

ಮಂಜುನಾಥ ಟಿ.ಭೋವಿ ಮೈಸೂರು
ಬಾನಂಗಳದಲ್ಲಿ ಲೋಹದ ಹಕ್ಕಿಗಳ ಚಿತ್ತಾರ ಮೂಡಿಸುವ ‘ದಸರಾ ವೈಮಾನಿಕ ಪ್ರದರ್ಶನ’ದ ಮೇಲೆ ಈ ಸಲ ಅನಿಶ್ಚಿತತೆಯ ಕಾರ್ಮೋಡ ಕವಿದಿದೆ.
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಏರ್ ಶೋ ಆಯೋಜಿಸುವ ಕುರಿತು ಯಾವುದೇ ಪಕ್ರಿಯೆ ನಡೆದಿಲ್ಲ. ಜತೆಗೆ, ಜಿಲ್ಲಾಡಳಿತವೂ ಆಸಕ್ತಿ ತೋರಲಿಲ್ಲ. ಇತ್ತ ರಾಜ್ಯ ಸರ್ಕಾರವೂ ಮನಸ್ಸು ಮಾಡಲಿಲ್ಲ. ಇದರಿಂದ ಏರ್ ಶೋ ಜರುಗುವುದು ಅನುಮಾನವಾಗಿದ್ದು, ಈ ಸಾಹಸಮಯ ಪ್ರದರ್ಶನ ಕಣ್ತುಂಬಿಕೊಳ್ಳುವ ಕಾತರದಲ್ಲಿದ್ದ ಜನರಿಗೆ ನಿರಾಶೆಯಾಗಿದೆ.
ಪೂರ್ವಸಿದ್ಧತೆ ಇಲ್ಲ:
ಕರೊನಾ ಕಾರಣಕ್ಕೆ ಎರಡು ವರ್ಷ ದಸರಾ ಮೇಲೆ ಗ್ರಹಣ ಕವಿದಿತ್ತು. ಹೀಗಾಗಿ, ಸರಳವಾಗಿ ದಸರೆ ನಡೆಯಿತು. ಈ ಸಲ ಅದ್ದೂರಿ ಆಚರಣೆಗೆ ಕ್ರಮ ವಹಿಸಲಾಗಿದೆ. ಆದರೆ, ಇದಕ್ಕೆ ಪೂರಕವಾಗಿ ವೈಮಾನಿಕ ಪ್ರದರ್ಶನಕ್ಕಾಗಿ ಜಿಲ್ಲಾಡಳಿತದಿಂದ ಯಾವುದೇ ಪೂರ್ವ ತಯಾರಿ ನಡೆದಿಲ್ಲ. ದಸರಾ ಉದ್ಘಾಟನೆಗೆ ಇನ್ನು 24 ದಿನಗಳು ಮಾತ್ರ ಉಳಿದಿವೆ. ಇಷ್ಟು ಕಡಿಮೆ ಅವಧಿಯಲ್ಲಿ ಜಿಲ್ಲಾಡಳಿತ ರಾಜ್ಯ ಸರ್ಕಾರದ ನೆರವಿನೊಂದಿಗೆ ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಈ ಪ್ರದರ್ಶನ ಏರ್ಪಡಿಸುವುದು ಸದ್ಯಕ್ಕೆ ಕಷ್ಟಕರವಾಗಲಿದೆ.
ಕೇಂದ್ರಕ್ಕೆ ಪತ್ರ ಬರೆದಿಲ್ಲ:
ವೈಮಾನಿಕ ಪ್ರದರ್ಶನ ಹಮ್ಮಿಕೊಳ್ಳುವ ಕುರಿತು ಎರಡ್ಮೂರು ತಿಂಗಳಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗೆ ಜಿಲ್ಲಾಧಿಕಾರಿ ಪ್ರಸ್ತಾವನೆ ಸಲ್ಲಿಸಬೇಕು. ಅವರು ಭಾರತೀಯ ವಾಯುದಳದ ಏರ್ ಮಾರ್ಷಲ್‌ಗೆ ಮತ್ತು ಕೇಂದ್ರ ರಕ್ಷಣಾ ಸಚಿವಾಲಯದ ಮುಖ್ಯ ಕಾರ್ಯದರ್ಶಿಗೆ ಪತ್ರವ್ಯವಹಾರ ಮಾಡಬೇಕು. ಆದರೆ, ಈ ಸಲ ಈ ರೀತಿಯ ಆಡಳಿತಾತ್ಮಕ ಪ್ರಕ್ರಿಯೆ ನಡೆದಿಲ್ಲ. ಹೀಗಾಗಿ, ಈ ಪ್ರದರ್ಶನ ನಡೆಯುವ ಸಾಧ್ಯತೆ ಇಲ್ಲ ಎಂಬುದು ಮೇಲ್ನೋಟಕ್ಕೆ ಗೋಚರವಾಗುತ್ತಿದೆ.
ಈ ಹಿಂದೆ ನಡೆದಿತ್ತು:
2009ರ ದಸರಾದಲ್ಲಿ ವೈಮಾನಿಕ ಪ್ರದರ್ಶನವನ್ನು ನಗರದ ಬನ್ನಿಮಂಟಪದ ಕವಾಯತು ಮೈದಾನದಲ್ಲಿ ಏರ್ಪಡಿಸಲಾಗಿತ್ತು. ಬಳಿಕ 8 ವರ್ಷ ನಡೆಯಲಿಲ್ಲ. 2017ರಲ್ಲಿ ಅಂದಿನ ಜಿಲ್ಲಾಧಿಕಾರಿ ಡಿ.ರಂದೀಪ್ ಅವರ ಪ್ರಯತ್ನದ ಫಲವಾಗಿ ಪ್ರದರ್ಶನ ಆಯೋಜಿಸಲಾಗಿತ್ತು. ಆದರೆ, 2018ರಲ್ಲಿ ಹಮ್ಮಿಕೊಳ್ಳಲು ಆಗಲಿಲ್ಲ. 2019ರಲ್ಲಿ ಅಂದಿನ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಒಲವಿನ ಪ್ರಯತ್ನವಾಗಿ ಏರ್ ಶೋ ಜರುಗಿತ್ತು. ಕರೊನಾ ಸಂಕ್ರಮಣ ಕಾರಣಕ್ಕೆ 2020 ಮತ್ತು 2021ರಲ್ಲಿ ಸರಳವಾಗಿ ನಡೆದ ದಸರಾದಲ್ಲಿ ಏರ್ ಶೋ ಆಯೋಜನೆಗೆ ಯಾರೂ ಗಮನ ನೀಡಲಿಲ್ಲ.
ಪ್ರಯತ್ನ ನಡೆದಿಲ್ಲ:
ಅಧಿಕೃತ ವೈಮಾನಿಕ ಪ್ರದರ್ಶನಕ್ಕೆ ಮಾತ್ರ ಭಾರತೀಯ ವಾಯುದಳ ಅನುಮೋದನೆ ನೀಡುತ್ತದೆ. ಆದರೆ ಯಾವುದೇ ಸಾಂಸ್ಕೃತಿಕ ಉತ್ಸವ ಅಥವಾ ಸರ್ಕಾರಿ ಪ್ರಾಯೋಜಿತ ಮಹೋತ್ಸವದಲ್ಲಿ ಈ ಪ್ರದರ್ಶನ ನಡೆಸುವುದು ಕಡಿಮೆ. ಈ ನಡುವೆ, ರಾಜ್ಯ ಸರ್ಕಾರ ಒತ್ತಡ ಹೇರಿದರೆ ಪ್ರದರ್ಶನಕ್ಕೆ ಅವಕಾಶ ನೀಡುತ್ತದೆ. ಆದರೆ, ಈ ಸಲ ಯಾವುದೇ ಪ್ರಯತ್ನಗಳು ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.
ಸೂಕ್ತ ಸೌಲಭ್ಯ ಇಲ್ಲ:
ಏರ್ ಶೋಗೆ ಮೈಸೂರಿನಲ್ಲಿ ಸೂಕ್ತ ಸೌಲಭ್ಯ ಇಲ್ಲ. ವಿಮಾನಗಳ ಭೂ ಸ್ಪರ್ಶ, ಭೂಮಿಯಿಂದ ಆಕಾಶಕ್ಕೆ ಹಾರಲು ಮತ್ತು ನಿಲುಗಡೆಗೆ ವಿಸ್ತಾರವಾದ ವಿಮಾನ ನಿಲ್ದಾಣ ಇಲ್ಲ. ಚಿಕ್ಕದಾಗಿರುವ ಮಂಡಕಳ್ಳಿ ವಿಮಾನ ನಿಲ್ದಾಣ ಲಘು ವಿಮಾನಗಳ ಹಾರಾಟಕ್ಕೆ ಮಾತ್ರ ಯೋಗ್ಯವಾಗಿದೆ. ರನ್‌ವೇ ಚಿಕ್ಕದಾಗಿರುವುದರಿಂದ ಯುದ್ಧ ವಿಮಾನಗಳ ಹಾರಾಟಕ್ಕೆ ಸೂಕ್ತವಾಗಿಲ್ಲ. ಆದ್ದರಿಂದ ಮೈಸೂರಿನಲ್ಲಿ ವೈಮಾನಿಕ ಪ್ರದರ್ಶನ ಮಾಡಲು 150 ಕಿ.ಮೀ. ದೂರದ ಬೆಂಗಳೂರಿನ ಎಚ್‌ಎಎಲ್ ಮತ್ತು ಜಕ್ಕೂರು ವಿಮಾನ ನಿಲ್ದಾಣದಿಂದ ವಿಮಾನ, ಹೆಲಿಕಾಪ್ಟರ್ ಬರಬೇಕಾಗುತ್ತದೆ. ಇದುವೇ ದೊಡ್ಡ ಸಮಸ್ಯೆಯಾಗಿದೆ.
ಬಲು ದುಬಾರಿ:
‘ಏರ್ ಶೋ ಬಲು ವೆಚ್ಚದಾಯಕವಾಗಿದೆ. ಎರಡ್ಮೂರು ದಸರಾ ಉಪಸಮಿತಿಗಳ ಒಟ್ಟು ಬಜೆಟ್ ಈ ಕಾರ್ಯಕ್ರಮವೊಂದೇ ನುಂಗಿ ಹಾಕಲಿದೆ. ಹೆಚ್ಚಿನ ಆರ್ಥಿಕ ಹೊರೆಯಾಗುವ ಕಾರಣಕ್ಕೆ ಈ ಪ್ರದರ್ಶನ ಆಯೋಜನೆಗೆ ಒಲವು ತೋರುವುದಿಲ್ಲ. ಈ ಕಾರ್ಯಕ್ರಮಕ್ಕಾಗಿ ಮೈಸೂರಿಗೆ ಬರುವ ವಾಯುದಳದ ಹಿರಿಯ ಅಧಿಕಾರಿಗಳಿಗೆ ರಾಜಾತಿಥ್ಯ ನೀಡಿ, ವಾಸ್ತವ್ಯಕ್ಕೆ ಐಷಾರಾಮಿ ಹೋಟೆಲ್ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಿಕೊಡಬೇಕು. ಈ ರೀತಿಯ ಜಂಜಾಟದಿಂದ ಏರ್ ಶೋ ಕುರಿತು ಬಹುತೇಕ ಅಧಿಕಾರಿಗಳು ಮೂಗುಮುರಿಯುತ್ತಾರೆ’ ಎನ್ನುತ್ತಾರೆ ಅಧಿಕಾರಿಯೊಬ್ಬರು.
ಮೈನವಿರೇಳಿಸುವ ಕಸರತ್ತು
ಕೇವಲ ಒಂದು ತಾಸು ನಡೆಯುವ ಏರ್ ಶೋ ಸಹಸ್ರಾರು ಜನರನ್ನು ಪುಳಕಗೊಳಿಸುತ್ತದೆ. ಭಾರತೀಯ ವಾಯುಸೇನೆ ಹೆಲಿಕಾಪ್ಟರ್‌ನಿಂದ ಪುಷ್ಪವೃಷ್ಟಿ, 6 ಸಾವಿರ ಅಡಿ ಎತ್ತರದಿಂದ ತ್ರಿವರ್ಣ ಧ್ವಜ ಸಹಿತ ಯೋಧರಿಂದ ಸ್ಕೈಡ್ರೈವಿಂಗ್, ಹಗ್ಗದ ಮೂಲಕ ಮೈದಾನಕ್ಕೆ ಇಳಿದು ಕಲ್ಪಿತ ಯುದ್ಧ ಪ್ರದರ್ಶನ, ಪ್ಯಾರಾಚೂಟ್ ಧರಿಸಿ ಜಿಗಿದು ಮೈನವಿರೇಳಿಸುವ ಕಸರತ್ತು ಸೇರಿದಂತೆ ಈ ರೀತಿಯ ಸಾಹಸಮಯ ದೃಶ್ಯಗಳು ರಸದೌತಣವನ್ನೇ ಈ ಹಿಂದೆ ನೋಡುಗರಿಗೆ ಉಣಬಡಿಸುತ್ತಿದ್ದವು. ಆದರೆ, ಇದು ಈ ಸಲ ಕಾಣಲು ದೊರೆಯುವುದಿಲ್ಲ.
ಮೈಸೂರು ದಸರಾ ಮಹೋತ್ಸವದಲ್ಲಿ ವೈಮಾನಿಕ ಪ್ರದರ್ಶನ ಆಯೋಜನೆ ಕುರಿತು ಸದ್ಯಕ್ಕೆ ಯಾವುದೇ ಪ್ರಸ್ತಾವನೆ ಇಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ಯೋಚಿಸಲಾಗುವುದು.ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿ