

ಬೇಲೂರು: ಬಾಳೆಹೊನ್ನೂರು ರಂಭಾಪುರಿ ಪೀಠದ ಶರನ್ನವರಾತ್ರಿ ದಸರಾ ಧರ್ಮಸಮ್ಮೇಳನದ ಪ್ರಯುಕ್ತ ಭಾನುವಾರ ಬೇಲೂರು ಪಟ್ಟಣಕ್ಕೆ ಜಗದ್ಗುರು ವೀರಸೋಮೇಶ್ವರ ಭಗವತ್ಪಾದಾಚಾರ್ಯರ ಪುರಪ್ರವೇಶವು ಸಹಸ್ರಾರು ಭಕ್ತಗಣದ ಜೈಕಾರದ ನಡುವೆ ವೈಭವದಿಂದ ಜರುಗಿತು.
ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನ ಮೂಲ ಮಠದಿಂದ ಹೊರಟು ಸಾಯಂಕಾಲ ಗೋಧೂಳಿ ಮುಹೂರ್ತದಲ್ಲಿ ಪಟ್ಟಣದ ಹೆಬ್ಬಾಗಿಲಿಗೆ ಪ್ರವೇಶಿಸಿದ ಜಗದ್ಗುರುಗಳನ್ನು 108 ಕಲಶ ಹೊತ್ತ ಮಹಿಳೆಯರು ಮಂಗಳವಾದ್ಯದೊಂದಿಗೆ ಸ್ವಾಗತಿಸಿದರೆ, ಸುಮಂಗಲಿಯರು ಆರತಿ ಬೆಳಗಿ ಗೌರವ ಸಮರ್ಪಿಸಿದರು. ಪುಷ್ಪಾಲಂಕೃತ ರಜತ ಮಂಟಪದಲ್ಲಿ ಆಸೀನರಾದ ಶ್ರೀಗಳಿಗೆ ಭಕ್ತವೃಂದವು ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ದೊರಕಿತು. ರಥವು ಸಾಗಿಬಂದ ದಾರಿಯಯುದ್ದಕ್ಕೂ ಕೊಂಬು, ಕಹಳೆ, ನಗಾರಿ, ಚಿಟ್ಟಿಮೇಳ ಹಾಗೂ ವಿವಿಧ ಜಾನಪದ ಕಲಾತಂಡಗಳ ಅದ್ಧೂರಿ ಪ್ರದರ್ಶನವು ನಡೆಯಿತು.
ನೆಹರೂ ನಗರದ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದಿಂದ ಆರಂಭವಾದ ವೈಭವದ ಮೆರವಣಿಗೆ ಯಗಚಿ ನದೀ ಸೇತುವೆ ಮೂಲಕ ಪಟ್ಟಣದ ಹೃದಯಭಾಗವನ್ನು ತಲುಪಿತು. ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದ ಸಹಸ್ರಾರು ಭಕ್ತರು ಶ್ರೀಗಳಿಗೆ ಜಯಕಾರ ಕೂಗಿದರಲ್ಲದೆ ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಘೋಷವಾಕ್ಯವನ್ನು ಪುನರುಚ್ಚರಿಸುತ್ತಾ ಶ್ರೀಗಳು ವಾಸ್ತವ್ಯ ಮಾಡಲಿರುವ ಶಿವಕುಮಾರ ಸ್ವಾಮೀಜಿ ಕಲ್ಯಾಣ ಮಂಟಪದವರೆಗೆ ಸಾಗಿಬಂದರು. ಧರ್ಮಸಮ್ಮೇಳನದ ಪೀಠಾಲಂಕಾರ ಮಾಡಲಿರುವ ಜಗದ್ಗುರುಗಳನ್ನು ಶಾಸಕ ಕೆ.ಎಸ್.ಲಿಂಗೇಶ್, ಆದರದಿಂದ ವಾಸ್ತವ್ಯ ಸ್ಥಾನಕ್ಕೆ ಕರೆತಂದರು. ಮೆರವಣಿಗೆ ಆರಂಭಕ್ಕೂ ಮುನ್ನ ವೀರಶೈವ ಸಂಘದ ನೂರಾರು ಯುವಕರು ಬೈಕ್ ರ‌್ಯಾಲಿ ನಡೆಸಿ ಗಮನ ಸೆಳೆದರು. ಜಿಲ್ಲೆಯಲ್ಲದೆ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಭಕ್ತಾದಿಗಳು ಶ್ರೀಗಳ ರಥದ ಜತೆ ಸಾಗಿಬಂದು ಭಕ್ತಿಭಾವ ಪ್ರದರ್ಶಿಸಿದರು.
ಪ್ರತಿನಿತ್ಯ ಇಷ್ಟಲಿಂಗ ಪೂಜೆ
ಪ್ರತಿನಿತ್ಯ ಉಷಃಕಾಲದಲ್ಲಿ ಸುಮಂಗಲಿಯರು ಹೊತ್ತು ತರುವ ಅಗ್ರೋದಕದೊಂದಿಗೆ ಜಗದ್ಗುರುಗಳ ಇಷ್ಟಲಿಂಗ ಪೂಜೆಯು ಆರಂಭವಾಗಲಿದ್ದು, ಭಸ್ಮ-ಗಂಧಾಕ್ಷತೆ ಮುಂತಾದ ಮಂಗಳದ್ರವ್ಯಗಳನ್ನು ಸಮರ್ಪಿಸಿ ಬಿಲ್ವಾರ್ಚನೆಯ ಮಹಾಪೂಜೆಯನ್ನು ನಡೆಸುವರು. ಪೂಜೆಯ ವೀಕ್ಷಣೆಗೆ ಭಕ್ತರಿಗೆ ಅನುಕೂಲ ಕಲ್ಪಿಸಲಾಗಿದ್ದು ಮಠದ ನಿಯಮಾನುಸಾರ ಶ್ರದ್ಧಾ-ಭಕ್ತಿಯಿಂದ ಪಾಲ್ಗೊಳ್ಳಲು ಸೂಚನೆಯನ್ನು ಈಗಾಗಲೆ ನೀಡಲಾಗಿದೆ. ಪೂಜಾ ಧಾರ್ಮಿಕ ಕಾರ್ಯಗಳು ನಡೆಯುವ ಸ್ಥಳದಲ್ಲಿ ಸಭೆ ಸಮಾರಂಭಗಳಿಗೆ ಅವಕಾಶ ಇರುವುದಿಲ್ಲ ಮತ್ತು ಧರ್ಮಸಮ್ಮೇಳನ ನಡೆಯುವ ಸ್ಥಳದಲ್ಲಿ ಮಾಲಾರ್ಪಣೆ ಮುಂತಾದ ಗೌರವ ಸಮರ್ಪಣೆಗೂ ಅವಕಾಶವಿರುವುದಿಲ್ಲ ಎಂದು ತಿಳಿಸಲಾಗಿದೆ.
ಪಂಚಪೀಠದ ಪರಂಪರೆಯಂತೆ ಶರನ್ನವರಾತ್ರಿ ಪೂಜೆಯ ಕಡೆಯದಿನ ವಿಜಯದಶಮಿಯಂದು ಸ್ವತಃ ಶ್ರೀಗಳೇ ಅಗ್ರೋದಕ ಹೊತ್ತು ತರಲಿದ್ದು 1008 ಕಲಶಗಳನ್ನು ಹೊತ್ತ ಮಹಿಳೆಯರು ಜತೆಯಲ್ಲಿ ಸಾಗಿ ಬರಲಿದ್ದಾರೆ. ಪ್ರತಿನಿತ್ಯ ಸಾಯಂಕಾಲ 6ಗಂಟೆಯಿಂದ ಧರ್ಮಸಮ್ಮೇಳನದ ದರ್ಬಾರ್ ಕಾರ್ಯಕ್ರಮ ನಡೆಯಲಿದ್ದು ಜತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗಲಿವೆ. ಹತ್ತು ದಿನ ಶಿವಕುಮಾರ ಸ್ವಾಮೀಜಿ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಹೂಡಲಿರುವ ಶ್ರೀಗಳು ನಿತ್ಯಪೂಜಾ ಕೈಂಕರ್ಯಗಳನ್ನು ಮುಗಿಸಿದ ಬಳಿಕ ಸಾರ್ವಜನಿಕರಿಗೆ ದರ್ಶನ ಹಾಗೂ ಆಶೀರ್ವಾದ ನೀಡಲಿದ್ದಾರೆ.
ಹತ್ತು ದಿನವೂ ಅನ್ನದಾಸೋಹ
ಧರ್ಮಸಮ್ಮೇಳನಕ್ಕೆ ಆಗಮಿಸುವ ಸಹಸ್ರಾರು ಭಕ್ತರಿಗೆ ಪ್ರತಿದಿನ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿದೆ. ಅದಕ್ಕಾಗಿ ಬೃಹತ್ ಅಡುಗೆಮನೆಯನ್ನು ನಿರ್ಮಿಸಲಾಗಿದೆ. 150ಕ್ಕೂ ಹೆಚ್ಚು ಮಖ್ಯ ಬಾಣಸಿಗರು 9 ದಿನವೂ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಲಿದ್ದು ಸಮ್ಮೇಳನಕ್ಕೆ ಬರುವ ಜನರಿಗೆ ಹಸಿವು ಇಂಗಿಸುವ ಕಾರ್ಯ ಮಾಡಲಿದ್ದಾರೆ. ಈಗಾಗಲೆ ವಿವಿಧ ಬಗೆಯ ತರಕಾರಿ ಹಾಗೂ ದಿನಸಿ ಪದಾರ್ಥಗಳು ಕಾಣಿಕೆ ರೂಪದಲ್ಲಿ ಬಂದಿದ್ದು ಇನ್ನಷ್ಟು ವಸ್ತುಗಳು ಹೇರಳವಾಗಿ ಸಂಗ್ರಹಣೆಯಾಗಲಿದೆ. ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬರೂ ಪ್ರಸಾದವಿಲ್ಲದೆ ಹಿಂದಿರುಗಬಾರದೆಂಬ ಮಠದ ಪರಂಪಪರೆಯನ್ನು ಇಲ್ಲೂ ಅನುಸರಿಸಲಾಗುತ್ತಿದೆ. ಶ್ರೀಗಳ ಪುರಪ್ರವೇಶದ ಮೊದಲ ದಿನ ಸಿಹಿಬೂಂದಿ, ತರಕಾರಿ ಪಲ್ಯ ಹಾಗೂ ಅನ್ನ-ಸಾಂಬಾರ್ ಜತೆಗೆ ಮೊಸರನ್ನವನ್ನು ಉಣಬಡಿಸಲಾಯಿತು. ವಿಜಯದಶಮಿ ಸೀಮೋಲ್ಲಂಘನ ಯಾತ್ರೆಯವರೆಗೂ ವಿವಿಧ ಬಗೆಯ ಊಟೋಪಚಾರವು ಭಕ್ತಾದಿಗಳಿಗೆ ದೊರಕಲಿದೆ.
ಶ್ರೀಗಳಿಂದ ಪರ್ತಕರ್ತರಿಗೆ ಗುರುರಕ್ಷೆ