ದಸರಾ ದೀಪಾಲಂಕಾರ ವೀಕ್ಷಣೆಗೆ ಮುಗಿಬಿದ್ದ ಜನ

DSC_2011
Published on

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿದ್ಯುತ್ ದೀಪಾಲಂಕಾರ ನೋಡಲು ಸಾರ್ವಜನಿಕರು ಮುಗಿಬೀಳುತ್ತಿದ್ದಾರೆ. ಸಂಜೆ ಹೊತ್ತಿನಲ್ಲಿ ನಗರದ ಹೃದಯ ಭಾಗದಲ್ಲಿ ಜನಜಂಗುಳಿ, ವಾಹನ ದಟ್ಟಣೆ ಕಂಡು ಬರುತ್ತಿದೆ.

ಸೆ.26ರಿಂದ ಅ.5ರವರೆಗೆ ದಸರಾ ಅದ್ದೂರಿಯಾಗಿ ನೆರವೇರಿತ್ತು. ಪ್ರವಾಸಿಗರಿಗಾಗಿ ದೀಪಾಲಂಕಾರ ಅವಧಿಯನ್ನು ಅ.10ರವರೆಗೂ ವಿಸ್ತರಣೆ ಮಾಡಲಾಗಿದೆ. ಇದರಿಂದಾಗಿ ಏಕಮುಖ ಸಂಚಾರ ವ್ಯವಸ್ಥೆ, ಕೆಲ ಕಡೆ ವಾಹನಗಳ ನಿಲುಗಡೆ ನಿಷೇಧ ಕೂಡ ಮುಂದುವರಿದೆ. ಅದಾಗ್ಯೂ ಟ್ರಾಫಿಕ್ ಜಾಮ್ ಕಡಿಮೆ ಆಗುತ್ತಿಲ್ಲ. ದಸರಾ ವಸ್ತುಪ್ರದರ್ಶನ ಹೊರತುಪಡಿಸಿ ನಾಡಹಬ್ಬದ ಅಂಗವಾಗಿ ನಡೆದ ಆಹಾರ ಮೇಳ, ಯುವ ದಸರಾ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಎಲ್ಲ ಕಾರ್ಯಕ್ರಮಗಳು ಮುಗಿದಿವೆ. ಈಗ ಉಳಿದಿರುವುದು ನಗರದ ಪ್ರಮುಖ ರಸ್ತೆ, ವೃತ್ತದಲ್ಲಿ ಅಳವಡಿಸಿರುವ ದೀಪಾಲಂಕಾರ ಮಾತ್ರ. ಅದನ್ನು ನೋಡಲು ಜನರು ಈಗಲೂ ಬರುತ್ತಿದ್ದಾರೆ.

ಮಳೆ ನಿಂತರೂ ಹನಿ ಇಲ್ಲದು ಎಂಬಂತೆ ದಸರಾ ಮುಗಿದ ಬಳಿಕವೂ ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಏನು ಕಡಿಮೆಯಾಗಿಲ್ಲ. ಶಾಲಾ-ಕಾಲೇಜುಗಳಿಗೆ ದಸರಾ ರಜೆ ಇದೆ. ಇದರೊಂದಿಗೆ ಪಾಲಕರಿಗೆ 2ನೇ ಶನಿವಾರ ಮತ್ತು ಭಾನುವಾರ ರಜೆ ಇದೆ. ಹೀಗಾಗಿ, ಕುಟುಂಬ ಸಮೇತ ಜನರು ಮೈಸೂರಿಗೆ ಲಗ್ಗೆ ಇಟ್ಟಿದ್ದಾರೆ. ಹೀಗೆ ಬಂದವರು ದೀಪಾಲಂಕಾರ ನೋಡದೆ ಹೋಗುತ್ತಿಲ್ಲ. ಎಷ್ಟೋ ಜನರು ಲೈಟಿಂಗ್ ವೀಕ್ಷಣೆಗಾಗಿ ಬೆಂಗಳೂರು ಸೇರಿದಂತೆ ಅಕ್ಕಪಕ್ಕದ ಜಿಲ್ಲೆಯಿಂದ ಬರುತ್ತಿದ್ದಾರೆ. ಆದ್ದರಿಂದ ಮೈಸೂರು ಹೃದಯ ಭಾಗದಲ್ಲಿ ಜನರಿಂದ ತುಂಬಿ ಹೋಗಿದೆ.

ಸಂಜೆ ಹೊತ್ತಿನಲ್ಲಿ ಅರಮನೆ ಸುತ್ತಿನ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ಕಂಡು ಬರುತ್ತಿದೆ. ಸಯ್ಯಜಿರಾವ್ ರಸ್ತೆ, ಆಲ್ಬರ್ಟ್ ವಿಕ್ಟರ್ ರಸ್ತೆ, ಅಶೋಕರಸ್ತೆ, ಇರ್ವಿನ್ ರಸ್ತೆ, ಬಿಎನ್ ರಸ್ತೆ, ಚಾಮರಾಜ ಜೋಡಿ ರಸ್ತೆ, ಜೆಎಲ್‌ಬಿ ರಸ್ತೆಯಲ್ಲಿ ಅಳವಡಿಸಿರುವ ದೀಪಾಲಂಕಾರವನ್ನು ನೋಡಲು ಜನರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಕೆಆರ್ ವೃತ್ತ, ಜಯಚಾಮರಾಜ ಒಡೆಯರ್ ವೃತ್ತ, ಕೋಟೆ ಆಂಜನೇಯಸ್ವಾಮಿ ಆವರಣ, ಸಂಸ್ಕೃತ ಪಾಠಶಾಲೆ ವೃತ್ತ, ಆಯುರ್ವೇದಿಕ್ ಕಾಲೇಜಿನ ವೃತ್ತ, ರೈಲ್ವೆ ನಿಲ್ದಾಣ ಬಳಿ ವೃತ್ತದಲ್ಲಿರುವ ಲೈಟಿಂಗ್ ನೋಡಲು ಬಹಳಷ್ಟು ಜನರು ಕಾತರರಾಗಿದ್ದಾರೆ. ಇದನ್ನು ವೀಕ್ಷಿಸಲು ಪ್ರವಾಸಿಗರ ದಂಡು ಬರುತ್ತಿರುವುದರಿಂದ ಈ ಪ್ರದೇಶದಲ್ಲಿ ಹೆಚ್ಚಿನ ವಾಹನ ಮತ್ತು ಜನ ದಟ್ಟಣೆ ಕಂಡು ಬರುತ್ತಿದೆ.

ಈ ಸಂದರ್ಭದಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕಾಗಿದೆ. ದೀಪಾಲಂಕಾರ ವನ್ನು ವೀಕ್ಷಿಸುವ ಜನರು ವಿದ್ಯುತ್ ದೀಪಗಳನ್ನು ಸ್ಪರ್ಶಿಸುವುದು, ಸೆಲ್ಫಿ ತೆಗೆದುಕೊಳ್ಳು ವುದು, ಸ್ಪರ್ಶಿಸುವಂತೆ ಮಕ್ಕಳಿಗೆ ಪ್ರೇರೇಪಿಸುವುದು ಇತ್ಯಾದಿ ಅಸುರಕ್ಷಿತ ಚಟುವಟಿಕೆಗಳು ನಡೆಯುತ್ತಿವೆ. ಇದರಿಂದ ವಿದ್ಯುತ್ ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ.

ಸುರಕ್ಷತಾ ದೃಷ್ಟಿಯಿಂದ ಸಾರ್ವಜನಿಕರು ಯಾವುದೇ ರೀತಿಯಾಗಿ ದೀಪಾಲಂಕಾರ ಸ್ಪರ್ಶಿಸುವ ಪ್ರಯತ್ನ ಮಾಡಬಾರದು. ಜತೆಯಲ್ಲಿರುವ ಮಕ್ಕಳನ್ನು ಯಾವುದೇ ಕಾರಣಕ್ಕೂ ವಿದ್ಯುತ್‌ದೀಪ ಹಾಗೂ ತಂತಿಗಳನ್ನು ಮುಟ್ಟಲು ಪ್ರಯತ್ನಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸೆಸ್ಕ್ ತಿಳಿಸಿದೆ.

ಪ್ರವಾಸಿ ತಾಣಗಳೂ ಹೌಸ್‌ಫುಲ್
ನಗರದ ಪ್ರವಾಸಿ ತಾಣಗಳೂ ಹೌಸ್‌ಫುಲ್ ಆಗಿವೆ. ಶನಿವಾರ ಸಹ ಅರಮನೆಗೆ ಭೇಟಿ ನೀಡುವ ಜನರ ಸಂಖ್ಯೆ ಅಧಿಕವಾಗಿತ್ತು. ಮೃಗಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಟಿಕೆಟ್ ಕೌಂಟರ್ ಬಳಿ ನೂಕುನುಗ್ಗಲು ಉಂಟಾಗಿತ್ತು. ಚಾಮುಂಡಿಬೆಟ್ಟ ಪ್ರವಾಸಿಗರಿಂದ ತುಂಬಿತ್ತು. ಸಾಲು ಸಾಲು ವಾಹನಗಳಿಂದ ಬೆಟ್ಟದ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತಗೊಂಡು ಪರದಾಡುವಂತಾಯಿತು. ಸಂಚಾರ ನಿರ್ವಹಣೆಗೆ ಪೊಲೀಸರು ಹರಸಾಹಸಪಟ್ಟರು.

ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ, ಜಗನ್ಮೋಹನ ಅರಮನೆ ವೀಕ್ಷಿಸಿದ ಜನರು ದಸರಾ ವಸ್ತುಪ್ರದರ್ಶನಕ್ಕೆ ಲಗ್ಗೆ ಇಟ್ಟಿದ್ದರು. ಸಂಜೆ ಹೊತ್ತಿನಲ್ಲಿ ವಸ್ತುಪ್ರದರ್ಶನ ಆವರಣ ಜನರಿಂದ ತುಂಬಿ ಹೋಗಿತ್ತು. ಮೈಸೂರಿನ ಪ್ರವಾಸಿ ತಾಣಗಳನ್ನು ವೀಕ್ಷಿಸಿದ ಜನರು ರಾತ್ರಿ ಕೆಆರ್‌ಎಸ್‌ಗೆ ಭೇಟಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net