ದೇಸಿ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಿ

TKE kusti
ತರೀಕೆರೆ ಬಯಲು ರಂಗ ಮಂದಿರ ಆವರಣದಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ದಸರಾ ಬಯಲು ಜಂಗೀ ಕುಸ್ತಿ ಪಂದ್ಯಾವಳಿಗೆ ಪುರಸಭೆ ಅಧ್ಯಕ್ಷ ವಸಂತ್‌ಕುಮಾರ್ ಚಾಲನೆ ನೀಡಿದರು. ಟಿ.ಎಸ್.ರಮೇಶ್, ಎಂ.ಗಿರಿಜಾ, ಟಿ.ಜಿ.ಶಶಾಂಕ್, ಟಿ.ದಾದಾಪೀರ್, ಟಿ.ಜಿ.ಮಂಜುನಾಥ್, ಟಿ.ಎಂ.ಮಂಜುನಾಥ, ಸಿ.ಜಯಸ್ವಾಮಿ ಇತರರಿದ್ದರು.
Published on

ತರೀಕೆರೆ: ದೇಸಿ ಕ್ರೀಡೆ ಜತೆ ಸಂಸ್ಕೃತಿ ಜೀವಂತಗೊಳಿಸಿದಾಗ ಮಾತ್ರ ನಮ್ಮ ಪರಂಪರೆ ಮುಂದುವರಿಯಲಿದೆ ಎಂದು ಪುರಸಭೆ ಅಧ್ಯಕ್ಷ ವಸಂತ್‌ಕುಮಾರ್ ಹೇಳಿದರು.

ಪಟ್ಟಣದ ಬಯಲು ರಂಗ ಮಂದಿರ ಆವರಣದಲ್ಲಿ ಪುರಸಭೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಶ್ರೀಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘದ ಸಹಯೋಗದಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ದಸರಾ ಬಯಲು ಜಂಗೀ ಕುಸ್ತಿ ಪಂದ್ಯಾವಳಿಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಕುಸ್ತಿ ಸೇರಿ ವಿವಿಧ ಕ್ರೀಡೆಗಳು ಆರೋಗ್ಯ ರಕ್ಷಣೆಗೆ ಸಹಕಾರಿ. ಸರ್ಕಾರ ಕ್ರೀಡಾ ಕ್ಷೇತ್ರಕ್ಕೆ ಭರಪೂರ ಅನುದಾನ ಒದಗಿಸುತ್ತಿದ್ದು, ಅದರ ಸದ್ಬಳಕೆಯಾಗಬೇಕು. ಯುವ ಜನತೆ ಕ್ರಿಕೆಟ್, ಫುಟ್‌ಬಾಲ್, ವಾಲಿಬಾಲ್‌ಗೆ ತೋರಿಸುವಷ್ಟೇ ಆಸಕ್ತಿ ದೇಸಿ ಕ್ರೀಡೆಯಲ್ಲೂ ವಹಿಸಬೇಕು ಎಂದರು.
ಶ್ರೀಗುರು ರೇವಣಸಿದ್ದೇಶ್ವರ ಕುರುಬ ಸಮಾಜದ ತಾಲೂಕು ಅಧ್ಯಕ್ಷ ಟಿ.ಎಸ್.ರಮೇಶ್ ಮಾತನಾಡಿ, ತರೀಕೆರೆಯಲ್ಲಿ ಪಾಳೇಗಾರರಿಂದ ಆರಂಭವಾದ ಕುಸ್ತಿ ಪಂದ್ಯಾವಳಿ ಎಲ್ಲ ಸಮುದಾಯಗಳ ಸಮನ್ವಯತೆಯಿಂದ ಸಾಂಗವಾಗಿ ನಡೆದುಕೊಂಡು ಬರುತ್ತಿದೆ. ಪಂದ್ಯಾವಳಿಗೆ ಹೊರ ರಾಜ್ಯಗಳಿಂದಲೂ ಕುಸ್ತಿಪಟುಗಳು ಆಗಮಿಸುತ್ತಾರೆ ಎಂದು ತಿಳಿಸಿದರು.
ಮಾಜಿ ಪೈಲ್ವಾನ್ ಎಳವಣ್ಣನವರ ಗೋವಿಂದಪ್ಪ ಅಖಾಡ ಪೂಜೆ ನೆರವೇರಿಸಿ ಮಾತನಾಡಿ, ದೇಸಿ ಕ್ರೀಡೆ ನಶಿಸದಂತೆ ಸರ್ಕಾರ ಯೋಜನೆ ರೂಪಿಸಬೇಕು. ಯುವಕರು ದುಶ್ಚಟ ಬಿಟ್ಟು ಕುಸ್ತಿ ಇತರ ಕ್ರೀಡೆಗಳತ್ತ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.
ಉದ್ಘಾಟನಾ ಪಂದ್ಯಾವಳಿಯಲ್ಲಿ ಸ್ಥಳೀಯ ಪೈಲ್ವಾನರು ಅಖಾಡದಲ್ಲಿ ಸೆಣೆಸಾಡಿ ಚಿನ್ನದ ಪದಕ, ಗೃಹ ಬಳಕೆ ವಸ್ತುಗಳು, ನಗದು ಸೇರಿ ವಿವಿಧ ಬಹುಮಾನ ಪಡೆದುಕೊಂಡರು.
ಪುರಸಭೆ ಉಪಾಧ್ಯಕ್ಷೆ ಎಂ.ಗಿರಿಜಾ, ಸದಸ್ಯರಾದ ಟಿ.ಜಿ.ಶಶಾಂಕ್, ಟಿ.ದಾದಾಪೀರ್, ಟಿ.ಜಿ.ಮಂಜುನಾಥ್, ಕೆ.ಎಸ್.ಚೇತನ್, ಆದಿಲ್ ಪಾಷಾ, ಟಿ.ಜಿ.ಲೋಕೇಶ್, ಶ್ರೀಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘದ ಅಧ್ಯಕ್ಷ ಸಿ.ಜಯಸ್ವಾಮಿ, ಗೌರವಾಧ್ಯಕ್ಷ ಟಿ.ಎಂ.ಮಂಜುನಾಥ, ಉಪಾಧ್ಯಕ್ಷ ಶಂಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net