

ಮೈಸೂರು: ಮೈಸೂರು ದಸರಾ ಕವಿಗೋಷ್ಠಿ ಇಂದು ತನ್ನ ಪಾರಂಪರಿಕ ಘನತೆಯನ್ನು ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ ಎಂದು ಕವಿ ಬನ್ನೂರು ಕೆ.ರಾಜು ಬೇಸರ ವ್ಯಕ್ತಪಡಿಸಿದರು.
ಮುದ್ದುಕೃಷ್ಣ ಪ್ರಕಾಶನ ಮತ್ತು ಹಿರಣ್ಮಯಿ ಪ್ರತಿಷ್ಠಾನ ಸಹಯೋಗದಲ್ಲಿ ನಿಮಿಷಾಂಬ ಬಡಾವಣೆಯ ಹಿರಿಯ ನಾಗರಿಕರ ಹಗಲು ಯೋಗ ಕ್ಷೇಮ ಕೇಂದ್ರದಲ್ಲಿ ಏರ್ಪಡಿಸಿದ್ದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಚುಟುಕು ಬ್ರಹ್ಮ ದಿನಕರ ದೇಸಾಯಿ ಜನ್ಮದಿನೋತ್ಸವ ನೆನಪಿನ ಕವಿಗೋಷ್ಠಿಯಲ್ಲಿ ಮಾತನಾಡಿದರು
ಕುವೆಂಪು, ಬಿಎಂಶ್ರೀ, ಬೇಂದ್ರೆ, ಜಿಎಸ್ಸೆಸ್, ನಿಸಾರ್, ಕಣವಿ, ಶಾಂತಾದೇವಿ, ಹಾಮಾನಾ, ಅನಂತಮೂರ್ತಿ ಮುಂತಾದ ಸಾಹಿತ್ಯ ದಿಗ್ಗಜರ ಹೆಜ್ಜೆಗಳಿರುವ ರಾಷ್ಟ್ರಮಟ್ಟದ ಬಹು ಮಹತ್ವದ ಮೈಸೂರು ದಸರಾ ಕವಿಗೋಷ್ಠಿ ಇತ್ತೀಚಿನ ವರ್ಷಗಳಲ್ಲಿ ರಾಜಕಾರಣಿಗಳ, ಅಧಿಕಾರಿಗಳ ಉಸ್ತುವಾರಿಯಲ್ಲಿ ಕಳಾಹೀನವಾಗುತ್ತಿದೆ ಎಂದರು.
ದಸರಾ ಮಹೋತ್ಸವದ ಕವಿಗೋಷ್ಠಿಯ ಉಪಸಮಿತಿಯು ರಾಜಕಾರಣಿಗಳ ಮತ್ತು ಅಧಿಕಾರಿಗಳ ಸುಪರ್ದಿಗೆ ಹೋದ ನಂತರ ಚಿಗುರು, ಅರಳು ಕವಿಗೋಷ್ಠಿ, ಚುಟುಕು ಕವಿ ಗೋಷ್ಠಿ, ಯುವ ಕವಿಗೋಷ್ಠಿ ಎಂದೆಲ್ಲ ವಿಂಗಡಿಸಿ ಪ್ರಧಾನ ದಸರಾ ಕವಿ ಗೋಷ್ಠಿಯ ಘನತೆಯನ್ನೇ ಮಂಕುಗೊಳಿಸುತ್ತಿದ್ದಾರೆ. ಹೀಗಾಗಿ ಈ ಹಿಂದೆ ನಡೆಯುತ್ತಿದ್ದಂತೆ ಒಂದೇ ವೇದಿಕೆಯಲ್ಲಿ ಎಲ್ಲ ರೀತಿಯ ಕಾವ್ಯಪ್ರಾಕಾರಗಳ ಬಹುಭಾಷಾ ಕವಿಗೋಷ್ಠಿ ನಡೆಸುವುದು ಸೂಕ್ತ ಎಂದು ಬನ್ನೂರು ಕೆ.ರಾಜು ಹೇಳಿದರು.
ಕವನ ವಾಚನ:
ಕವಿಗೋಷ್ಠಿಯಲ್ಲಿ ಕವಿಗಳಾದ ಸಿ.ಬಸಪ್ಪ ಸಾಲುಂಡಿ, ಪ್ರಭುಸ್ವಾಮಿ ಗಟ್ಟಿವಾಡಿಪುರ, ನಾಗಮ್ಮ, ಸಂಗೀತ ವಿದ್ವಾನ್ ಕೃಷ್ಣಮೂರ್ತಿ,ಪ್ರೊ.ಆರ್.ಎ. ಕುಮಾರ್ ಮಂಡ್ಯ, ಟಿ.ಸತ್ಯನಾರಾಯಣ್, ಎನ್.ವಿ. ರಮೇಶ್, ಜೆ.ಪ್ರಭಾ ಶಾಸ್ತ್ರಿ ಇತರರು ಕವಿತೆ ವಾಚಿಸಿದರು
ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ನಿವೃತ್ತ ಶಿಕ್ಷಕ ಎ.ಸಂಗಪ್ಪ, ಮುದ್ದುಕೃಷ್ಣ ಪ್ರಕಾಶನದ ಅಧ್ಯಕ್ಷ ಎಂ.ಮುತ್ತುಸ್ವಾಮಿ, ಯೋಗಕ್ಷೇಮ ಕೇಂದ್ರದ ಪ್ರಭುಸ್ವಾಮಿ ಇತರರು ಇದ್ದರು.