

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿವಿಧ ಕಾರ್ಯಕ್ರಮಗಳನ್ನು ವೀಕ್ಷಿಸಲು ಪ್ರವಾಸಿಗರಿಗೆ ಅನುಕೂಲ ಕಲ್ಪಿಸಿಕೊಡುವ ‘ಗೋಲ್ಡ್ ಕಾರ್ಡ್’ ವಿತರಣೆಗೆ ಮರುಚಾಲನೆ ನೀಡಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುವಾಗಿದೆ.
ಪ್ರತಿವರ್ಷ ಗೋಲ್ಡ್ ಕಾರ್ಡ್ ವಿತರಣೆ ಮಾಡಲಾಗುತ್ತಿತ್ತು. ಇದು ಅವ್ಯವಸ್ಥೆ, ಅಕ್ರಮ ಮಾರಾಟ, ರಾಜಕೀಯ ಒತ್ತಡ, ಲಾಬಿಗೂ ಕಾರಣವಾಗುತ್ತಿತ್ತು. ಅಂತೆಯೆ, ಪ್ರತಿ ಸಲವೂ ಅವಾಂತರವನ್ನೇ ಸೃಷ್ಟಿಸುತ್ತಿತ್ತು. ಆದ್ದರಿಂದ ಈ ಬಾರಿ ಗೋಲ್ಡ್ ಕಾರ್ಡ್ ವಿತರಣೆಯನ್ನೇ ಕೈಬಿಡಲಾಗಿದೆ. ಇದರಿಂದ ಅವ್ಯವಸ್ಥೆ ಸರಿಪಡಿಸುವ ಬದಲು ಇಡೀ ವ್ಯವಸ್ಥೆಯನ್ನೇ ರದ್ದುಪಡಿಸಿದಂತಾಗಿದೆ.
ಜಿಲ್ಲಾ ಮಟ್ಟದಲ್ಲಿ ನಡೆದ ಮೊದಲ ದಸರಾ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಸುಳಿವು ನೀಡಿದ್ದರು. ಅಲ್ಲದೆ, ಕೆಲ ದಿನಗಳ ಬಳಿಕ ಈ ಸಂಬಂಧ ಪ್ರತಿಕ್ರಿಯೆ ನೀಡಿದ ಸಚಿವರು, ‘ಈ ಸಲ ಗೋಲ್ಡ್ ಕಾರ್ಡ್ ಇರಲ್ಲ. ಗಣ್ಯರು, ವಿದೇಶಿಗರು ಹೆಚ್ಚಾಗಿ ಗೋಲ್ಡ್ ಕಾರ್ಡ್ ಅವಲಂಬಿಸಿದ್ದರು. ಒತ್ತಡ ಕಡಿಮೆ ಮಾಡುವ ಸಲುವಾಗಿ ಈ ಕಾರ್ಡ್ ರದ್ದು ಮಾಡಲಾಗಿದೆ’ ಎಂದು ಹೇಳಿದ್ದಾರೆ. ಇದಕ್ಕೆ ಸಾರ್ವಜನಿಕ ವಲಯ ಹಾಗೂ ಪ್ರವಾಸೋದ್ಯಮ ಕ್ಷೇತ್ರದಿಂದ ಅಸಮಾಧಾನ ವ್ಯಕ್ತವಾಗಿದೆ.
ಗೋಲ್ಡ್ ಕಾರ್ಡ್ ಮತ್ತು ಸಾಮಾನ್ಯ ಪಾಸ್ ವಿತರಣೆಯಲ್ಲಿ ದುರುಪಯೋಗ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾರ್ಡ್ ವಿತರಣೆಯನ್ನು ಕೈಬಿಡಲಾಗಿದೆ. ಜಂಬೂಸವಾರಿ ಮೆರವಣಿಗೆ, ಪಂಜಿನ ಕವಾಯತು ಕಾರ್ಯಕ್ರಮಕ್ಕೆ ಮಾತ್ರ ಟಿಕೆಟ್ ವ್ಯವಸ್ಥೆ ಮಾಡುವ ಚಿಂತನೆ ಇದೆ. ಈ ಕುರಿತು ಇನ್ನೂ ತೀರ್ಮಾನವಾಗಿಲ್ಲ. ಮುಖ್ಯಮಂತ್ರಿ ಅವರ ಜತೆ ಚರ್ಚಿಸಿ ಕ್ರಮ ವಹಿಸಲಾಗುವುದು.ಎಸ್.ಟಿ.ಸೋಮಶೇಖರಜಿಲ್ಲಾ ಉಸ್ತುವಾರಿ ಸಚಿವ
ಪ್ರವಾಸಿಗರ ಅನುಕೂಲಕ್ಕಾಗಿ ಗೋಲ್ಡ್ ಕಾರ್ಡ್ ವಿತರಣೆಗೆ ಮರು ಚಾಲನೆ ನೀಡಬೇಕು. ಈ ಕುರಿತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿದೆ.ಸಿ.ನಾರಾಯಣಗೌಡಅಧ್ಯಕ್ಷ, ಮೈಸೂರು ಹೋಟೆಲ್ ಮಾಲೀಕರ ಸಂಘ