ದೇಶದ ಎಲ್ಲ ಭಾಷೆಗಳಿಗೂ ಸಂಸ್ಕೃತ ತಾಯಿ

12 NMG 02 (2)
ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠದಲ್ಲಿ ಕರ್ನಾಟಕ ರಾಜ್ಯ ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಂಘದ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಸಂಸ್ಕೃತ ಪಾಠಶಾಲಾ ಶಿಕ್ಷಕರ ಶೈಕ್ಷಣಿಕ ಸಮ್ಮೇಳನ ಮತ್ತು ವಾರ್ಷಿಕ ಮಹಾ ಅಧಿವೇಶನ ಕಾರ್ಯಕ್ರಮದಲ್ಲಿ ನಿವೃತ್ತ ಸಂಸ್ಕೃತ ಶಿಕ್ಷಕರನ್ನು ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸನ್ಮಾನಿಸಿದರು. ಶ್ರೀ ಪ್ರಸನ್ನನಾಥ ಸ್ವಾಮೀಜಿ, ಡಾ.ಎಸ್.ಅಹಲ್ಯಾ ಇದ್ದರು.
Published on

ನಾಗಮಂಗಲ: ದೇಶದ ನಾಗರಿಕತೆಯ ಎಲ್ಲ ಭಾಷೆಗಳಿಗೂ ಸಂಸ್ಕೃತ ತಾಯಿಭಾಷೆಯಾಗಿದ್ದು, ಹಿಂದಿನಿಂದಲೂ ಭದ್ರಬುನಾದಿ ಹಾಕಿಕೊಂಡು ಬಂದಿದ್ದರೆ ಹಿಂದಿ ಭಾಷೆ ಬದಲು ಸಂಸ್ಕೃತ ರಾಷ್ಟ್ರ ಭಾಷೆಯಾಗುತ್ತಿತ್ತು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.


ತಾಲೂಕಿನ ಆದಿಚುಂಚನಗಿರಿ ಮಠದ ಆದಿಶಕ್ತಿ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ಸಂಸ್ಕೃತ ಪಾಠಶಾಲಾ ಶಿಕ್ಷಕರ ಸಂಘದ ವತಿಯಿಂದ ರಾಜ್ಯಮಟ್ಟದ ಸಂಸ್ಕೃತ ಪಾಠಶಾಲಾ ಶಿಕ್ಷಕರ ಶೈಕ್ಷಣಿಕ ಸಮ್ಮೇಳನ ಮತ್ತು ವಾರ್ಷಿಕ ಮಹಾ ಅಧಿವೇಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ಸಂಸ್ಕೃತ ಭಾಷೆಗೆ ಈ ಹಿಂದಿನಿಂದಲೂ ಭದ್ರಬುನಾದಿ ಹಾಕಿಕೊಂಡು ಬಂದಿದ್ದರೆ ಪ್ರಸ್ತುತದಲ್ಲಿ ಹಿಂದಿ ಭಾಷೆ ಬದಲು ಸಂಸ್ಕೃತವೇ ನಮ್ಮ ರಾಷ್ಟ್ರಭಾಷೆಯಾಗಿ ಉಳಿದಿರುತ್ತಿತ್ತು. ಆದರೂ ಇಂದು ಸಂಸ್ಕೃತ ಭಾಷೆ ಪ್ರಪಂಚಕ್ಕೆ ವ್ಯಾಪಿಸಿದೆ. ಈ ಅತ್ಯುತ್ತಮ ಭಾಷೆಯನ್ನು ಶಿಕ್ಷಕರು ಜ್ಞಾನ ಪರಂಪರೆಯೊಂದಿಗೆ ಎಲ್ಲೆಡೆ ಹಂಚಬೇಕು. ಸಂಸ್ಕೃತದ ಬಗ್ಗೆ ನಮ್ಮಲ್ಲಿರುವ ಕೀಳಿರಿಮೆಯನ್ನು ನಾವೆಲ್ಲರೂ ಬಿಡಬೇಕಿದೆ. ಸಂಸ್ಕೃತ ಭಾಷೆಯ ಜ್ಞಾನವನ್ನು ಹಿಂದು ರಾಷ್ಟ್ರದಲ್ಲಿರುವ ತಿಳಿಯುವುದು ಅವಶ್ಯಕ ಎಂದರು.


ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಅಹಲ್ಯಾ ಮಾತನಾಡಿ, ಸಂಸ್ಕೃತ ವಿಶ್ವವಿದ್ಯಾಲಯದ ದೊಡ್ಡ ಶಕ್ತಿ ಸಂಸ್ಕೃತ ಪಾಠಶಾಲೆಯ ಶಿಕ್ಷಕರು ಹಾಗೂ ಮಠಮಾನ್ಯಗಳ ಪೀಠಾಧಿಪತಿಗಳು. ಈ ಇಬ್ಬರು ಮಹನೀಯರು ಹಿಂದಿನಿಂದ ಸಂಸ್ಕೃತವನ್ನು ಜೀವಂತವಾಗಿಡದಿದ್ದರೆ ಇಂದು ಸಂಸ್ಕೃತದ ಜೀವಂತಿಕೆ ಕಷ್ಟಕರವಾಗುತ್ತಿತ್ತು. ಸಂಸ್ಕೃತ ಭಾಷೆಯ ಜೀವಂತಿಕೆ ಮತ್ತು ಉತ್ತಮ ಸಮಾಜ ನಿರ್ಮಾಣ ಮಾಡಲು ಮಠಗಳ ಕೊಡುಗೆ ಅಪಾರವಾದುದ್ದಾಗಿದೆ. ಸಂಸ್ಕೃತ ಭಾಷೆಗೆ ಬೆನ್ನೆಲುಬಾಗಿರುವ ನಿಮ್ಮಗಳ ಸಹಕಾರದಿಂದ ಸಂಸ್ಕೃತ ವಿಶ್ವವಿದ್ಯಾಲಯ ಒಳ್ಳೆಯ ರೀತಿ ನಡೆದುಕೊಂಡು ಹೋಗುತ್ತಿದೆ ಎಂದರು.


ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರ ಜಿ.ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು. ಸಂಸ್ಕೃತ ಭಾಷೆಯ ನಿವೃತ್ತ ಶಿಕ್ಷಕರು ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂಧಿಸಲಾಯಿತು. ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲ ಸಚಿವ ವಿ.ಗಿರೀಶ್‌ಚಂದ್ರ, ಕರ್ನಾಟಕ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯದ ಪ್ರೊ.ಸಿ.ಪಾಲಯ್ಯ, ಅಂಕಣಕಾರ ಆದರ್ಶ ಗೋಖಲೆ, ಕರ್ನಾಟಕ ರಾಜ್ಯ ಸಂಸ್ಕೃತ ಪಾಠಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಗಂಗಾಧರಯ್ಯ, ಪ್ರಧಾನ ಕಾರ್ಯದರ್ಶಿ ಪರಮಶಿವಯ್ಯ, ಸಂಘದ ಪದಾಧಿಕಾರಿಗಳಾದ ಜಗದೀಶ್, ವೆಂಕಟಪ್ಪ, ಮಲ್ಲೇಶಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net