ದಶಕಗಳಾದರೂ ಲ್ಯಾನ್ಸ್‌ಡೌನ್‌ಗೆ ನವೀಕರಣ ಭಾಗ್ಯವಿಲ್ಲ

12
2012ರಲ್ಲಿ ಸಂಭವಿಸಿದ ಲ್ಯಾನ್ಸ್‌ಡೌನ್ ಕಟ್ಟಡ ಕುಸಿದ ದುರ್ಘಟನೆಯ ದೃಶ್ಯ. (ಚಿತ್ರ: ಕೆ.ಎಚ್.ಚಂದ್ರು)
Published on

ಮೈಸೂರು: ನಗರದ ಹೃದಯ ಭಾಗದಲ್ಲಿರುವ ಪುರಾತನ ಲ್ಯಾನ್ಸ್‌ಡೌನ್ ಕಟ್ಟಡದ ಛಾವಣಿ ಕುಸಿದು ಬಿದ್ದ ದುರ್ಘಟನೆ ಸಂಭವಿಸಿ ಗುರುವಾರಕ್ಕೆ 10 ವರ್ಷವಾಗಿದೆ. ಕಟ್ಟಡ ನವೀಕರಣ ಮಾತ್ರ ಇನ್ನೂ ಬದಲಾಗಿಲ್ಲ.

2012ರ ಆಗಸ್ಟ್ 25ರಂದು ಸಂಜೆ 6.10ರ ಸುಮಾರಿಗೆ ಈ ಅವಘಡ ನಡೆದಿತ್ತು. ಕಟ್ಟಡದ ನೆಲ ಅಂತಸ್ತಿನಲ್ಲಿದ್ದ ಲತಾ ಎಂಟರ್‌ಪ್ರೈಸಸ್ ಮಳಿಗೆಯಲ್ಲಿ ಎರಡಂತಸ್ತಿನ ಛಾವಣಿ ಹಠಾತ್ ಕುಸಿದು ಬಿದ್ದಿದ್ದರಿಂದ ಒಳಗೆ ಕೆಲಸ ಮಾಡುತ್ತಿದ್ದ ಮೂವರು ಡಿಟಿಪಿ ಆಪರೇಟರ್‌ಗಳು ಹಾಗೂ ಒಬ್ಬ ಗ್ರಾಹಕ ಸೇರಿ ನಾಲ್ವರು ಅವಶೇಷಗಳಡಿ ಸಿಲುಕಿ ಸಾವಿಗೀಡಾಗಿದ್ದರು.

ಛಾವಣಿ ಕುಸಿದು ಬೀಳುತ್ತಿದ್ದಂತೆ ಆಸುಪಾಸಿನ ಮಳಿಗೆಗಳಲ್ಲಿದ್ದ ಜನ ದಿಕ್ಕಾಪಾಲಾಗಿ ಓಡಿಹೋಗಿದ್ದರು. ಈ ಕಟ್ಟಡ ಶತಮಾನದಷ್ಟು ಹಳೆಯದಾಗಿದ್ದು ತೀರಾ ಶಿಥಿಲಾವಸ್ಥೆ ತಲುಪಿತ್ತು. ಛಾವಣಿಯಲ್ಲಿ ಮಳೆ ನೀರು ಸಂಗ್ರಹವಾಗಿ ಕೆಳ ಅಂತಸ್ತಿಗೆ ಸೋರಿಕೆಯಾಗುತ್ತಿದ್ದರೂ ಎಚ್ಚೆತ್ತುಕೊಳ್ಳದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿತ್ತು ಎಂದು ಇಲ್ಲಿಯ ವ್ಯಾಪಾರಸ್ಥರು ಈಗಲೂ ನೆನಪಿಸಿಕೊಳ್ಳುತ್ತಾರೆ.

ಈ ಘಟನೆ ಬಳಿಕ ಕಟ್ಟಡದಲ್ಲಿದ್ದ ಅಂಗಡಿ ಮಳಿಗೆಗಳನ್ನು ತೆರವುಗೊಳಿಸಲಾಯಿತು. ಇದರ ಎದುರು ತಾತ್ಕಾಲಿಕವಾಗಿ ಮಳಿಗೆ ನಿರ್ಮಿಸಿಕೊಡಲಾಗಿದೆ. ಆದರೆ, ಯಾವಾಗ ಹೊಸ ಕಟ್ಟಡ ನಿರ್ಮಾಣವಾಗುತ್ತದೆ ಎಂಬ ನಿರೀಕ್ಷೆಯಲ್ಲೇ ಇಲ್ಲಿಯ ವ್ಯಾಪಾರಿಗಳು, ಬಾಡಿಗೆದಾರರು ಕಾಲ ಕಳೆಯುತ್ತಿದ್ದಾರೆ.

ಪಾರಂಪರಿಕ ನಗರಿ ಮೈಸೂರಿನ ಹೆಗ್ಗುರುತಾದ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‌ಡೌನ್ ಕಟ್ಟಡಗಳನ್ನು ಕೆಡವಿ, ಅದೇ ಸ್ಥಳದಲ್ಲಿ ಮೂಲ ಪಾರಂಪರಿಕ ವಿನ್ಯಾಸ ಮತ್ತು ಶೈಲಿಯಲ್ಲೇ ಹೊಸ ಕಟ್ಟಡಗಳ ನಿರ್ಮಿಸಲು ಜಿಲ್ಲಾ ಪಾರಂಪರಿಕ ಸಮಿತಿ ಇತ್ತೀಚೆಗೆ ತೀರ್ಮಾನಿಸಿದೆ. ಈ ನಿರ್ಣಯವನ್ನು ಸರ್ಕಾರ ಮತ್ತು ನ್ಯಾಯಾಲಯಕ್ಕೆ ಕಳುಹಿಸಿಕೊಡಲಾಗಿದೆ. ಆದರೆ, ಎರಡು ಕಟ್ಟಡವನ್ನು ಉಳಿಸಿಕೊಳ್ಳಬೇಕೋ, ನೆಲಸಮಗೊಳಿಸಬೇಕೋ ಎಂಬುದರ ಕುರಿತು ಇನ್ನೂ ನಿರ್ಧಾರ ಹೊರಬಿದ್ದಿಲ್ಲ. ಈ ನಡುವೆ, ದಶಕದಿಂದ ಲ್ಯಾನ್ಸ್‌ಡೌನ್ ಕಟ್ಟಡ ಪಾಳುಬಿದ್ದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net