

ಮೈಸೂರು: ಪ್ರಸ್ತಕ ಸಾಲಿನ ದಸರಾ ಚಲನಚಿತ್ರೋತ್ಸವದಲ್ಲಿ 84 ಸಿನಿಮಾಗಳು ವೀಕ್ಷಿಸುವ ಅವಕಾಶ ಚಿತ್ರ ರಸಿಕರಿಗೆ ದೊರೆಯಲಿದೆ.
ಸದಭಿರುಚಿಯ ಸಾಮಾಜಿಕ ಸಂದೇಶ ನೀಡುವ ಹಾಗೂ ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಪುರಸ್ಕೃತ ಚಲನಚಿತ್ರಗಳನ್ನು ಸೆ.14ರಿಂದ 20ವರೆಗೆ ಮಾಲ್ ಆಫ್ ಮೈಸೂರಿನಲ್ಲಿರುವ ‘ಇನಾಕ್ಸ್’ ಮಲ್ಟಿಫ್ಲೆಕ್ಸ್‌ನಲ್ಲಿರುವ 3 ಪರದೆಗಳಲ್ಲಿ ಪ್ರದರ್ಶಿಸಲಾಗುತ್ತಿದೆ. ಮಕ್ಕಳ ಚಿತ್ರಗಳು ಹಾಗೂ ಮಹಿಳಾ ನಿರ್ದೇಶನದ ಚಿತ್ರಗಳಿಗೂ ಪ್ರಾಧಾನ್ಯತೆ ನೀಡಲಾಗಿದೆ.
ಚಲನಚಿತ್ರ ಉಪಸಮಿತಿ ವತಿಯಿಂದ ದಸರಾ ಚಲನಚಿತ್ರೋತ್ಸವವನ್ನು ಆಯೋಜನೆ ಮಾಡಲಾಗುತ್ತಿದ್ದು, ಸೆ.13ರಂದು ಬೆಳಗ್ಗೆ 11ಕ್ಕೆ ಮಾಲ್ ಆಫ್ ಮೈಸೂರಿನ ನೆಲಮಹಡಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉಪಸ್ಥಿತಿಯಲ್ಲಿ ಉದ್ಘಾಟನೆ ನೆರವೇರಲಿದೆ.
ಉದ್ಘಾಟನೆ ಕಾರ್ಯಕ್ರಮದಲ್ಲಿ ‘ಸು ಫ್ರಮ್ ಸೋ’ ಖ್ಯಾತಿಯ ಸಂಧ್ಯಾ ಅರಕೆರೆ, ನಾಯಕ ನಟರಾದ ಪೃಥ್ವಿ ಅಂಬರ್, ಹಿನ್ನೆಲೆ ಖ್ಯಾತ ಗಾಯಕರಾದ ಜಸ್ ಕರಣ್ ನಾಗರ್ಜುನ್ ಶರ್ಮಾ, ನಾಯಕ ನಟಿಯಾದ ಅಂಜಲಿ ಭಾಗವಹಿಸಲಿದ್ದಾರೆ.
ಅಭಿನಯ ಶಾರದೆ, ಕನ್ನಡ ಚಿತ್ರರಂಗದ ಮೊದಲ ಮಹಿಳಾ ಸೂಪರ್ ಸ್ಟಾರ್ ದಿವಂಗತ ಬಿ.ಸರೋಜಾ ದೇವಿ ಅವರ ನೆನಪಿನಲ್ಲಿ ಈ ಬಾರಿಯ ಚಲನಚಿತ್ರೋತ್ಸವ ಹಮ್ಮಿಕೊಳ್ಳಲಾಗಿದ್ದು, ಅವರ ಅಭಿನಯದ ಚಲನಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ.
ಪ್ರಗತಿ ಅಶ್ವತ್ಥ್ ನಾರಾಯಣ್ ನೇತೃತ್ವದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಪುಟ್ಟಣ್ಣ ಕಣಗಲ್, ಎನ್ ಲಕ್ಷ್ಮೀನಾರಾಯಣ್, ಸಿದ್ಧಲಿಂಗಯ್ಯ ಅವರ ತೆರೆಯ ಮರೆಯ ಶೈಲಿಯನ್ನು ಭಿತ್ತರಿಸುವ ಛಾಯಾಚಿತ್ರ ಪ್ರದರ್ಶನ ಆಯೋಜಿಸಿದ್ದು, ಈ ಸಿನಿ ಫೋಟೋ ಪ್ರದರ್ಶನವನ್ನು ‘ಐನಾಕ್ಸ್ ಸಿನಿಮಾಸ್’ ಹೊರಆವರಣದಲ್ಲಿ ಸೆ.14ರಿಂದ 18ರವರೆಗೆ ಆಯೋಜನೆ ಮಾಡಲಾಗಿದೆ.
ಯುವ ಜನಾಂಗಕ್ಕೆ ಪ್ರೋತ್ಸಾಹ ನೀಡಲು ಕಿರುಚಿತ್ರ ಸ್ಪರ್ಧೆ ಏರ್ಪಡಿಸಲಾಗಿದ್ದು, ಆಯ್ಕೆಗೊಂಡ ಉತ್ತಮ ಕಿರುಚಿತ್ರಗಳನ್ನು ಸಹ ದೊಡ್ಡ ಪರದೆಯಲ್ಲಿ ಪ್ರದರ್ಶಿಸಲಾಗುವುದು.
ಸೆ.18ರಂದು ಕಿರುಚಿತ್ರಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ, ಅತ್ಯುತ್ತಮ ಸಂಕಲನಗಾರ ಹಾಗೂ ಅತ್ಯುತ್ತಮ ಛಾಯಾಗ್ರಾಹಕರಿಗೂ ಬಹುಮಾನ ವಿತರಣೆ ಮಾಡಲಾಗುತ್ತದೆ.
ಸಿನಿರಸಿಕರಿಗೆ ಅನುಕೂಲವಾಗುವಂತೆ ಪಾಸ್ ವಿತರಿಸಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ 300 ರೂ. ಹಾಗೂ ಇತರರಿಗೆ 500 ರೂ. ನೀಡಿ ಪಾಸ್ ಪಡೆದು ನೋಂದಾಯಿಸಿಕೊಳ್ಳಬಹುದಾಗಿದೆ.
ಚಿತ್ರೋತ್ಸವದ 7 ದಿನವೂ ಸಿನಿಮಾಗಳನ್ನು ವೀಕ್ಷಿಸಬಹುದು. ಪಾಸ್ ಜತೆಯಲ್ಲಿ ಚಲನಚಿತ್ರಗಳ ಮಾಹಿತಿಯನ್ನು ಹೊಂದಿರುವ ಕಿರು ಹೊತ್ತಿಗೆ ಪಡೆಯಬಹುದಾಗಿದೆ.
ಸೆ.8ರಿಂದ ನಗರದಲ್ಲಿರುವ ವಾರ್ತಾ ಭವನದಲ್ಲಿ ಪಾಸ್ ವಿತರಣೆ ಮಾಡಲಾಗುವುದು. ಮಾಹಿತಿಗಾಗಿ: ಫೇಸ್‌ಬುಕ್, ಇಸ್ಟಾಗ್ರಾಮ್ ಪೇಜ್‌ಗಳಾದ (ಞಛ್ಛಛಿಞಟ್ಟಛಿ) ಫಾಲೋ ಮಾಡುವುದು.