ದಸಂಸದಿಂದ ಡಿಸಿ ಕಚೇರಿ ಬಳಿ ಪ್ರತಿಭಟನೆ

19
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ದಸಂಸದಿಂದ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಶುಕ್ರವಾರ ಪ್ರತಿಭಟನೆ ನಡೆಯಿತು.
Published on

ಮೈಸೂರು: ದೇಶದಲ್ಲಿ ಅಸ್ಪಶ್ಯತೆ, ಜಾತಿ, ಧರ್ಮ ಸಂಘರ್ಷ ಹೆಚ್ಚಾಗುತ್ತಿದ್ದು, ಸಮಾಜದಲ್ಲಿ ಅಶಾಂತಿ ಉಂಟಾಗುತ್ತಿದೆ. ಆದ್ದರಿಂದ ಶಾಂತಿ ನೆಲೆಸಲು ಸರ್ಕಾರ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ದೇಶದಲ್ಲಿ ದಲಿತರ ಮೇಲಿನ ದೌಜ್ಯನ್ಯ, ಕೊಲೆ, ಜಾತಿ, ಧರ್ಮ ಘರ್ಷಣೆಗಳು ನಡೆಯುತ್ತಲೇ ಇದ್ದು, ಸಮಾಜದಲ್ಲಿ ಅಶಾಂತಿ ಉಂಟಾಗುತ್ತಿದೆ. ಎಲ್ಲರನ್ನೂ ಸಮಾನವಾಗಿ ಕಾಣಬೇಕಾದ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿವೆ. ಸರ್ಕಾರದ ಕ್ರಮ ಖಂಡಿಸಿ ಹೋರಾಟ ಮಾಡುವ ಚಿಂತಕರು, ಪ್ರಗತಿಪರರನ್ನು ಜೈಲಿಗೆ ಕಳುಹಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.
ರಾಜಸ್ಥಾನದ ಶಾಲೆಯೊಂದರಲ್ಲಿ ನೀರು ಕುಡಿಯಲು ಹೋದ 9 ವರ್ಷದ ಬಾಲಕನನ್ನು ನೀರಿನ ಮಡಿಕೆ ಮುಟ್ಟಿದ ಎಂಬ ಕಾರಣಕ್ಕೆ ಶಿಕ್ಷಕನೇ ಅಮಾನವೀಯವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. ಉತ್ತರ ಪ್ರದೇಶದಲ್ಲಿ 3ನೇ ತರಗತಿ ವಿದ್ಯಾರ್ಥಿಗೆ ಶುಲ್ಕ ಪಾವತಿಸಿಲ್ಲ ಎಂದು ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಲಾಗಿದೆ. ಚಿತ್ರದುರ್ಗದಲ್ಲಿ ಅನ್ಯಾಯ ಪ್ರಶ್ನಿಸಿದ ದಲಿತನ ಮೇಲೆ ಮೇಲ್ವರ್ಗದವರು ಹಲ್ಲೆ ಮಾಡಿ, ಆತನ ಮನೆಯನ್ನು ಧ್ವಂಸ ಮಾಡಿದ್ದಾರೆ. ಈ ರೀತಿಯ ಘಟನೆಗಳು ಖಂಡನಾರ್ಹವಾಗಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿಯೂ ವಿದ್ಯಾರ್ಥಿಗಳ ಕೊಲೆ, ಅಸ್ಪಶ್ಯತೆ ಆಚರಣೆ ಪ್ರಕರಣಗಳಲ್ಲಿ ಸರ್ಕಾರ ಸೂಕ್ತ ತನಿಖೆ ನಡೆಸಿ ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು. ಮೃತ ವಿದ್ಯಾರ್ಥಿಗಳ ಕುಟುಂಬದಲ್ಲಿರುವ ವಿದ್ಯಾವಂತರಿಗೆ ಸರ್ಕಾರಿ ನೌಕರಿ ನೀಡಬೇಕು. ಮೃತ ವಿದ್ಯಾರ್ಥಿಗಳ ಪೋಷಕರಿಗೆ ಕುಟುಂಬ ಜೀವನಕ್ಕಾಗಿ ವ್ಯವಸಾಯ ಮಾಡಲು 10 ಎಕರೆ ಭೂಮಿ ಮಂಜೂರು ಮಾಡಬೇಕು. ದೌರ್ಜನ್ಯಕ್ಕೊಳಗಾದವರಿಗೆ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ದಸಂಸ ಜಿಲ್ಲಾ ಸಂಯೋಜಕರಾದ ಕಾರ್ಯ ಬಸವಣ್ಣ, ಸುನೀತಾ ಪ್ರಕಾಶ್‌ಗೌಡ, ಮಹೇಶ್.ಕೆ.ಬೆಳತ್ತೂರು, ಸಿದ್ದರಾಜು ಯರಗನಹಳ್ಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net