ದಸರಾ ದೀಪಾಲಂಕಾರದಲ್ಲಿ ‘ಗ್ಯಾರಂಟಿ’ ಪ್ರತಿಬಿಂಬಿಸಲಿ

45
Published on

ಮೈಸೂರು: ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳು ದಸರಾ ದೀಪಾಲಂಕಾರದಲ್ಲಿ ಪ್ರತಿಬಿಂಬಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸೂಚಿಸಿದರು.


ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಉಪಸಮಿತಿಗಳ ರಚನೆ, ಕಾರ್ಯಕ್ರಮಗಳ ರೂಪುರೇಷೆ ಸಿದ್ಧತೆ ಕುರಿತಂತೆ ಮಂಗಳವಾರ ಅರಮನೆ ಮಂಡಳಿ ಕಚೇರಿಯಲ್ಲಿ ಸಚಿವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.


ದಸರಾ ಉತ್ಸವದಲ್ಲಿ ನಗರದ ಪ್ರಮುಖ ವೃತ್ತಗಳು ಹಾಗೂ ರಸ್ತೆಗಳಿಗೆ ಅಳವಡಿಸುವ ದೀಪಾಲಂಕಾರದಿಂದ ಪ್ರವಾಸಿಗರಿಗೆ ಅತ್ಯುತ್ತಮವಾದ ಸಂದೇಶ ನೀಡಬೇಕು. ಗ್ಯಾರಂಟಿ ಯೋಜನೆಗಳು ಮತ್ತು ಮಹಾನ್ ವ್ಯಕ್ತಿಗಳ ಪ್ರತಿಕೃತಿಗಳನ್ನು ಪ್ರಮುಖ ವೃತ್ತದಲ್ಲಿ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.


ನಮ್ಮ ನಾಡಿನ ಕಲೆ, ಸಂಸ್ಕೃತಿ, ಪರಂಪರೆಯನ್ನು ಸಾರುವ ದಸರಾ ಮಹೋತ್ಸವವನ್ನು ಜನರ ಉತ್ಸವವನ್ನಾಗಿ ಅಚ್ಚುಕಟ್ಟಾಗಿ ನೆರವೇರಿಸಬೇಕು. ಎಲ್ಲ ಉಪಸಮಿತಿಗಳು ಸಮನ್ವಯ ಸಾಧಿಸಿ ಅತ್ಯುತ್ತಮವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮುಖೇನ ನಾಡಹಬ್ಬವನ್ನು ಯಶಸ್ವಿಯಾಗಿಸಬೇಕು ಎಂದು ತಿಳಿಸಿದರು.


ದೇಶ, ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ದಸರಾ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಾರೆ. ಪ್ರತಿಯೊಬ್ಬರಿಗೂ ನಾಡಿನ ಪರಂಪರೆ, ಕಲಾ ವೈಶಿಷ್ಟ್ಯ, ಸಂವಿಧಾನದ ಆಶಯ, ಸರ್ಕಾರದ ಐತಿಹಾಸಿಕ ಯೋಜನೆಗಳು ತಿಳಿಸಿಕೊಡುವ ಕೆಲಸ ಮಾಡಲು ಕೂಡಲೇ ಎಲ್ಲ ಉಪಸಮಿತಿಗಳು ಕಾರ್ಯೋನ್ಮುಖವಾಗಬೇಕು ಎಂದು ಹೇಳಿದರು.


ಸಾಂಸ್ಕೃತಿಕ ಕಾರ್ಯಕ್ರಮಗಳ ವೇದಿಕೆಗಳಲ್ಲಿ ಸ್ಥಳೀಯ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ, ಅವರಿಗೆ ಹೆಚ್ಚಿನ ಆದ್ಯತೆ ನೀಡಿ ಪ್ರೋತ್ಸಾಹಿಸಬೇಕು. ನಾಡಿನ ಎಲ್ಲ ಕಲಾ ಪ್ರಕಾರಗಳನ್ನು ಜನರಿಗೆ ಪರಿಚಯ ಮಾಡಿಕೊಡುವ ಕಾರ್ಯಕ್ರಮ ಒಳಗೊಂಡಿರಬೇಕು. ಸಂಗೀತ, ನಾಟಕ, ನೃತ್ಯ ಇನ್ನಿತರ ಕಲಾ ಪ್ರಕಾರಗಳನ್ನು ನೋಡಿ ಕಲಾರಸಿಕರು ಆಸ್ವಾದಿಸುವಂತಹ ಕಾರ್ಯಕ್ರಮ ರೂಪಿಸಬೇಕು ಎಂದರು.


ಯುವ ಜನರನ್ನು ಹೆಚ್ಚು ಆಕರ್ಷಿಸುವ ಹಾಗೂ ಜನರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸುವ ಯುವ ಸಂಭ್ರಮ, ಯುವ ದಸರಾ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು. ಈ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ, ಅಚ್ಚುಕಟ್ಟಾಗಿ ನಡೆಸಬೇಕು ಎಂದರು


ಆಹಾರ ಮೇಳದಲ್ಲಿ ಶುಚಿ ಹಾಗೂ ರುಚಿಯಿಂದ ಉತ್ತಮವಾಗಿ ಆಹಾರ ತಯಾರಿಸುವವರಿಗೆ ಪ್ರಾಮುಖ್ಯತೆ ನೀಡಿ ಮಳಿಗೆ ನೀಡಬೇಕು ಎಂದರು.
ಫಲಪುಷ್ಪ ಪ್ರದರ್ಶನವು ಪ್ರತಿಯೊಬ್ಬರನ್ನೂ ಆಕರ್ಷಿಸುವ ಕಾರ್ಯಕ್ರಮವಾಗಿದೆ. ಆದ್ದರಿಂದ ಪ್ರದರ್ಶನವು ಹೆಚ್ಚಿನ ಮಟ್ಟದಲ್ಲಿ ಕಲಾತ್ಮಕ ಹಾಗೂ ಸೃಜನಶೀಲದಿಂದ ಕೂಡಿರಬೇಕು. ವಿವಿಧ ಕುಸುಮಗಳಿಂದ ಅರಳಿದ ಕಲಾಕೃತಿಗಳನ್ನು ದಸರಾಗೆ ಬರುವ ಪ್ರವಾಸಿಗರು ಕಣ್ತುಂಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸುವಷ್ಟು ಸುಂದರವಾಗಿ ಮೂಡಿಬರಬೇಕು ಎಂದು ಹೇಳಿದರು.


ಸ್ವಚ್ಛತೆಗೆ ಶ್ರಮಿಸಿ:
ದಸರಾ ಸಂದರ್ಭದಲ್ಲಿ ನಗರವನ್ನು ಸ್ವಚ್ಛತೆಯಿಂದಿಡಲು ನಗರ ಪಾಲಿಕೆಯು ಹೆಚ್ಚಿನ ಶ್ರಮವಹಿಸಬೇಕು. ರಸ್ತೆ ಇಕ್ಕೆಲಗಳಲ್ಲಿ ಹಾಗೂ ಕಾರ್ಯಕ್ರಮ ನಡೆಯುವ ಸ್ಥಳಗಳಲ್ಲಿ ಆ ದಿನವೇ ತ್ವರಿತವಾಗಿ ಸ್ವಚ್ಛಗೊಳಿಸಬೇಕು. ಬೆಳಗ್ಗೆ ಹಾಗೂ ರಾತ್ರಿ ಎರಡೂ ಪಾಳಿಯಲ್ಲಿ ಕೆಲಸ ನಿರ್ವಹಿಸಲು ತಂಡವನ್ನು ರಚಿಸಬೇಕು ಎಂದು ಸೂಚಿಸಿದರು.


ಉಪ ಸಮಿತಿಯು ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಬಗ್ಗೆ ಮತ್ತೊಂದು ಸಭೆ ನಡೆಸಿ ವಿಸ್ತಾರವಾಗಿ ಚರ್ಚಿಸಲಾಗುವುದು. ಎಲ್ಲ ಅಧಿಕಾರಿಗಳು ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.


ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ, ನಗರ ಪೊಲೀಸ್ ಆಯುಕ್ತ ಬಿ.ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ನಗರ ಪಾಲಿಕೆ ಆಯುಕ್ತ ಅಶಾದ್ ಉರ್ ರೆಹ್ಮಾನ್ ಶರೀಫ್, ಮುಡಾ ಆಯುಕ್ತ ದಿನೇಶ್ ಕುಮಾರ್, ಜಿಪಂ ಉಪ ಕಾರ್ಯದರ್ಶಿ ಡಾ.ಎಂ.ಕೃಷ್ಣರಾಜು, ಪ್ರವಾಸೋದ್ಯಮ ಉಪ ನಿರ್ದೇಶಕಿ ಸವಿತಾ, ಅರಮನೆ ಮಂಡಳಿ ಉಪ ನಿರ್ದೇಶಕ ಸುಬ್ರಹ್ಮಣ್ಯ, ಪ್ರಾಧ್ಯಾಪಕ ಡಾ.ಬಿ.ಎಸ್.ಚಂದ್ರಶೇಖರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net