

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉನ್ನತ ಮಟ್ಟದ ಸಭೆಯಲ್ಲಿ ಗಜಪಡೆ ಅಂತಿಮ ಪಟ್ಟಿ ಬಿಡುಗಡೆಯಾಗಲಿಲ್ಲ.
ಹೆಣ್ಣು ಆನೆಗಳ ಗರ್ಭಧಾರಣೆ ಪರೀಕ್ಷಾ ವರದಿ ಇನ್ನೂ ಬಂದಿಲ್ಲ. ಈ ಕಾರಣದಿಂದ ಗಜಪಡೆಯನ್ನು ಅಂತಿಮಗೊಳಿಸಲು ಸಾಧ್ಯವಾಗಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸೋಮವಾರ ದಸರಾ ಸಭೆಯಲ್ಲಿ ಈ ಕುರಿತು ಯಾವುದೇ ತೀರ್ಮಾನ ತೆಗೆದುಕೊಳ್ಳಲಿಲ್ಲ.
ಕಳೆದ ಬಾರಿ ದಸರಾ ಸಂದರ್ಭದಲ್ಲಿ ಗಜಪಡೆಯೊಂದಿಗೆ ಬಂದಿದ್ದ ಲಕ್ಷ್ಮೀ ಎಂಬ ಹೆಣ್ಣು ಆನೆಯು ಮರಿ ಆನೆಗೆ ಜನ್ಮ ನೀಡಿತ್ತು. ಇದು ವಿವಾದ ಸ್ವರೂಪ ಪಡೆದುಕೊಂಡಿತ್ತು. ಗರ್ಭಿಣಿ ಆನೆಗೆ ತಾಲೀಮು ಮಾಡಿಸಿ ತೊಂದರೆ ನೀಡಲಾಗಿದೆ ಎಂಬ ಟೀಕೆಗಳು ಕೇಳಿ ಬಂದಿದ್ದವು. ಆದ್ದರಿಂದ ಈ ಸಲ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ. ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಆಯ್ಕೆ ಮಾಡುವ ಹೆಣ್ಣಾನೆಗಳಿಗೆ ಮೊದಲ ಬಾರಿಗೆ ಗರ್ಭಧಾರಣೆ ಪರೀಕ್ಷೆ ಮಾಡಿಸಲಾಗಿದೆ.
ಆದರೆ, ಅದರ ವರದಿ ಬರಲು ಇನ್ನೂ ಎರಡ್ಮೂರು ದಿನಗಳು ಆಗಲಿದೆ. ಆದ್ದರಿಂದ ಉನ್ನತಮಟ್ಟದ ಸಭೆಯಲ್ಲಿ ದಸರಾ ಗಜಪಡೆ ವಿಚಾರ ಪ್ರಸ್ತಾವ ಆಗಿಲ್ಲ. ಆದರೆ, ಉತ್ತಮ ಆನೆಗಳ ಆಯ್ಕೆ ಮಾಡಲು ಸಿಎಂ ಅರಣ್ಯ ಇಲಾಖೆಗೆ ಸೂಚಿಸಿದ್ದಾರೆ
2023ನೇ ಸಾಲಿನ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ 14 ಆನೆ ತರಲು ತೀರ್ಮಾನ ಮಾಡಲಾಗಿದೆ. ಈ ಪೈಕಿ ವರಲಕ್ಷ್ಮೀ, ಲಕ್ಷ್ಮೀ(ದೊಡ್ಡಹರವೆ), ಸರಳ, ಕಾವೇರಿ, ವಿಜಯ, ಚೈತ್ರ, ರೂಪ, ಕುಮಾರಿ ಸೇರಿದಂತೆ 8 ಆನೆಗಳನ್ನು ಈಗಾಗಲೇ ಗುರುತಿಸಲಾಗಿದೆ. ಈಗಾಗಲೇ ಇವುಗಳಿಗೆಲ್ಲ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಲಾಗಿದೆ. ಇವುಗಳಲ್ಲಿ ನಾಲ್ಕು ಹೆಣ್ಣಾನೆಗಳನ್ನು ಆಯ್ಕೆ ಮಾಡಲಾಗುತ್ತದೆ. ಇವುಗಳು ಮಾತ್ರ ದಸರಾ ಗಜಪಡೆಯನ್ನು ಸೇರಿಕೊಳ್ಳಲಿವೆ.
ಉಳಿದಂತೆ 10 ಗಂಡಾನೆಗಳನ್ನು ಆಯ್ಕೆ ಮಾಡಲಾಗುತ್ತದೆ. ಗಂಡಾನೆ ಪಡೆಯಲ್ಲಿ ಧನಂಜಯ, ಗೋಪಿ, ಮಹೇಂದ್ರ, ಭೀಮ, ಸುಗ್ರೀವ, ಶ್ರೀರಾಮ, ಹೊಸ ಆನೆಗಳಾದ ಭೀಮ್, ಶ್ರೀಕಂಠ, ಶ್ರೀರಂಗ ಸೇರ್ಪಡೆಯಾಗಲಿವೆ. ಅಲ್ಲದೆ, ಹಿರಿಯ ಆನೆ ಅರ್ಜುನನ್ನೂ ಕರೆತರುವ ಅರಣ್ಯ ಇಲಾಖೆ ಮುಂದಾಗಿದೆ.
‘ದಸರಾ ಗಜಪಡೆಯ ಪಟ್ಟಿ ಇನ್ನೂ ಅಂತಿಮವಾಗಿಲ್ಲ. ಹೆಣ್ಣು ಆನೆಗಳ ಗರ್ಭಧಾರಣೆ ಪರೀಕ್ಷಾ ವರದಿ ಬಂದಿಲ್ಲ. ಅದು ಬಂದ ಬಳಿಕ ಆನೆಗಳ ಪಟ್ಟಿಯನ್ನು ತಯಾರು ಮಾಡಲಾಗುವುದು. ಜಿಲ್ಲಾ ಸಮಿತಿಯು ಪಟ್ಟಿ ಬಿಡುಗಡೆ ಮಾಡಲಿದೆ’ ಎಂದು ಅರಣ್ಯ ಇಲಾಖೆಯ ಮೈಸೂರು ವೃತ್ತದ ಸಿಎಫ್ ಡಾ.ಮಾಲತಿ ಪ್ರಿಯಾ ತಿಳಿಸಿದ್ದಾರೆ.
ಈ ಸಲ ದಸರಾ ಮಹೋತ್ಸವ ಅ.14ರಂದು ಮಹಾಲಯ ಅಮಾವಾಸ್ಯೆ ಇದೆ. ಅ.15ರಂದು ಬೆಳಗ್ಗೆ 10.15ರಿಂದ 10.30ರೊಳಗೆ ಸಲ್ಲುವ ಶುಭಲಗ್ನದಲ್ಲಿ ದಸರಾ ಮಹೋತ್ಸವ ಉದ್ಘಾಟನೆ ನೆರವೇರಲಿದೆ. ಅಕ್ಟೋಬರ್ 24ರಂದು ಜಂಬೂಸವಾರಿ ಮೆರವಣಿಗೆ ಜರುಗಲಿದೆ.
ಈ ಹಿನ್ನೆಲೆಯಲ್ಲಿ ಜಂಬೂಸವಾರಿಗೆ 55 ರಿಂದ 60 ದಿನದ ಮೊದಲು 1ನೇ ತಂಡದಲ್ಲಿ ಪ್ರಮುಖ ಆನೆಗಳನ್ನು ಕರೆತರಲು ತೀರ್ಮಾನಿಸಲಾಗಿದೆ. ಇದರಿಂದ ಈ ಸಲ ಗಜಪಯಣ ಆ.27ರಿಂದ 30ರೊಳಗೆ ದಿನಾಂಕ ನಿಗದಿ ಮಾಡಲಾಗುತ್ತದೆ. ಸೆಪ್ಟಂಬರ್ ಮೊದಲ ವಾರದಲ್ಲಿ ಆನೆಗಳು ಅರಮನೆ ಅಂಗಳ ಪ್ರವೇಶಿಸಲಿದೆ.