ದಸರಾ ಜಂಬೂ ಸವಾರಿ: ಅರಮನೆಯಲ್ಲಿ 11,600 ಆಸನಗಳು ಕಡಿತ

Jambusavari
Published on

ಮೈಸೂರು: ನಾಡಹಬ್ಬ ದಸರಾ ಮಹೋತ್ಸವ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ವೀಕ್ಷಣೆಗಾಗಿ ಮೈಸೂರು ಅರಮನೆಯಲ್ಲಿ ಆಸನಗಳ ಸಂಖ್ಯೆಯನ್ನು ಈ ಬಾರಿ ಕಡಿತ ಮಾಡಲಾಗಿದೆ.

2023ರಲ್ಲಿ 38 ಸಾವಿರ ಆಸನಗಳು, 2024ರಲ್ಲಿ ಕಳೆದ ವರ್ಷ ದಾಖಲೆಯ 59,600 ಆಸನಗಳ ವ್ಯವಸ್ಥೆಯನ್ನು ಜಿಲ್ಲಾಡಳಿತದಿಂದ ಮಾಡಲಾಗಿತ್ತು. ಈ ಸಲ 48,000 ಆಸನ ವ್ಯವಸ್ಥೆ ಮಾಡಲು ತೀರ್ಮಾನಿಸಲಾಗಿದೆ. 11,600 ಆಸನಗಳು ಕಡಿತವಾಗಲಿವೆ.

ಸೆಪ್ಟಂಬರ್ 22ಕ್ಕೆ ದಸರಾ ಉತ್ಸವ ಚಾಲನೆ ದೊರೆಯಲಿದೆ. ಅಕ್ಟೋಬರ್ 2ರ ವಿಜಯದಶಮಿ ದಿನ ಜಂಬೂಸವಾರಿ ಮೆರವಣಿಗೆ ನಿಗದಿಯಾಗಿದೆ. ಅಭಿಮನ್ಯು ಆನೆ ಹೊರುವ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ಪ್ರತಿಷ್ಠಾಪಿತ ಚಾಮುಂಡೇಶ್ವರಿ ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಸಾಗಲಿದೆ. ಜಂಬೂಸವಾರಿ ವೀಕ್ಷಣೆಗೆ ಸಹಸ್ರಾರು ಜನರು ಮೈಸೂರಿಗೆ ದೌಡಾಯಿಸುತ್ತಾರೆ. ಈ ಸಲ ಅರಮನೆಯಲ್ಲಿ ಆಸನ ಸಂಖ್ಯೆ ಕಡಿಮೆ ಮಾಡಿರುವುದರಿಂದ ಹೆಚ್ಚಿನ ಜನರಿಗೆ ಅವಕಾಶ ದೊರೆಯುವುದಿಲ್ಲ.

ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಕಾಲ್ತುಳಿತ ಘಟನೆಯ ಬಳಿಕ ಪೊಲೀಸ್ ಇಲಾಖೆ ರೂಪಿಸಿರುವ ಪ್ರಮಾಣೀಕೃತ ಕಾರ್ಯಾಚರಣೆ ವಿಧಾನವನ್ನು (ಎಸ್‌ಒಪಿ) ನಾಡಹಬ್ಬದಲ್ಲೂ ಪಾಲಿಸಲು ಕ್ರಮ ತೆಗೆದುಕೊಂಡಿದ್ದು, ಇದರಿಂದ ಆಸನಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ.

ಅಲ್ಲದೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ದಸರಾ ಉನ್ನತಮಟ್ಟದ ಸಮಿತಿ ಸಭೆಯಲ್ಲಿ ಈ ಸಲ ಆಸನಗಳ ಸಂಖ್ಯೆ ಕಡಿಮೆ ಮಾಡಲು ನಿರ್ಣಯ ತೆಗೆದುಕೊಳ್ಳಲಾಗಿತ್ತು. ಇದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅಧ್ಯಕ್ಷತೆಯ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲೂ ಚರ್ಚೆ ನಡೆಸಲಾಗಿದೆ.

48 ಸಾವಿರ ಆಸನ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ. ಅಷ್ಟೇ ಪ್ರಮಾಣದಲ್ಲಿ ಪಾಸ್, ಟಿಕೆಟ್, ಕಾರ್ಡ್ ವಿತರಣೆ ಮಾಡಲು ತೀರ್ಮಾನಿಸಲಾಗಿದೆ. ಇದರಿಂದಾಗಿ ವಿವಿಐಪಿ, ವಿಐಪಿಗಳಿಗೆ ಸಹ 1 ಸಾವಿರ ಆಸನ ಕಡಿತವಾಗಲಿದೆ. ಒಟ್ಟಾರೆಯಾಗಿ ಪ್ರತಿ ವಿಭಾಗದಲ್ಲೂ ತಲಾ ಸರಾಸರಿ 500 ರಿಂದ ಸಾವಿರ ಆಸನಗಳು ಕಡಿಮೆಯಾಗಲಿವೆ.

ಸಿಎಂ ಅಧ್ಯಕ್ಷೆಯಲ್ಲಿ ನಡೆದ ದಸರಾ ಉನ್ನತ ಸಮಿತಿ ಸಭೆಯಲ್ಲಿ ಅರಮನೆಯ ಆವರಣದಲ್ಲಿ ಆಸನಗಳ ಸಂಖ್ಯೆ ಕಡಿಮೆ ಮಾಡಲು ತೀರ್ಮಾನಿಸಲಾಗಿದೆ. ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net