ದಶಕಗಳಲ್ಲೇ ದಾಖಲೆ ಮಳೆ, ವಾಡಿಕೆಗಿಂತ 218 ಮಿ.ಮೀ ವರ್ಷಧಾರೆ, ಕೋಡಿ ಹರಿಯುತ್ತಿವೆ ಕೆರೆಗಳು

20 dpt 5 mleyinada brgenhalli rvikumar ragi bele sasha vagiruvudu
Published on

ಬೆಂಗಳೂರು ಗ್ರಾಮಾಂತರ:  15 ದಿನಗಳಿಂದ ಜಿಲ್ಲೆಯಾದ್ಯಂತ ಎಡೆಬಿಡದೆ ಮಳೆ ಸುರಿಯುತ್ತಿದ್ದು, ದಶಕಗಳಲ್ಲೇ ನವೆಂಬರ್‌ನಲ್ಲಿ ಸುರಿದ ಮಳೆ ದಾಖಲೆ ಮಳೆ ಎನಿಸಿದೆ. ನವೆಂಬರ್‌ನಲ್ಲಿ ಸಾಮಾನ್ಯವಾಗಿ ಮಳೆ ಇರುವುದಿಲ್ಲ, ಜಿಲ್ಲೆಯಲ್ಲಿ ವಾಡಿಕೆ ಮಳೆ 42 ಮಿಮೀ. ಆದರೆ ಈ ಬಾರಿ 218 ಮಿಮೀ ಹೆಚ್ಚುವರಿ ಮಳೆ ಸುರಿದಿದೆ.

ಜಿಲ್ಲೆಯ ನಾಲ್ಕೂ ತಾಲೂಕುಗಳ ಪೈಕಿ ಹೊಸಕೋಟೆಯಲ್ಲಿ 235 ಮಿಮೀ, ದೇವನಹಳ್ಳಿಯಲ್ಲಿ 222 ಮಿಮೀ, ದೊಡ್ಡಬಳ್ಳಾಪುರದಲ್ಲಿ 219 ಮಿಮೀ ಹಾಗೂ ನೆಲಮಂಗಲದಲ್ಲಿ 196 ಮಿಮೀ ಮಳೆಯಾಗಿದೆ.

ಮಳೆ ಆವಾಂತರ: ಒಂದೆಡೆ ಅಕಾಲಿಕ ಮಳೆಯಿಂದ ಜಿಲ್ಲೆಯ ಹಲವು ಕಡೆಗಳಲ್ಲಿ ಮನೆಗೋಡೆಗಳು ಕುಸಿದು ಗ್ರಾಮೀಣ ಜನರು ಕಂಗಾಲಾಗಿದ್ದಾರೆ, ಐತಿಹಾಸಿಕ ಟಿಪ್ಪುಕೋಟೆ ಒಂದು ಪಾರ್ಶ್ವ ಕುಸಿದುಬಿದ್ದಿದೆ, ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣಗೊಂಡಿವೆ. ನವೆಂಬರ್ ಅಂತ್ಯಕ್ಕೆ ಕೊಯ್ಲಿಗೆ ಬರಬೇಕಿದ್ದ ರಾಗಿ ಜಮೀನುಗಳಲ್ಲಿ ಮಂಡಿಯುದ್ದ ನೀರು ನಿಂತಿದೆ. ಮಳೆ ಹೊಡೆತಕ್ಕೆ ಬೆಳೆ ನೆಲಕಚ್ಚಿದ್ದು, ಜಮೀನಿನಲ್ಲೇ ಮೊಳಕೆಯೊಡೆಯುತ್ತಿವೆ. ಹೊಸಕೋಟೆಯಲ್ಲಿ ಮಳೆ ಅನಾಹುತಕ್ಕೆ ಇಬ್ಬರು ಪ್ರಾಣಬಿಟ್ಟಿದ್ದಾರೆ. ಹಳೇ ಮನೆಗಳ ಗೋಡೆ ಯಾವ ಕ್ಷಣದಲ್ಲಾದರೂ ಕುಸಿಯಬಹುದೆಂಬ ಭಯಕ್ಕೆ ಅನೇಕರು ಮನೆ ತೊರೆದು ಸಂಬಂಧಿಕರ ಮನೆ ಆಶ್ರಯಿಸಿದ್ದಾರೆ. ಇದರ ನಡುವೆ ಇಂಥ ಸಂತ್ರಸ್ತರಿಗೆ ಗಂಜಿಕೇಂದ್ರ ಆರಂಭಿಸುವ ಸಿದ್ಧತೆ ನಡೆದಿದ್ದು, ಮಳೆ ಹೀಗೆ ಮುಂದುವರಿದರೆ ಮತ್ತಷ್ಟು ಅನಾಹುತಗಳಿಗೆ ಕಾರಣವಾಗಲಿದೆ ಎಂಬ ಭೀತಿ ಸೃಷ್ಟಿಯಾಗಿದೆ.

ಭಾಗಿನ ಅರ್ಪಿಸುವ ಹರ್ಷ: ದಶಕಗಳಿಂದ ಬೊಗಸೆಯಷ್ಟು ನೀರನ್ನೇ ಕಾಣದ ಅನೇಕ ಕೆರೆಗಳಲ್ಲಿ ಜಲರಾಶಿ ತುಂಬಿ ಕೋಡಿ ಹರಿಯುತ್ತಿವೆ, ಜನಪ್ರತಿನಿಧಿಗಳು, ಗ್ರಾಮಗಳ ಮುಖಂಡರು ಭಾಗಿನ ಅರ್ಪಿಸಿ ಧನ್ಯತಾಭಾವ ಪ್ರದರ್ಶಿಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಏತನ್ಮಧ್ಯೆ ಕೆರೆಯಂಚಿನ ಜಮೀನುಗಳಿಗೆ ನೀರು ನುಗ್ಗಿ ತರಕಾರಿ, ಹಣ್ಣು ಮತ್ತಿತರ ಬೆಳೆ ನೀರಿಗೆ ಕೊಚ್ಚಿಹೋಗಿವೆ.

ಕೂಲಿ ಕಾರ್ಮಿಕರ ಪರದಾಟ: ಪ್ರಮುಖವಾಗಿ ರಾಗಿ ಕೊಯ್ಲಿನ ಸಮಯ, ಈ ವೇಳೆ ಗ್ರಾಮೀಣ ಭಾಗದ ಕೂಲಿಕಾರ್ಮಿಕರಿಗೆ ಪುರುಸೊತ್ತು ಇಲ್ಲದಂಥ ಕೆಲಸವಿರುತ್ತಿತ್ತು. ಆದರೆ ಅಕಾಲಿಕ ಮಳೆ ಕೂಲಿಕಾರ್ಮಿಕರ ದುಡಿಮೆಯನ್ನು ಕಸಿದುಕೊಂಡಿದೆ. ಜಮೀನುಗಳಲ್ಲಿ ಕೂಲಿ ಕೆಲಸವಿಲ್ಲದೆ ಬರಿಗೈ ಆಗುವಂತಾಗಿದೆ. ಒಂದೂವರೆ ವರ್ಷದಿಂದ ಕರೊನಾ ಕಾರಣಕ್ಕೆ ಕಂಗೆಟ್ಟಿದ ಕೂಲಿಕಾರ್ಮಿಕರಿಗೆ ಅಕಾಲಿಕ ಮಳೆ ಗಾಯದ ಮೇಲೆ ಬರೆ ಎಳೆದಿದೆ.

ಸಾಮಾನ್ಯವಾಗಿ ನವೆಂಬರ್ ತಿಂಗಳು ಮಳೆಗಾಲವಲ್ಲ. ಜಿಲ್ಲೆಯಲ್ಲಿ ವಾಡಿಕೆ ಮಳೆ 42 ಮಿಮೀ ಇರುತ್ತಿತ್ತು. ಆದರೆ ಹವಾಮಾನ ವೈಪರೀತ್ಯದಿಂದ ಸುರಿಯುತ್ತಿರುವ ಅಕಾಲಿಕ ಮಳೆಯಾಗಿದ್ದು, ನವೆಂಬರ್ ಮೊದಲ ವಾರದಿಂದ ಇದುವರೆಗೆ ಜಿಲ್ಲೆಯಲ್ಲಿ 218 ಮಿಮೀ ಹೆಚ್ಚವರಿ ಮಳೆ ಸುರಿದಿದೆ. ಜಗದೀಶ್, ತಾಂತ್ರಿಕ ಅಧಿಕಾರಿ ಬೆಂ.ಗ್ರಾಮಾಂತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net