

ಚಾಮರಾಜನಗರ: ಕಳೆದ ವರ್ಷದಂತೆ ಈ ಬಾರಿಯೂ ಚಾಮರಾಜನಗರ ದಸರಾ ಮಹೋತ್ಸವ ಆಚರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಆಗ್ರಹಿಸಿ ಜಿಲ್ಲಾ ಕಲಾವಿದರ ಒಕ್ಕೂಟದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ವಿವಿಧ ವೇಷ-ಭೂಷಣಗಳನ್ನು ತೊಟ್ಟು ಅಲ್ಲಿಂದ ಹೊರಟು ಶ್ರೀಭುವನೇಶ್ವರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ಪ್ರತಿಭಟನೆ ನಡೆಸಿದರು. ಬಳಿಕ ಬಿ.ರಾಚಯ್ಯ ಜೋಡಿರಸ್ತೆ ಮಾರ್ಗವಾಗಿ ಜಿಲ್ಲಾಡಳಿತ ಭವನಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿದರು. ವಿವಿಧ ೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹಾಗೂ ಶಾಸಕರಿಗೆ ಮನವಿ ಸಲ್ಲಿಸಿದರು.
ಮೈಸೂರು ಜಿಲ್ಲೆಯ ಭಾಗವಾಗಿದ್ದ ಚಾಮರಾಜನಗರದಲ್ಲಿ 2007 ರಲ್ಲಿ ರಾಜ್ಯ ಸರ್ಕಾರವೇ ಗ್ರಾಮೀಣ ದಸರಾ ಎಂಬ ಹೆಸರಿನಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ಶುರುವಾಯಿತು. 2013 ರಲ್ಲಿ ಚಾಮರಾಜನಗರ ದಸರಾ ಹೆಸರಿನಲ್ಲೇ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ಮೈಸೂರು ಉಸ್ತವಾರಿ ಸಚಿವರಾಗಿದ್ದ ವಿ.ಶ್ರೀನಿವಾಸ್ ಪ್ರಸಾದ್ ಹಾಗೂ ಜಿಲ್ಲಾ ಉಸ್ತವಾರಿ ಸಚಿವರಾಗಿದ್ದ ಎಚ್.ಎಸ್.ಮಹದೇವಪ್ರಸಾದ್ ಕಾಳಜಿಯಿಂದ ದಸರಾ ಮಹೋತ್ಸವ ಆರಂಭಗೊಂಡಿತು. ಪ್ರತಿವರ್ಷ ಸಡಗರ ಸಂಭ್ರಮದಿಂದ ದಸರಾ ಸಾಂಸ್ಕೃತಿಕ ಆಚರಣೆ ನಡೆದಿದ್ದು, ಜಿಲ್ಲೆಯ ಕಲಾವಿದರಿಗೆ ಸಾಕಷ್ಟು ಅವಕಾಶಗಳು ದೊರೆತಿದೆ ಎಂದರು.
ಈ ಬಾರಿ ಚಾಮರಾಜನಗರದಲ್ಲಿ ದಸರಾ ಮಹೋತ್ಸವ ಆಚರಣೆ ಮಾಡುವುದು ಬೇಡ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿರುವುದು ಕಲಾವಿದರಿಗೆ ನೋವನ್ನುಂಟು ಮಾಡಿದೆ. ಇದರಿಂದ ಸಾವಿರಾರು ಕಲಾವಿದರು ಅವಕಾಶ ವಂಚಿತರಾಗಲಿದ್ದಾರೆ. ಆದ್ದರಿಂದ ಮೈಸೂರಿನೊಂದಿಗೆ ಭಾವನಾತ್ಮಕ ಸಂಬಂಧ ಬೆಸೆದುಕೊಂಡಿರುವ ಚಾಮರಾಜನಗರದಲ್ಲಿ ದಸರಾ ಮಹೋತ್ಸವವನ್ನು ಕಳೆದ ವರ್ಷದಂತೆ ಈ ವರ್ಷವೂ ಆಚರಿಸಬೇಕು. ಈ ಮೂಲಕ ಸಾವಿರಾರು ಬಡ ಕಲಾವಿದರಿಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಪತ್ರದಲ್ಲಿ ಕೋರಿದ್ದಾರೆ.
ಪ್ರತಿಭಟನೆಯಲ್ಲಿ ಜಿಲ್ಲಾ ಕಲಾವದಿರ ಒಕ್ಕೂಟದ ಬಿಸಲವಾಡಿ ಸೋಮಶೇಖರ್, ಉಮ್ಮತ್ತೂರು ಚಂದ್ರು, ಸಿ.ಎಂ.ನರಸಿಂಹಮೂರ್ತಿ, ಮಹೇಶ್ ಜಂಗಮ, ಶಾಂತರಾಜು, ಮಂಗಲ ಶಿವಣ್ಣ, ಕಲೆ ನಟರಾಜ್, ಎಂ.ಎನ್.ಮಹದೇವ್, ಉಮ್ಮತ್ತೂರು ಬಸವರಾಜು, ಹೊನ್ನಮ್ಮ, ಚಂದ್ರಮ್ಮ, ದೊಡ್ಡಮ್ಮ, ಅವತಾರ್ ಪ್ರವೀಣ್, ಡ್ಯಾನ್ಸ್ ಮನು, ಹೊಸೂರು ಶಿವಣ್ಣ, ಶಿವಶಂಕರ್ ಚಟ್ಟು, ಕಿರಣ್ ಗಿರ್ಗಿ, ಗುರುರಾಜ್ ಹಾಗೂ ಇತರರು ಹಾಜರಿದ್ದರು.
ವೇಷ-ಭೂಷಣ ತೊಟ್ಟು ಧರಣಿ:
ಜಿಲ್ಲಾ ಕಲಾವಿದರ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ತಂಬೂರಿ ಪದ ಕಲಾವಿದರು, ವೀರಗಾಸೆ ಮತ್ತು ನಾದಸ್ವರ ಕಲಾವಿದರು ವೇಷ-ಭೂಷಣವನ್ನು ತೊಟ್ಟು ಗಮನಸೆಳೆದರು. ಶ್ರೀಭುವನೇಶ್ವರಿ ವೃತ್ತದಿಂದ ಜಿಲ್ಲಾಡಳಿತ ಭವನಕ್ಕೆ ಹೊರಟ ಪ್ರತಿಭಟನಾನಿರತ ಕಲಾವಿದರನ್ನು ಪೊಲೀಸರು ಮುಖ್ಯದ್ವಾರದಲ್ಲೇ ತಡೆದರು. ಈ ವೇಳೆ ಕಲಾವಿದರೆಲ್ಲಾ ಜಾನಪದ ಹಾಡುಗಳನ್ನು ಹಾಡುವ ಮೂಲಕ ವಿಭಿನ್ನ ರೀತಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ 25-30 ಕಲಾವಿದರನ್ನು ಮಾತ್ರ ಒಳಗೆ ಬಿಡಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅವರು ಕಲಾವಿದರಿಂದ ಮನವಿ ಸ್ವೀಕರಿಸಿ ಮಾತನಾಡಿ, ಈ ವಿಚಾರವನ್ನು ಮುಖ್ಯಮಂತ್ರಗಳ ಗಮನಕ್ಕೆ ತಂದು ದಸರಾ ಮಹೋತ್ಸವ ಆಚರಣೆಗೆ ಕ್ರಮವಹಿಸುತ್ತೇವೆ ಎಂದು ಭರವಸೆ ನೀಡಿದರು.