

ಮೈಸೂರು: ದಸರಾ ಕ್ರೀಡಾಕೂಟದಲ್ಲಿ ಅವ್ಯವಸ್ಥೆಯಾಗಿರುವ ಬಗ್ಗೆ ದೂರುಗಳು ಬಂದಿದ್ದು, ಈ ಕುರಿತು ವರದಿ ಸಲ್ಲಿಸಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಇಲಾಖೆಯ ಆಯುಕ್ತ ಡಾ.ಎಚ್.ಎನ್. ಗೋಪಾಲಕೃಷ್ಣ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳಿಗೆ ಸರಿಯಾದ ಊಟದ ವ್ಯವಸ್ಥೆ ಇಲ್ಲದಿರುವುದು ಹಾಗೂ ಕ್ರೀಡಾಕೂಟದಲ್ಲಿ ಭಾಗಿಯಾದವರಿಗೆ ನಿಗದಿಗಿಂತ ಕಡಿಮೆ ಗೌರವಧನ ನೀಡಲಾಗಿದೆ. ಕರಾಟೆ, ಬಾಡಿ ಬಿಲ್ಡಿಂಗ್, ಚೆಸ್, ಅಂಧರ ಚೆಸ್ ಮತ್ತು ಸೈಕಲ್ ಪೋಲೋ ಸ್ಪರ್ಧೆಗಳಿಗೆ ನಗದು ಬಹುಮಾನ ನೀಡಿಲ್ಲ.
ಕ್ರೀಡಾಕೂಟಕ್ಕೆ ಸೂಕ್ತ ರೀತಿಯಲ್ಲಿ ಮೈದಾನಗಳನ್ನು ಸಿದ್ಧಪಡಿಸದಿರುವುದು, ಕ್ರೀಡಾಕೂಟವನ್ನು ಮೊಟಕುಗೊಳಿಸಿರುವುದು, ಕ್ರೀಡಾ ಸಮವಸ್ತ್ರ, ಶೂ ವಿತರಿಸರುವುದು, ಮ್ಯಾರಥಾನ್ ಕ್ರೀಡೆ ರದ್ದು, ಬೇರೊಂದು ಸಮಿತಿ ಆಯೋಜಿಸಿರುವ ಯೋಗ ಸ್ಪರ್ಧೆಯನ್ನು ಮತ್ತೊಮ್ಮೆ ಆಯೋಜಿಸಿರುವುದು, ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದವರಿಗೆ ಗೌರವಧನ ನೀಡದಿರುವುದು, ಕಬಡ್ಡಿಯಲ್ಲಿ ಅವ್ಯವಸ್ಥೆ… ಹೀಗೆ ಹಲವು ಅವ್ಯವಸ್ಥೆಗಳ ಕುರಿತು ಡಾ.ಶಾಲಿನಿ ರಜನೀಶ್ ಪಟ್ಟಿ ಮಾಡಿದ್ದಾರೆ.
ಈ ಅವ್ಯವಸ್ಥೆಯಿಂದಾಗಿ ಕ್ರೀಡಾಪಟುಗಳಿಗೆ ಅನನುಕೂಲವಾಗಿದೆ. ಜತೆಗೆ ಇಲಾಖೆಯ ಗೌರವಕ್ಕೆ ಧಕ್ಕೆ ಉಂಟಾಗಿರುತ್ತದೆ. ಆದ್ದರಿಂದ, ಈ ಮೇಲಿನ ಅಂಶಗಳ ಬಗ್ಗೆ ವರದಿಯನ್ನು ಕೂಡಲೇ ಸಲ್ಲಿಸಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ ನೋಟಿಸ್‌ನ ಪ್ರತಿಯನ್ನು ಜಂಟಿ ನಿರ್ದೇಶಕ ಎಂ.ಸಿ.ರಮೇಶ್ ಅವರಿಗೂ ನೀಡಲಾಗಿದೆ.