ದಸರಾ ಗಜಪಡೆ ಕಣ್ತುಂಬಿಕೊಳ್ಳುತ್ತಿರುವ ಜನತೆ

mysore
Published on

ಮೈಸೂರು: ದಸರಾ ಗಜಪಡೆಯನ್ನು ಕಣ್ತುಂಬಿಕೊಳ್ಳಲು ಅಶೋಕಪುರಂನಲ್ಲಿರುವ ಅರಣ್ಯ ಭವನಕ್ಕೆ ಜನ ಮುಗಿಬೀಳುತ್ತಿದ್ದು, ಮುನ್ನೆಚ್ಚರಿಕೆ ವಹಿಸಿ ಆನೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತಿದೆ.

ವರ ಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಇರುವುದಿಂದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರೊಂದಿಗೆ ದೌಡಾಯಿಸಿದ್ದರು.

ಇಲ್ಲಿ ಆ.4ರಿಂದ ಬೀಡು ಬಿಟ್ಟಿರುವ ಅಂಬಾರಿ ಆನೆ ಅಭಿಮನ್ಯು ನೇತೃತ್ವದ ಮೊದಲ ತಂಡದ 9 ಆನೆಗಳನ್ನು ನೋಡಲು ಪ್ರಾಣಿಪ್ರಿಯರು ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಜತೆಗೆ, ವನ್ಯಜೀವಿಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು, ವನ್ಯಜೀವಿಗಳ ಮೇಲಿನ ಪ್ರೀತಿ, ಕಾಳಜಿ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಜನರಿಗೆ ದಸರಾ ಆನೆ ನೋಡಲು ಅವಕಾಶ ಕಲ್ಪಿಸಿಕೊಡಲಾಗುತ್ತಿದೆ.

ಬಂದವರಿಗೆ ನಿರಾಸೆಯಾಗುವುದನ್ನು ತಪ್ಪಿಸಲು ಹಾಗೂ ಸುರಕ್ಷತೆಗೂ ಆದ್ಯತೆ ನೀಡಲು ಮುಂದಾಗಿರುವ ಅರಣ್ಯ ಇಲಾಖೆ ಕೆಲ ಜನರ ತಂಡ ಆನೆ ನೋಡಿ ವಾಪಸಾಗುವಂತೆ ನೋಡಿಕೊಳ್ಳುತ್ತಿದೆ. ನಂತರ ಮತ್ತಷ್ಟು ಜನರಿಗೆ ಅವಕಾಶ ನೀಡಲಾಗುತ್ತಿದೆ. ಇದರಿಂದ ಇಲ್ಲಿಗೆ ಬರುವ ಜನರಿಗೆ, ಆನೆಗಳಿಗೆ ಯಾವುದೇ ಸಮಸ್ಯೆಯಾಗದಂತೆ ನಿರ್ವಹಣೆ ಮಾಡಲಾಗುತ್ತಿದೆ.

ಅರಣ್ಯ ಭವನಕ್ಕೆ ಬಂದ ಎಲ್ಲರನ್ನೂ ಒಂದೇ ಬಾರಿ ಬಿಟ್ಟರೆ ಜನಜಂಗುಳಿ ಹೆಚ್ಚಾಗುವುದರಿಂದ ಆನೆಗಳ ವರ್ತನೆಯಲ್ಲಿ ಬದಲಾವಣೆಯಾಗಬಹುದು. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮ ಕೈಗೊಂಡು ಆನೆ ಇರುವ ಸ್ಥಳದತ್ತ ಹೋಗುವುದನ್ನು ತಡೆಗಟ್ಟಲು ಬ್ಯಾರಿಕೇಡ್ ಅಳವಡಿಸಿ, ಸಿಬ್ಬಂದಿ ನಿಯೋಜಿಸಲಾಗಿದೆ. ಇದರಿಂದ ನೂಕುನುಗ್ಗಲು, ಗೊಂದಲ ಉಂಟಾಗದೆ ಜನ ಸರಾಗವಾಗಿ ಕಡಿಮೆ ಸಮಯದಲ್ಲಿ ಗಜಪಡೆಯನ್ನು ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ.

ದಸರಾ ಮಹೋತ್ಸವಕ್ಕೆ ಗಜಪಡೆ ಸಜ್ಜುಗೊಳಿಸಲು ತಾಲೀಮಿನ ಅವಶ್ಯಕತೆ ಇದ್ದು, ಅರಮನೆಗೆ ಪ್ರವೇಶಕ್ಕೆ ಇನ್ನೂ 2 ದಿನ ಇರುವುದರಿಂದ ಗಜಪಡೆಗೆ ಅರಣ್ಯ ಭವನದ ಆವರಣದಲ್ಲೇ ಲಘು ತಾಲೀಮು ಶುಕ್ರವಾರವೂ ನಡೆಯಿತು. ಎಲ್ಲ ಆನೆಗಳು ತಾಲೀಮಿನಲ್ಲಿ ಪಾಲ್ಗೊಳ್ಳುತ್ತಿದ್ದು, ಶಾಂತವಾಗಿ ಹೆಜ್ಜೆ ಹಾಕುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ. ಬೆಳಗ್ಗೆ ಮತ್ತು ಸಂಜೆ ಆನೆಗಳು ಕಾಲ್ನಡಿಯ ತಾಲೀಮಿನಲ್ಲಿ ಪಾಲ್ಗೊಳ್ಳುತ್ತಿದ್ದು, ಅದನ್ನು ನೋಡಲು ಜನರು ಮುಗಿಬೀಳುತ್ತಿದ್ದಾರೆ.

ಆನೆಗಳ ಸ್ವಾಗತಕ್ಕೆ ತಯಾರಿ

ಆನೆಗಳು ಕಾಲ್ನಡಿಗೆಯ ಮೂಲಕ ನಗರದ ಪ್ರಮುಖ ಬೀದಿಯಲ್ಲಿ ಸಾಗಿ ಜಯಮಾರ್ತಾಂಡ ದ್ವಾರದ ಮೂಲಕ ಅರಮನೆಯನ್ನು ಆನೆಗಳು ಪ್ರವೇಶಿಸಲಿವೆ. 9 ಆನೆಗಳು ಆ.10ರಂದು ಸಂಜೆ 6.45ರಿಂದ 7.20ರ ಶುಭ ಮಕರ ಗೋಧೂಳಿ ಲಗ್ನದಲ್ಲಿ ಅರಮನೆಯಲ್ಲಿ ಸ್ವಾಗತ ಮಾಡಲಾಗುತ್ತದೆ. ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಅದಕ್ಕೂ ಮೊದಲು ಅರಣ್ಯ ಭವನದಲ್ಲಿರುವ ಆನೆಗಳಿಗೆ ಅರಣ್ಯ ಇಲಾಖೆಯಿಂದ ಪೂಜೆ ಸಲ್ಲಿಸಿ, ಬೀಳ್ಕೊಡಲಾಗುತ್ತದೆ. ಬಳಿಕ ಅಶೋಕಪುರಂ, ಅಶೋಕ ವೃತ್ತ (ಬಲ್ಲಾಳ್ ಸರ್ಕಲ್), ಜೆಎಲ್‌ಬಿ ರಸ್ತೆ, ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಗನ್‌ಹೌಸ್ ವೃತ್ತ, ಬಿ.ಎನ್.ರಸ್ತೆ ಮೂಲಕ ಜಯಮಾರ್ತಾಂಡ ದ್ವಾರದ ಬಳಿ ಆಗಮಿಸಲಿವೆ. ಈ ದ್ವಾರದಲ್ಲಿ ಅರಮನೆ ಮಂಡಳಿ ವತಿಯಿಂದ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಅರಮನೆ ಅಂಗಳದಲ್ಲಿರುವ ತಾತ್ಕಾಲಿಕ ಆಶ್ರಯಕ್ಕೆ ಸೇರಿಕೊಳ್ಳಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net