

ಮಂಜುನಾಥ ಟಿ.ಭೋವಿ ಮೈಸೂರು
ತಾಲೀಮು, ತರಬೇತಿ, ವ್ಯಾಯಾಮ, ಆಹಾರ ಮತ್ತು ಆರೈಕೆ ಎಂಬ ಪಂಚಸೂತ್ರಗಳೇ ದಸರಾ ಗಜಪಡೆಯ ಸದ್ಯ ಜೀವನ ಶೈಲಿ.
ಈ ಸೂತ್ರಗಳಡಿಯಲ್ಲೇ ಆನೆಗಳನ್ನು ಜಂಬೂಸವಾರಿಗೆ ಅಣಿಗೊಳಿಸಲಾಗುತ್ತಿದೆ. ಅದಕ್ಕಾಗಿ ಅರಣ್ಯ ಇಲಾಖೆ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.
ಇಡೀ ದಸರಾದಲ್ಲಿ ಈ ಆನೆಗಳೇ ಎಲ್ಲರ ಆಕರ್ಷಣೆ. ಆದ್ದರಿಂದ ಅವುಗಳ ಕುರಿತು ಜನರಲ್ಲಿ ಕೌತುಕ ಹೆಚ್ಚು. ಆದರೆ, ವಿಶ್ವವಿಖ್ಯಾತ ಜಂಬೂಸವಾರಿಗೆ ಆನೆಗಳನ್ನು ಸಜ್ಜುಗೊಳಿಸುವುದು ಮಾತ್ರ ಸವಾಲಿನ ಕೆಲಸ. ಅದು ಒಂದೆರಡು ದಿನಗಳಲ್ಲಿ ಆಗುವ ಕಾಯಕವಂತೂ ಅಲ್ಲ. ಅದಕ್ಕಾಗಿ ತಿಂಗಳುಗಟ್ಟಲೆ ಸಿದ್ಧತೆ ಬೇಕು. ಆದ್ದರಿಂದ ಪಂಚಸೂತ್ರಗಳ ಪ್ರಕಾರವೇ ಈ ಪ್ರಕ್ರಿಯೆ ಸಾಗುತ್ತದೆ. ಪ್ರತಿ ವರ್ಷದಂತೆ ಗಜಪಡೆಯ ಉಸ್ತುವಾರಿ ಅರಣ್ಯ ಇಲಾಖೆಯೇ ನೋಡಿಕೊಳ್ಳುತ್ತಿದೆ.
ತಾಲೀಮಿಗೆ 52 ದಿನ ಮೀಸಲು:
750 ಕೆ.ಜಿ. ತೂಕದ ಅಂಬಾರಿ ಹೊತ್ತುಕೊಳ್ಳುವ ‘ಅಭಿಮನ್ಯು’ ಆನೆ ಆರು ತಾಸು 5.50 ಕಿ.ಮೀ. ನಡೆಯಬೇಕು. ಅಷ್ಟೊಂದು ತೂಕ ಹೊತ್ತುಕೊಂಡು ಹೋಗುವುದು ಸಾಮಾನ್ಯ ಆನೆಗಳಿಗೆ ಕಷ್ಟಕರ. ಆದ್ದರಿಂದ ಗಜಪಡೆಯ ಕ್ಯಾಪ್ಟನ್‌ನೊಂದಿಗೆ ಉಳಿದ ಆನೆಗಳಿಗೂ ತರಬೇತಿ ನೀಡಲಾಗುತ್ತದೆ. ಅವುಗಳ ದೈಹಿಕ ಸಾಮರ್ಥ್ಯ ಸದೃಢಗೊಳಿಸಲು ಪೌಷ್ಟಿಕ ಆಹಾರವೂ ಮುಖ್ಯ ಪಾತ್ರ ವಹಿಸುತ್ತದೆ.
ಅಲ್ಲದೆ, ಕಾಡಿನ ಸ್ವಚ್ಛಂದ ಹಾಗೂ ಶಾಂತ ಪರಿಸರದಿಂದ ದಿಢೀರ್ ನಗರಕ್ಕೆ ಬಂದಾಗ ಸೂಕ್ಷ್ಮ ಪ್ರಾಣಿಯಾದ ಆನೆಗಳು ಗಾಬರಿಗೊಳ್ಳುವುದು ಸ್ವಾಭಾವಿಕ. ಆದ್ದರಿಂದ ಮುಂಚೆಯೇ ಸೂಕ್ತ ತರಬೇತಿ ನೀಡುವುದು ಅಗತ್ಯ. ಈ ಹಿನ್ನೆಲೆಯಲ್ಲಿ ಆ. 14ರಿಂದ ತಾಲೀಮು ನಡೆಯುತ್ತಿದೆ. ಇದಕ್ಕಾಗಿ ಈ ಸಲ 52 ದಿನಗಳು ಲಭ್ಯವಾಗಿವೆ. ಅಕ್ಟೋಬರ್ 4 ರವರೆಗೂ ನಿತ್ಯ ಬೆಳಗ್ಗೆ ಮತ್ತು ಸಂಜೆ ಅರಮನೆಯಿಂದ ಬನ್ನಿಮಂಟಪದವರೆಗೆ ಆನೆಗಳಿಗೆ ಅಭ್ಯಾಸ ಮಾಡಿಸಲಾಗುತ್ತದೆ.
ಊಟದೊಂದಿಗೆ ಲಘು ಉಪಾಹಾರ:
ಗಜಪಡೆಗೆ ನಿತ್ಯ ಭೂರಿ ಭೋಜನವನ್ನೇ ನೀಡಲಾಗುತ್ತದೆ. ಇದು ಪೌಷ್ಟಿಕಾಂಶಯುಕ್ತ ಆಹಾರವಾಗಿರುತ್ತದೆ. ನಿತ್ಯ ಎರಡು ಹೊತ್ತು (ಮುಂಜಾನೆ 6.30 ಮತ್ತು ಸಂಜೆ 4ಗಂಟೆಗೆ) ಆನೆಗಳಿಗೆ ಊಟ ದೊರೆಯಲಿದೆ. ಬೇಯಿಸಿದ ಅನ್ನ (ಕುಚುಲಕ್ಕಿ), ಎಲ್ಲ ದ್ವಿದಳ ಧಾನ್ಯ, ಈರುಳ್ಳಿ ಹಾಗೂ ಉಪ್ಪು ಜತೆಗೆ ಬೇಯಿಸಿದ ಮಿಶ್ರಣವನ್ನು ಪ್ರತಿ ಆನೆಗೆ ತಿನ್ನಿಸಲಾಗುತ್ತದೆ. ಆನೆಗಳಿಗೆ ಇಷ್ಟೇ ಸಾಕಾಗಲ್ಲ. ಇದರೊಂದಿಗೆ, ಭತ್ತ 15 ಕೆಜಿ, ಬೆಲ್ಲ 250 ಗ್ರಾಂ, 2 ತೆಂಗಿನಕಾಯಿ, ಕಡಲೇಕಾಯಿ ಹಿಂಡಿ ಮಿಶ್ರಣವನ್ನು ಪ್ರತಿ ಆನೆಗೆ ಬೆಳಗ್ಗೆ 8 ಮತ್ತು ಮಧ್ಯಾಹ್ನ 2ಕ್ಕೆ ನೀಡಲಾಗುತ್ತದೆ.
ಅಲ್ಲದೆ, ಲಘು ಉಪಾಹಾರವೂ ಉಂಟು. ಮೇವು, ಹಸಿರುಹುಲ್ಲು ಜತೆಗೆ ಕಬ್ಬು, ಅವಲಕ್ಕಿ ನೀಡಲಾಗುತ್ತದೆ. ಪ್ರತಿ ಆನೆಗೆ ದಿನದಲ್ಲಿ 40 ಕೆಜಿ ಕಬ್ಬು ತಿನ್ನಿಸಲಾಗುತ್ತದೆ. ಹಸಿರುಹುಲ್ಲು ಜತೆಗೆ, ಅವಲಕ್ಕಿ ಮಿಶ್ರಣ ಸೇರಿಸಲಾಗುತ್ತದೆ. ಮೇವು ಹೊರತುಪಡಿಸಿ ಇತರ ಆಹಾರಗಳನ್ನು ಬಹಳ ಎಚ್ಚರಿಕೆಯಿಂದ ಅಳೆದು ಕೊಡಲಾಗುತ್ತದೆ.
ಆರೋಗ್ಯದ ಮೇಲೆ ಗಮನ
ಗಜಪಡೆಯ ಆರೋಗ್ಯದ ಮೇಲೆ ನಿಗಾ ಇರಿಸಲಾಗುತ್ತದೆ. ಲಿವರ್ ಉದ್ದೀಪಕ, ಜೀವಸತ್ವಗಳು ಮತ್ತು ಖನಿಜಯುಕ್ತ ಪೂರಕ ಮಾತ್ರೆಗಳನ್ನು ಬೆಲ್ಲದಲ್ಲಿ ಬೆರೆಸಿ ಸಿರಪ್ ರೂಪದಲ್ಲಿ ನೀಡಲಾಗುತ್ತದೆ. ಬ್ಯಾಕ್ಟೀರಿಯಾ, ವೈರಸ್ ಅಥವಾ ಇತರ ಬಾಹ್ಯ ಸೂಕ್ಷ್ಮ್ಮಜೀವಿಗಳ ಆಕ್ರಮಣ ತಡೆಯಲು ಪ್ರತಿ ಆನೆಗೆ ಔಷಧ ಕೂಡ ನೀಡಲಾಗುತ್ತದೆ. ಜ್ವರ, ಭೇದಿ, ಕೀಲುಗಳ ನೋವು ಮತ್ತು ಮೈ-ಕೈ ನೋವು ನಿವಾರಣೆಗೆ ಇದು ಪರಿಣಾಮಕಾರಿ. ಬೇಯಿಸಿದ ಆಹಾರ ನೀಡಿದಾಗ ಕೆಲವು ವೇಳೆ ಭೇದಿ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹವಾಮಾನ, ನೀರು ಮತ್ತು ಗಾಳಿಯ ಏರಿಳಿತದಿಂದ ವೈರಲ್ ಜ್ವರವೂ ಬರಬಹುದು. ಆದ್ದರಿಂದ ನೋವು ನಿವಾರಕಗಳು ಅವಶ್ಯವಾಗಿವೆ.
ಆನೆಗೂ ಮಸಾಜ್ ಥೆರಪಿ:
ಮನುಷ್ಯರಿಗೆ ಮಾಡಿದಂತೆ ಆನೆಗಳಿಗೂ ಮಸಾಜ್ ಥೆರಪಿ ಮಾಡಲಾಗುತ್ತದೆ. ಕ್ಯಾಸ್ಟರ್ ಆಯಿಲ್, ಬೇವಿನ ಎಣ್ಣೆ , ದಾಲ್ಚಿನ್ನಿ ತೈಲಗಳ ಮಿಶ್ರಣವನ್ನು ಪ್ರತಿ ಆನೆಯ ದೇಹದ ಮೇಲೆ ಲೇಪಿಸಲಾಗುತ್ತದೆ. ನಂತರ ಮಾವುತರು ಒಂದು ಗಂಟೆ ಕಾಲ ಮಸಾಜ್ ಮಾಡುತ್ತಾರೆ. ಬಳಿಕ ತಣ್ಣೀರಿನ ಸ್ನಾನ ಮಾಡಿಸಲಾಗುತ್ತದೆ. ಇದರಿಂದಾಗಿ ವಿಶೇಷವಾಗಿ ಕೀಲುಗಳ ಸುತ್ತಲಿನ ಒರಟು ಚರ್ಮ ಮೃದುಗೊಳ್ಳಲು ಸಹಾಯಕಾರಿಯಾಗುತ್ತದೆ. ಅಲ್ಲದೆ, ನಿತ್ಯ ಆನೆಗಳಿಗೆ 4 ಗಂಟೆಗಳ ವಾಕಿಂಗ್ ಮಾಡಿಸಲಾಗುತ್ತದೆ.
24 ಗಂಟೆಯೂ ನಿಗಾ:
ಆನೆಗಳ ನಿರ್ವಹಣೆಗಾಗಿ ಅರಣ್ಯ ಇಲಾಖೆಯ 60 ಜನರ ತಂಡ ಹಗಲಿರುಳು ಶ್ರಮಿಸುತ್ತದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ, ಪಶುವೈದ್ಯರು, 15 ಮಾವುತರು, 15 ಕಾವಡಿಗಳು, ವಿಶೇಷ ಮಾವುತರು, ಅಡುಗೆಯವರು, ಮಾರ್ಜಕರು, ಸಹಾಯಕರು ಮತ್ತು ಮಾವುತ-ಕಾವಾಡಿಗಳ ಕುಟುಂಬ ದಿನದ 24 ಗಂಟೆ ಗಜಪಡೆಯ ಮೇಲೆ ನಿಗಾ ಇಟ್ಟು, ಆರೈಕೆ ಮಾಡುತ್ತಾರೆ.
ಜಂಬೂಸವಾರಿ ದಿನವೇ ವಿಶೇಷ
ಜಂಬೂಸವಾರಿ ದಿನದಂದು ಸ್ನಾನ ಮಾಡಿಸಿದ ನಂತರ, ಆನೆಗಳ ದೇಹದ ಮೇಲೆ ಅಳಿಸಿ ಹೋಗುವಂತಹ ಜೈವಿಕ ಬಣ್ಣಗಳಿಂದ ಕಲಾವಿದರು ಚಿತ್ರ ಬಿಡಿಸುತ್ತಾರೆ. ನಂತರ ಮುಖ್ಯ ಆನೆಗೆ ಚಿನ್ನದ ಅಂಬಾರಿ ಕಟ್ಟುತ್ತಾರೆ. ಮೆರವಣಿಗೆಯಲ್ಲಿ ಲವಲವಿಕೆಯಿಂದಿರುವಂತೆ ಅಂದು ವಿಶೇಷ, ಪೂರಕ ಆಹಾರ ನೀಡಲಾಗುತ್ತದೆ. ಸವಾರಿ ಸಾಗುವ ಆಯ್ದ ಸ್ಥಳಗಳಲ್ಲಿ ಅಧಿಕಾರಿಗಳು ಅವಲಕ್ಕಿ, ಗ್ಲುಕೋಸ್ ಪುಡಿ, ತೆಂಗಿನಕಾಯಿ, ಬೆಲ್ಲ ಮತ್ತು ಕಬ್ಬಿನ ಅನಿಯಮಿತ ಪ್ರಮಾಣದೊಂದಿಗೆ ಹಸಿರುಹುಲ್ಲು ನೀಡಲಾಗುತ್ತದೆ. ಇದಕ್ಕಾಗಿ ಈಗಾಗಲೇ ಯೋಜನೆ ರೂಪಿಸಲಾಗಿದೆ.
ಆನೆಗಳಿಗೆ ಪೋಷಕಾಂಶಯುಕ್ತ ಆಹಾರ, ದ್ವಿದಳ ಧಾನ್ಯಗಳು, ಕಬ್ಬು , ಜೀವಸತ್ವಗಳು ಮತ್ತು ಹಸಿರುಹುಲ್ಲು ನೀಡಬೇಕಾಗುತ್ತದೆ. ಅಂಬಾರಿ ಹೊರುವ ಆನೆಗೆ ಹೆಚ್ಚಿನ ಪ್ರಮಾಣದಲ್ಲಿ, ಇತರ ಆನೆಗಳಿಗೆ ಸ್ವಲ್ಪ ಕಡಿಮೆ ಆಹಾರ ಕೊಡಲಾಗುತ್ತದೆ. ಈ ಎಲ್ಲ ಆಹಾರ ಜೈವಿಕ ಆಗಿರುತ್ತದೆ. ಸುಲಭವಾಗಿ ಜೀರ್ಣವಾಗುವಂತೆ ನಿಯಮಿತವಾಗಿ ಆಹಾರ ನೀಡಲಾಗುತ್ತದೆ. ತೂಕ ಕಾಯ್ದುಕೊಳ್ಳಲು ತಾಲೀಮು, ದೈಹಿಕ ವ್ಯಾಯಾಮ ಮಾಡಿಸಲಾಗುತ್ತದೆ.ಡಾ.ವಿ.ಕರಿಕಾಳನ್ ಉಪ ಅರಣ್ಯ ಸಂರಕ್ಷಣಾಧಿಕಾರಿ, ಮೈಸೂರು ವನ್ಯಜೀವಿ ವಿಭಾಗ