಲೋಪ-ದೋಷಗಳು ಪುನರಾವರ್ತನೆಯಾಗುತ್ತವೆ. ಇದನ್ನು ತಪ್ಪಿಸಿ ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ, ಸುಸೂತ್ರವಾಗಿ, ಅದ್ದೂರಿಯಾಗಿ, ಅರ್ಥಗರ್ಭಿತವಾಗಿ ನಾಡಹಬ್ಬವನ್ನು ಆಚರಣೆ ಮಾಡಬೇಕೆಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ. ಆದರೆ, ಇದು ಸಾಧ್ಯವಾಗುತ್ತಿಲ್ಲ. ದಸರಾ ಪ್ರಾಧಿಕಾರ ರಚನೆಯಿಂದ ಈ ಎಲ್ಲ ಸಮಸ್ಯೆಗಳು ಬಹುತೇಕ ನಿವಾರಣೆ ಆಗಬಹುದು.

ವಿಲೀನ ಮಾಡಿ ಹೊರೆ ತಗ್ಗಿಸಿ:
ದಸರಾ ಪ್ರಾಧಿಕಾರದಲ್ಲಿ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ, ಅರಮನೆ ಆಡಳಿತ ಮಂಡಳಿಯನ್ನು ವಿಲೀನಗೊಳಿಸಬಹುದು. ಇದರಿಂದ ಕಚೇರಿ, ಸಿಬ್ಬಂದಿ ಸೇರಿದಂತೆ ಮೂಲಸೌಕರ್ಯಗಳು ದೊರೆಯಲಿವೆ. ಹೊಸದಾಗಿ ಸವಲತ್ತುಗಳ ಸೃಷ್ಟಿಗೆ ಸರ್ಕಾರಕ್ಕೆ ಹೊರೆ ಆಗುವುದಿಲ್ಲ.


ತಯಾರಿಗೆ ಹೆಚ್ಚಿನ ಅವಕಾಶ:
ದಸರಾ ಮುಗಿದ ಬಳಿಕ ಮುಂದಿನ ದಸರಾ ಉತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ದಿನಾಂಕವನ್ನು ವರ್ಷಕ್ಕೆ ಮುನ್ನವೇ ಪ್ರಕಟಿಸಿ ಪ್ರವಾಸಿಗರನ್ನು ಆಕರ್ಷಿಸಲು ಪ್ರಯತ್ನಿಸಬೇಕು. ಇದರಿಂದ ವಿದೇಶಿ ಪ್ರವಾಸಿಗರು ಮೈಸೂರು ಪ್ರವಾಸ ಯೋಜನೆ ರೂಪಿಸಿಕೊಳ್ಳಲು ನೆರವಾಗಲಿದೆ. ಜಾಗತಿಕ ಮಟ್ಟದಲ್ಲಿ ಪ್ರಚಾರದ ಜತೆಗೆ, ಪೂರ್ವ ತಯಾರಿಗೂ ಹೆಚ್ಚಿನ ಸಮಯಾವಕಾಶ ಸಿಗಲಿದೆ. ದಸರಾ ಚಟುವಟಿಕೆಗಳಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ದೊರೆಯಲಿದೆ.

ದಸರಾ ಪ್ರಾಧಿಕಾರ ರಚನೆ ಕುರಿತು ಉನ್ನತ ಮಟ್ಟದ ಸಮಿತಿಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಅದಕ್ಕಾಗಿ ತಕ್ಷಣವೇ ಈ ಸಮಿತಿಯ ಸಭೆ ಕರೆಯಲಾಗುವುದು.
ಸಿದ್ದರಾಮಯ್ಯ, ಮುಖ್ಯಮಂತ್ರಿ

ದಸರಾ ಪ್ರಾಧಿಕಾರ ರಚನೆಯಿಂದ ಅನುಕೂಲದೊಂದಿಗೆ ಭದ್ರಬುನಾದಿ ಹಾಕಿದಂತಾಗಲಿದೆ. ದಸರಾ ಪರಂಪರೆ, ಸಾಂಸ್ಕೃತಿಕ ಹಿನ್ನೆಲೆ ತಿಳಿದುಕೊಂಡ ಅಧಿಕಾರಿಯನ್ನು ನೇಮಿಸಬೇಕು. ಇದರಲ್ಲಿ ಕಲಾವಿದರು, ಸಾಹಿತಿಗಳು, ಸಾಂಸ್ಕೃತಿಕ ಹಿನ್ನೆಲೆಯವರನ್ನು ತೊಡಗಿಸಿಕೊಳ್ಳಬೇಕು. ಇಲ್ಲವಾದರೆ ದಸರಾವನ್ನು ಪ್ರತಿ ವರ್ಷ ಕಾಟಾಚಾರಕ್ಕೆ ನಡೆಸಿಕೊಂಡು ಹೋಗುತ್ತಾರೆ. ನಾಡಹಬ್ಬದಲ್ಲಿ ಗಂಭೀರತೆಯೇ ಇರುವುದಿಲ್ಲ.
ಸಿ.ಆರ್.ಹಿಮಾಂಶು, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net