ದಸರಾ ಧರ್ಮ, ಜಾತಿಗೆ ಸಿಮೀತವಲ್ಲ: ಶಾಸಕ ತನ್ವೀರ್ ಸೇಠ್

Tanveer Sait 19-11-2019
Published on

ಮೈಸೂರು: ಯದುವಂಶದ ಮಹಾರಾಜರು ಪಟ್ಟದಲ್ಲಿ ಇಲ್ಲದಿದ್ದಾಗ ದಸರಾ ಮುನ್ನಡೆಸಿದ್ದು ಹೈದರಲಿ ಮತ್ತು ಟಿಪ್ಪು. ಇದನ್ನು ಮರೆಯಬೇಡಿ ಎಂದು ಶಾಸಕ ತನ್ವೀರ್ ಸೇಠ್ ತಿರುಗೇಟು ನೀಡಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ ಬಾನು ಮುಷ್ತಾಕ್ ದಸರಾ ಉದ್ಘಾಟಿಸಲು ವಿರೋಧ ವ್ಯಕ್ತಪಡಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವ್ಯಕ್ತಿಯ ಸ್ಥಾನಮಾನ ಗುರುತಿಸಿ ದಸರಾ ಉದ್ಘಾಟನೆಗೆ ಆಹ್ವಾನಿಸಲಾಗುತ್ತದೆ. ಎಸ್.ಎಲ್.ಭೈರಪ್ಪ ಅವರನ್ನು ಕರೆದಾಗ ನಾವು ಟೀಕೆ ಮಾಡಿಲ್ಲ.

ತಾಯಿ ಚಾಮುಂಡಿಗೆ ಪೂಜೆ ಮಾಡಿಯೇ ದಸರಾ ಮಾಡುತ್ತೇವೆ. ದಸರಾ ಧರ್ಮ, ಜಾತಿಗೆ ಸಿಮೀತವಲ್ಲ. ನನ್ನ ನಂಬಿಕೆ ಏನು ಎಂಬುದು ಎಲ್ಲರಿಗೂ ತೋರಿಸಲು ಆಗಲ್ಲ. ಟೀಕೆ ಮಾಡುವವರಿಗೆ ತಾಳ್ಮೆ ಇರಲಿ. ಬೆಂಕಿಯ ಕಾವು ತೆಗೆದುಕೊಳ್ಳುವ ನೆಪದಲ್ಲಿ ಅದರಲ್ಲಿ ಸುಟ್ಟು ಹೋಗಬೇಡಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹಗೆ ತಿರುಗೇಟು ನೀಡಿದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸದನದಲ್ಲಿ ಆರ್‌ಎಸ್‌ಎಸ್ ಗೀತೆ ಹಾಡಿದರೆ ಅದರ ಅರ್ಥ ಅವರು ಬಿಜೆಪಿ ಪರ ಅಂತಾ ಅಲ್ಲ. ಬೇರೆ ರಾಜಕೀಯ ಪಕ್ಷದ ಸಿದ್ಧಾಂತ ಅರ್ಥ ಮಾಡಿಕೊಂಡರೆ ಅದರಲ್ಲಿ ತಪ್ಪೇನಿದೆ? ಯಾರು ಕೂಡ ತಮ್ಮ ಪಕ್ಷದ ಸಿದ್ಧಾಂತವನ್ನು ಬಲಿ ಕೊಡಲ್ಲ ಎಂದು ಹೇಳಿದರು.

ಡಿಸಿಎಂ ಬಗ್ಗೆ ರಾಜಣ್ಣ ಮಾಡಿರುವ ಟೀಕೆಯೂ ಸರಿ ಇಲ್ಲ. ರಾಜಣ್ಣ ಮಾತಾಡಿರೋದನ್ನು ನಾನು ಒಪ್ಪುವುದಿಲ್ಲ. ಈ ರೀತಿ ಮಾತಾಡಿ ಮಾತಾಡಿ ತಮಗೆ ತಾವೇ ನಷ್ಟ ಅನುಭವಿಸಿದ್ದಾರೆ ಎಂದರು. ಯಾರದೋ ಕೈವಾಡವಿದೆ

ಧರ್ಮಸ್ಥಳ ಪ್ರಕರಣದಲ್ಲಿ ಯಾರೂ ರಾಜಕೀಯ ಮಾಡಬಾರದು. ತನಿಖೆ ಪೂರ್ಣಗೊಳ್ಳುವ ಮುನ್ನವೇ ಸರಿ, ತಪ್ಪು ಎಂಬುದರ ಚರ್ಚೆ ಸರಿಯಲ್ಲ. ಮುಸುಕುಧಾರಿಯ ಮಂಪರು ಪರೀಕ್ಷೆ ಅಗತ್ಯವಾಗಿ ಮಾಡಬೇಕು. ದೊಡ್ಡ ಧಾರ್ಮಿಕ ಸಂಸ್ಥೆ ಮೇಲೆ ಆರೋಪ ಮಾಡಿ ಯಾರೂ ದೊಡ್ಡವರು ಆಗಲ್ಲ.

ಈ ಪ್ರಕರಣದ ಹಿಂದೆ ಯಾರದೋ ಕೈವಾಡವಿದೆ. ಸಮಾಜಘಾತುಕ ಯಾರೇ ಆಗಿರಲಿ, ಅವರಿಗೆ ಶಿಕ್ಷೆ ಆಗಬೇಕು. ಸಮಾಜಘಾತುಕ ಕೆಲಸ ಮಾಡುವವರಿಗೆ ಜಾತಿ, ಧರ್ಮ ಇರಲ್ಲ ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net