

ಮೈಸೂರು: ಕರ್ಕಶ ಶಬ್ದ ಮಾಡುತ್ತಾ ಜನರಲ್ಲಿ ಕಿರಿಕಿರಿ ಉಂಟು ಮಾಡುತ್ತಿದ್ದ ವಾಹನಗಳ ಸೈಲೆನ್ಸರ್‌ಗಳ ಮೇಲೆ ನಗರ ಪೊಲೀಸರು ರೋಡ್ ರೋಲರ್ ಹತ್ತಿಸಿ ನಾಶಪಡಿಸಿದ್ದಾರೆ.
ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ನೇತೃತ್ವದಲ್ಲಿ ಸಿದ್ದಾರ್ಥನಗರ ಸಂಚಾರ ಠಾಣೆ ಆವರಣದಲ್ಲಿ ಬುಧವಾರ ಮರು ವಿನ್ಯಾಸಗೊಳಿಸಿದ್ದ ದೋಷಪೂರಿತ 217 ಸೈಲೆನ್ಸರ್‌ಗಳನ್ನು ರೋಡ್ ರೋಲರ್ ಬಳಸಿ ನಾಶಪಡಿಸುವ ಮೂಲಕ ಪುಂಡರಿಗೆ ಎಚ್ಚರಿಕೆ ನೀಡಲಾಯಿತು.
ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಸೀಮಾ ಲಾಟ್ಕರ್, ಆ.31 ರಿಂದ ಸೆ.3 ರವರೆಗೆ 4 ದಿನ ನಗರದಲ್ಲಿ ದೋಷಪೂರಿತ ಸೈಲೆನ್ಸರ್ ಅಳವಡಿಸಿಕೊಂಡು ಸಂಚರಿಸುತ್ತಿದ್ದ ದ್ವಿಚಕ್ರವಾಹನ ಸವಾರರ ವಿರುದ್ಧ ವಿಶೇಷ ತಪಾಸಣೆಯನ್ನು ಕೈಗೊಳ್ಳಲಾಗಿತ್ತು. ಈ ಅವಧಿಯಲ್ಲಿ ಒಟ್ಟು 94 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು, ದೋಷಪೂರಿತ ಸೈಲೆನ್ಸರ್‌ಗಳನ್ನು ಬದಲಾಯಿಸಿ, ಅವುಗಳನ್ನು ನಿಯಮಾನುಸಾರ ಕಾನೂನು ಕ್ರಮ ಕೈಗೊಂಡು ವಿಲೇವಾರಿ ಮಾಡಲಾಗಿದೆ. ಅಲ್ಲದೆ ದೋಷಪೂರಿತ ಸೈಲೆನ್ಸರ್ ಅಳವಡಿಸಿಕೊಂಡು ಸಂಚರಿಸುತ್ತಿದ್ದ ವಾಹನಗಳ ಸವಾರರ ವಿರುದ್ಧ ಐಎಂವಿ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
2024ನೇ ಸಾಲಿನಲ್ಲಿ ಒಟ್ಟು 217 ದೋಷಪೂರಿತ ಸೈಲೆನ್ಸರ್ ಅಳವಡಿಸಿಕೊಂಡು ಸಂಚರಿಸುತ್ತಿದ್ದ ದ್ವಿಚಕ್ರವಾಹನ ಸವಾರರ ವಿರುದ್ಧ ಐಎಂವಿ ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿಯೂ ಈ ವಿಶೇಷ ತಪಾಸಣೆ ಮುಂದುವರಿಯಲಿದ್ದು, ಸಂಚಾರ ನಿಯಮ ಉಲ್ಲಂಘಿಸುವವರು ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮೊದಲ ಬಾರಿ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಲಾಗುತ್ತದೆ. 2ನೇ ಬಾರಿ ಸಿಕ್ಕಿ ಬಿದ್ದರೆ ದುಪ್ಪಟ್ಟು ದಂಡ ವಿಧಿಸಲಾಗುತ್ತದೆ. ಪದೇ ಪದೆ ಸಂಚಾರ ನಿಯಮ ಉಲ್ಲಂಘಿಸಿದರೆ ಅಂತಹವರ ವಾಹನ ವಶಪಡಿಸಿಕೊಂಡು, ವಾಹನ ಸವಾರರ ಪರವಾನಗಿ ರದ್ದುಗೊಳಿಸಲು ಆರ್‌ಟಿಒಗೆ ಶಿಫಾರಸು ಮಾಡಲಾಗುವುದು ಎಂದು ಹೇಳಿದರು.
ಕರ್ಕಶ ಶಬ್ದ ಮಾಡುವ ವಾಹನಗಳ ಸಂಖ್ಯೆಯನ್ನು ಪೊಲೀಸ್ ಕಂಟ್ರೋಲ್ ರೂಮ್‌ಗೆ ದೂರು ನೀಡಿದರೆ ಅಂತಹ ಸಂಖ್ಯೆಗಳನ್ನು ಆಧರಿಸಿ ಅವರ ಮನೆಗಳಿಗೆ ಹೋಗಿ ತಪಾಸಣೆ ನಡೆಸಿ ದೋಷ ಕಂಡು ಬಂದರೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಡಿಸಿಪಿಗಳಾದ ಎಂ. ಮುತ್ತುರಾಜು, ಎಸ್. ಜಾಹ್ನವಿ, ಸಂಚಾರ ಉಪ ವಿಭಾಗದ ಎಸಿಪಿ ಎಚ್. ಪರಶುರಾಮಪ್ಪ, ವಿವಿಧ ಸಂಚಾರ ಠಾಣೆಗಳ ಇನ್ಸ್‌ಪೆಕ್ಟರ್‌ಗಳಾದ ಲವ, ಮಮತಾ, ರೇಖಾ ಬಾಯಿ, ಶ್ರೀಧರ್, ಶರತ್ ಇತರರು ಇದ್ದರು.