

ಮೈಸೂರು: ಗಜಪಡೆಯ ‘ಕ್ಯಾಪ್ಟನ್ ಅಭಿಮನ್ಯು’ ಮುಂದಾಳತ್ವದಲ್ಲಿ 8 ಆನೆಗಳ ತಾಲೀಮು ಶುರುವಾಗಿದ್ದು, ಮೊದಲ ದಿನವೇ ಪೂರ್ಣ ಪ್ರಮಾಣದ ಅಭ್ಯಾಸ ಮಾಡಿವೆ.
ಬಿಗಿ ಭದ್ರತೆಯಲ್ಲಿ ಶುಕ್ರವಾರ ಹೆಜ್ಜೆ ಹಾಕಿ ಗಮನ ಸೆಳೆದ ಆನೆಗಳು, ಅರಮನೆಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನವನ್ನು 1.10 ಗಂಟೆ ಅವಧಿಯಲ್ಲೇ ತಲುಪಿ ದೈಹಿಕ ಸಾಮರ್ಥ್ಯ ಪ್ರದರ್ಶನ ಮಾಡಿದವು.
ಅರಮನೆಯ ಕೋಡಿ ಸೋಮೇಶ್ವರ ದೇವಾಲಯದಿಂದ ಗಜಪಡೆಯ ನಾಯಕ ಅಭಿಮನ್ಯು, ಭೀಮ, ಮಹೇಂದ್ರ, ಧನಂಜಯ, ವಿಜಯಾ, ವರಲಕ್ಷ್ಮೀ, ಗೋಪಿ, ಕಂಜನ್ ಆನೆಗಳು ಜಂಬೂಸವಾರಿ ಮಾರ್ಗದಲ್ಲಿ ಹೆಜ್ಜೆ ಹಾಕಿದವು. ಇದರೊಂದಿಗೆ, ಮೊದಲ ದಿನದ ತಾಲೀಮನ್ನು ಯಶಸ್ವಿಯಾಗಿ ನಿಭಾಯಿಸಿದವು.
ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಆನೆಗಳು ಅರಮನೆ ಆವರಣದಲ್ಲಿ ಮೂರು ದಿನಗಳಿಂದ ನೆಲೆಸಿವೆ. ನಗರದ ವಾತಾವರಣಕ್ಕೆ
ಹೊಂದಿಕೊಳ್ಳುವ ಸಲುವಾಗಿ ಅರಮನೆ ಆವರಣದಲ್ಲೇ ತಾಲೀಮು ನಡೆಸಿದ್ದವು. ಶುಕ್ರವಾರ ರಾಜಪಥದಲ್ಲಿ ತಾಲೀಮಿಗೆ ಆನೆಗಳನ್ನು ಕರೆದೊಯ್ಯಲಾಯಿತು. ಬಲರಾಮ ದ್ವಾರದಿಂದ ಹೊರಬಂದ ಆನೆಗಳು ಕೆ.ಆರ್.ವೃತ್ತ, ಸಯ್ಯಜಿರಾವ್ ರಸ್ತೆಯಲ್ಲಿ ಸರ್ಕಾರಿ ಆಯುರ್ವೇದ ಆಸ್ಪತ್ರೆ, ಹಳೇ ಆರ್‌ಎಂಸಿ ವೃತ್ತ, ಬಂಬೂಬಜಾರ್ ವೃತ್ತ, ಹೈವೇ ವೃತ್ತದ ಮೂಲಕ ಬನ್ನಿಮಂಟಪದ ಪಂಜಿನ ಕವಾಯತು ಮೈದಾನವನ್ನು ತಲುಪಿದವು.
ಮಾರ್ಗದುದ್ದಕ್ಕೂ ನಾಲ್ಕು ಕಡೆ ಲದ್ದಿ ಹಾಕಲು ಒಂದೊಂದು ನಿಮಿಷ ವಿರಮಿಸಿದ ಆನೆಗಳು, ನಂತರ ಯಾವುದೇ ಅಡೆತಡೆ, ಅಳುಕಿಲ್ಲದೆ ಸರಾಗವಾಗಿ ಅಭ್ಯಾಸ ಮಾಡಿದವು.
ಗಜಪಡೆ ವೀಕ್ಷಣೆ ಮಾಡಿದ ಜನರು:
ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಗಜಪಡೆ ದಸರಾ ಕಳೆಗಟ್ಟುವಂತೆ ಮಾಡಿದವು. ಮೊದಲ ತಂಡದಲ್ಲಿ ಆಗಮಿಸಿರುವ 9 ಆನೆಗಳಲ್ಲಿ ಅರ್ಜುನನನ್ನು ಹೊರತುಪಡಿಸಿ ಉಳಿದ ಆನೆಗಳು ಸಾಲಾಗಿ ಹೆಜ್ಜೆ ಹಾಕಿದವು. ಕೆ.ಆರ್.ವೃತ್ತದಿಂದ ಸಯ್ಯಜಿರಾವ್ ರಸ್ತೆಗೆ ಪ್ರವೇಶಿಸುತ್ತಿದ್ದಂತೆಯೇ ನೂರಾರು ಸಾರ್ವಜನಿಕರು ಆನೆಗಳನ್ನು ಕಣ್ತುಂಬಿಕೊಂಡರು.
ಆನೆಗಳಿಗೆ ಭದ್ರತೆ:
ತಾಲೀಮಿನ ವೇಳೆ ಸಾರ್ವಜನಿಕರು ಆನೆಗಳ ಬಳಿ ನುಸುಳದಂತೆ ಎಚ್ಚರಿಕೆ ವಹಿಸಲಾಗಿತ್ತು. ಆನೆಗಳ ಮುಂದೆ ಹಾಗೂ ಹಿಂದೆ ಪೊಲೀಸ್ ಬೆಂಗಾವಲು ವಾಹನ ತೆರಳುವ ವ್ಯವಸ್ಥೆ ಮಾಡಲಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ, ಆನೆಗಳ ಉಸ್ತುವಾರಿ ಸಿಬ್ಬಂದಿ, ಆನೆಯ ಪಕ್ಕದಲ್ಲೇ ಸಾಗುವ ಮೂಲಕ ಅಪರಿಚಿತರು ಆನೆಗಳ ಬಳಿ ಬಾರದಂತೆ ನೋಡಿಕೊಂಡರು. ತಾಲೀಮು ಮುಗಿದ ಬಳಿಕ ಬನ್ನಿಮಂಟಪದ ಮೈದಾನದಲ್ಲಿ ಕೆಲಕಾಲ ವಿರಮಿಸಿದ ಆನೆಗಳು, ಮತ್ತೆ ಅದೇ ಮಾರ್ಗದಲ್ಲಿ ಅರಮನೆಗೆ ಹಿಂದಿರುಗಿದವು.
ತಾಲೀಮಿನ ವೇಳೆ ಆರ್‌ಎಫ್‌ಒ ಸಂತೋಷ್ ಹೂಗಾರ್, ಪಶುವೈದ್ಯ ಡಾ.ಮುಜೀಬ್ ರೆಹಮಾನ್, ಸಹಾಯಕರಾದ ಅಕ್ರಮ್, ರಂಗರಾಜು ಇತರರು ಇದ್ದರು.