ದಸರಾ ಗಜಪಡೆ ವಾಸ್ತವ್ಯಕ್ಕೆ ಅರಮನೆ ಆವರಣದಲ್ಲಿ ಸಿದ್ಧತೆ

22
Published on

ಮೈಸೂರು: ನಾಡಹಬ್ಬ ದಸರಾಗೆ ದಿನಗಣನೆ ಆರಂಭವಾಗುತ್ತಿರುವಂತೆಯೇ ಗಜಪಡೆ ಬರಮಾಡಿಕೊಳ್ಳಲು ಅರಮನೆಯಲ್ಲಿ ಸಿದ್ಧತೆ ಆರಂಭಗೊಂಡಿದೆ.
ಪ್ರತಿ ವರ್ಷದಂತೆ ಈ ಬಾರಿಯೂ ಹುಣಸೂರು ಬಳಿಯ ವೀರನಹೊಸಹಳ್ಳಿಯಿಂದ ಸೆಪ್ಟೆಂಬರ್ 1ರಂದು ಗಜಪಡೆ ಪಯಣಕ್ಕೆ ಚಾಲನೆ ನೀಡಲಾಗುವುದು. ಅಂದು ಹೊರಡಲಿರುವ ‘ಅಂಬಾರಿ ಆನೆ’ ಅಭಿಮನ್ಯು ನೇತೃತ್ವದ 9 ಆನೆಗಳ ತಂಡ ನಗರದ ಅರಣ್ಯ ಭವನದಲ್ಲಿ ಬೀಡು ಬಿಡಲಿವೆ. ಸೆ. 4ರಂದು ಸಾಂಪ್ರದಾಯಿಕವಾಗಿ ಅರಮನೆ ಆವರಣ ಪ್ರವೇಶಿಸಲಿವೆ. ಗಜಪಡೆಯ ವಾಸ್ತವ್ಯಕ್ಕಾಗಿ ಅರಮನೆ ಆವರಣದಲ್ಲಿ ತಾತ್ಕಾಲಿಕ ಶೆಡ್‌ಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಶೆಡ್ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.
ಮೊದಲ ತಂಡದಲ್ಲಿ 9, ಎರಡನೇ ತಂಡದಲ್ಲಿ 5 ಆನೆಗಳು ಆಗಮಿಸಲಿವೆ. ಆನೆಗಳ ಜತೆಗೆ ಮಾವುತರು, ಕಾವಾಡಿಗಳು ಬರಲಿದ್ದಾರೆ. ದಸರಾ ಮಹೋತ್ಸವಕ್ಕೆ ಆಗಮಿಸುವ ಗಜಪಡೆಗಳ ಆಗಮನಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ ಎಂದು ಡಿಸಿಎಫ್ ಸೌರಭ್‌ಕುಮಾರ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
ಕಳೆದ ಬಾರಿ ದಸರಾದಲ್ಲಿ ಭಾಗವಹಿಸಿದ್ದ 8 ಆನೆಗಳು ಈ ವರ್ಷವೂ ಪಾಲ್ಗೊಳ್ಳಲಿವೆ. ಹೊಸದಾಗಿ 3 ಆನೆಗಳು ಈ ಬಾರಿಯ ಜಂಬೂ ಸವಾರಿಯನ್ನು ಸೇರಿಕೊಳ್ಳಲಿವೆ. ಮೊದಲ ಮತ್ತು ಎರಡನೇ ಹಂತದಲ್ಲಿ ಯಾವ ಯಾವ ಆನೆಗಳು ಬರಲಿವೆ ಎಂಬ ಪಟ್ಟಿಯನ್ನು ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಬಂಡಿಪುರದ ರಾಂಪುರ, ನಾಗರಹೊಳೆಯ ದುಬಾರೆ, ಮತ್ತಿಗೋಡು ಆನೆ ಶಿಬಿರಗಳಿಂದ ಗಜಪಡೆಯ ಆಯ್ಕೆ ಪ್ರಕ್ರಿಯೆ ನಡೆದಿದ್ದು, ದಸರಾ ಮಹೋತ್ಸವಕ್ಕೆ ಆಗಮಿಸುವ ಎಲ್ಲ ಹೆಣ್ಣು ಆನೆಗಳ ಗರ್ಭ ಪರೀಕ್ಷೆಯೂ ನಡೆದಿದೆ. ಗರ್ಭ ಧರಿಸಿದ ಆನೆಗಳನ್ನು ಕರೆತರುವುದಿಲ್ಲ ಎಂದು ಮಾಹಿತಿ ನೀಡಿದರು.
ಅರಮನೆ ಮೈದಾನದಲ್ಲಿ ಎಂದಿನಂತೆ ಆನೆಗಳಿಗೆ ಶೆಡ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆನೆಗಳ ಆಹಾರದಲ್ಲಿ ಹಿಂದೆ ಇದ್ದ ಮೆನುಗಳೇ ಮುಂದುವರೆಯಲಿವೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಕೂಡ ಮುಗಿದಿದೆ. ಎಲ್ಲ ಸಿದ್ದತಾ ಕಾರ್ಯಗಳು ಭರದಿಂದ ಸಾಗುತ್ತಿವೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net