ದಸರಾ ಉದ್ಘಾಟಕರ ಕುರಿತು ಚರ್ಚೆ ಆಗಿಲ್ಲ: ಸಚಿವ ಎಸ್.ಟಿ. ಸೋಮಶೇಖರ್

s.t.somashekhar
Published on

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರ ಕುರಿತು ಇನ್ನೂ ಚರ್ಚೆ ಆಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾ ಉದ್ಘಾಟಕರ ಹೆಸರು ಇನ್ನೂ ಅಂತಿಮವಾಗಿಲ್ಲ. ಈ ಕುರಿತು ಮುಖ್ಯಮಂತ್ರಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.

ಈಗಾಗಲೇ ಅದ್ದೂರಿ ದಸರಾ ಆಚರಣೆಗೆ ತೀರ್ಮಾನಿಸಲಾಗಿದೆ. ಇದಕ್ಕಾಗಿ ಉಪ ಸಮಿತಿಗಳನ್ನು ರಚಿಸಿ ಕೆಲಸವನ್ನು ವಹಿಸಲಾಗಿದೆ. ಮಳೆ ನಿಂತ ನಂತರ ನಗರದಲ್ಲಿ ದಸರಾ ಕೆಲಸ ಕೂಡ ಆರಂಭವಾಗಲಿದೆ ಎಂದರು.

ಮೈಸೂರು ಮೇಯರ್ ಮತ್ತು ಉಪಮೇಯರ್ ಚುನಾವಣೆ ಕುರಿತು ಪಕ್ಷದಿಂದ ನಮಗೆ ಯಾವುದೇ ಸೂಚನೆ ಬಂದಿಲ್ಲ. ಪ್ರಧಾನಿ ಮೋದಿ ಅವರು ಸೆಪ್ಟೆಂಬರ್ 2ರಂದು ಮಂಗಳೂರಿಗೆ ಬರುತ್ತಿರುವುದರಿಂದ ಪಕ್ಷದ ರಾಜ್ಯಾಧ್ಯಕ್ಷರು ನಮಗೆ ಏನೂ ಹೇಳಿಲ್ಲ. ಪ್ರಧಾನಿ ಬಂದು ಹೋದ ಮೇಲೆ ತಿಳಿಸುತ್ತಾರೆ. ಚುನಾವಣೆಗೆ ಇನ್ನೂ ಸಮಯವಿದೆ ಎಂದು ತಿಳಿಸಿದರು.

ರಾಮನಗರ ಹೆದ್ದಾರಿ ಜಲಾವೃತ ಕುರಿತು ಅಧಿಕಾರಿಗಳೆಲ್ಲರನ್ನೂ ಕರೆದು ಸಭೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ. ಭಾನುವಾರವೇ ರಾಮನಗರ, ಮಂಡ್ಯ, ಮೈಸೂರು ವರ್ಚುವಲ್ ಮೂಲಕ ಚರ್ಚೆ ನಡೆಸಿದ್ದಾರೆ. ನಾಗಮಂಗಲಕ್ಕೆ ಹೋಗುವ ರಸ್ತೆ ಮತ್ತೆ ಕನಕಪುರಕ್ಕೆ ಹೋಗುವ ರಸ್ತೆಯಲ್ಲಿ ಬದಲಾವಣೆ ಮಾಡಬೇಕು. ಏಕೆಂದರೆ ಕೆರೆ ಕೋಡಿ ಒಡೆದು ರಸ್ತೆ ಮೇಲೆ ನಿಂತುಕೊಂಡಿದೆ. ಈ ಮಾರ್ಗವಾಗಿ ಮೈಸೂರಿಗೆ ಹೋಗುವುದನ್ನು ಆದಷ್ಟು ತಪ್ಪಿಸಬೇಕು ಎಂದು ಹೇಳಿದ್ದಾರೆ. ಎರಡು ದಿನದಲ್ಲಿ ಮಳೆ ಕಡಿಮೆಯಾದರೆ ರಸ್ತೆಯಲ್ಲಿ ಹೋಗಬಹುದು ಎಂದರು.

ಕಾಂಗ್ರೆಸ್‌ನ ಐಕ್ಯತೆ ನಡಿಗೆ ಕುರಿತು ಪ್ರತಿಕ್ರಿಯಿಸಿದ ಅವರು, ಅವರದ್ದು ಏನು ಐಕ್ಯತೆ ನನಗೆ ಅರ್ಥವಾಗುತ್ತಿಲ್ಲ. ಪ್ರಧಾನಿ ಮೋದಿ ಇಡೀ ವಿಶ್ವವೇ ಮೆಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net