ದಸರಾ ಗೊಂಬೆ ಕೂರಿಸುವ ಸ್ಪರ್ಧೆ ವಿಜೇತರಿಗೆ ಬಹುಮಾನ

1web
Published on

ಮೈಸೂರು: ದಸರಾ ಅಂಗವಾಗಿ ಕೆ.ಎಂ.ಪ್ರವೀಣ್‌ಕುಮಾರ್ ಚಾರಿಟಬಲ್ ಟ್ರಸ್ಟ್‌ನಿಂದ ಆಯೋಜಿಸಿದ್ದ ಮನೆಯಲ್ಲಿ ಗೊಂಬೆ ಕೂರಿಸುವ ಸ್ಪರ್ಧೆ ವಿಜೇತರಿಗೆ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿನಲ್ಲಿ ಪಾರಿತೋಷಕ, ನಗದು ಬಹುಮಾನ ವಿತರಿಸಲಾಯಿತು.
ವಿಶ್ವೇಶ್ವರನಗರದಲ್ಲಿರುವ ಮಹರ್ಷಿ ಪಬ್ಲಿಕ್ ಶಾಲೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೋಗಾದಿಯ ರೇವತಿ ರಾಮಸ್ವಾಮಿ (ಪ್ರಥಮ), ಆಲನಹಳ್ಳಿ ಗಿರಿದರ್ಶಿನಿ ಬಡಾವಣೆಯ ಗೀತಾ ಶ್ರೀಹರಿ (ದ್ವಿತೀಯ), ಕುವೆಂಪುನಗರದ ಇಂದ್ರಾಣಿ ಶಂಕರ್ (ತೃತೀಯ) ಅವರಿಗೆ ಬಹುಮಾನ ನೀಡಲಾಯಿತು. ಪ್ರಥಮ 2 ಸಾವಿರ ರೂ., ದ್ವಿತೀಯ ಒಂದು ಸಾವಿರ ರೂ., ತೃತೀಯ 500 ರೂ. ಹಾಗೂ ನೆನಪಿನ ಕಾಣಿಕೆ ನೀಡಲಾಯಿತು.
ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮವಾಗಿ ಗೊಂಬೆ ಜೋಡಣೆ ಮಾಡಿದ ದಟ್ಟಗಳ್ಳಿಯ ವರ್ಷ, ರಾಣಿ ನಾಗಭೂಷಣ್, ವಿಜಯನಗರದ ಜಯಶ್ರೀ ಶಿವರಾಂ, ರಾಮಕೃಷ್ಣನಗರದ ಕೆ.ಆರ್.ಜ್ಯೋತಿ, ಜಯಲಕ್ಷ್ಮೀ ನರಸಿಂಹ, ಶಿವರಾಂಪೇಟೆಯ ಪ್ರಭಾವತಿ, ಬೃಂದಾವನ ಬಡಾವಣೆ ತನುಜಾ ಅರವಿಂದ್, ಕುವೆಂಪುನಗರದ ರಾಜೇಶ್ವರಿ ಗಣೇಶನ್, ಜೆ.ಪಿ.ನಗರ ಲೀಲಾವತಿ, ಸರಸ್ವತಿಪುರಂನ ಭಾನುಮತಿ ಅವರಿಗೆ ಸಮಧಾನಕರ ಬಹುಮಾನ ನೀಡಿ ಅಭಿನಂದಿಸಲಾಯಿತು. ಮೈಸೂರು ನಗರ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ 96 ಸ್ಪರ್ಧಿಗಳು ಭಾಗವಹಿಸಿದ್ದು, ಎಲ್ಲರಿಗೂ ಪ್ರಮಾಣಪತ್ರ, ನೆನಪಿನ ಕಾಣಿಗೆ ನೀಡಲಾಯಿತು.
ಬಹುಮಾನ ವಿತರಿಸಿ ಮಾತನಾಡಿದ ಮೇಯರ್ ಶಿವಕುಮಾರ್, ನವರಾತ್ರಿ ಹಬ್ಬದ ಆಚರಣೆಯಲ್ಲಿ ಗೊಂಬೆಗಳ ಪ್ರದರ್ಶನ ಮಾಡುವುದು ನಮ್ಮ ಸಾಂಸ್ಕೃತಿಕ ರಾಜಧಾನಿಯ ಹಿರಿಮೆಯಾಗಿದೆ. ನಮ್ಮ ಸಂಸ್ಕೃತಿ, ಪರಂಪರೆಯಲ್ಲಿ ಗೊಂಬೆ ಕೂರಿಸುವುದು ಸಂಪ್ರದಾಯದ ಜತೆಗೆ ಅರ್ಥಪೂರ್ಣವಾಗಿದೆ. ಇದು ನಮ್ಮ ಧರ್ಮದ ಶಕ್ತಿ ಎಂದು ಬಣ್ಣಿಸಿದರು.
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಮಾತನಾಡಿ, ದಸರಾ ಗೊಂಬೆ ಕೂರಿಸುವ ಪದ್ಧತಿ ಹಲವು ದಶಕಗಳಿಂದ ನಡೆದು ಬಂದಿದೆ. ಇತ್ತೀಚಿನ ದಿನಗಳಲ್ಲಿ ಗೊಂಬೆ ಕೂರಿಸುವುದು ಕಡಿಮೆಯಾದರೂ ಸಂಪ್ರದಾಯಸ್ಥ ಕುಟುಂಬಗಳು ಅದನ್ನು ಪಾಲಿಸಿಕೊಂಡು ಬರುತ್ತಿವೆ. ಮುಂದಿನ ದಿನಗಳಲ್ಲಿ ಈ ಪದ್ಧತಿ ಇನ್ನಷ್ಟು ಹೆಚ್ಚಾಗಲಿ ಎಂದು ಆಶಿಸಿದರು.
ಮೇಲುಕೋಟೆ ವಂಗೀಮಠದ ಶ್ರೀಇಳೈ ಆಳ್ವಾರ್ ಸ್ವಾಮಿ, ಲಯನ್ಸ್ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮಹರ್ಷಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ತೇಜಸ್ ಶಂಕರ್, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಪದಾಧಿಕಾರಿಗಳಾದ ಅಜಯ್ ಶಾಸ್ತ್ರಿ, ವಿಯ್ ಕಣಗಾಲ್, ಸುಚೀಂದ್ರ, ಚಕ್ರಪಾಣಿ, ನಾಗಶ್ರೀ, ಸದಾಶಿವ, ಮಾಧ್ವ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net