ದಶಕಗಳ ಮಾದಿಗರ ಹೋರಾಟಕ್ಕೆ ಯಶಸ್ಸು ಸಿಗುವ ಕಾಲ ಸನ್ನಿಹಿತ: ಎ.ನಾರಾಯಣ ಸ್ವಾಮಿ.

ದಶಕಗಳ ಮಾದಿಗರ ಹೋರಾಟಕ್ಕೆ ಯಶಸ್ಸು ಸಿಗುವ ಕಾಲ ಸನ್ನಿಹಿತ: ಎ.ನಾರಾಯಣ ಸ್ವಾಮಿ.
Published on

ಹಾಸನ: ದೇಶಾದ್ಯಂತ ಒಳಮೀಸಲಾತಿ ಅನುಷ್ಠಾನ ವಿಚಾರವಾಗಿ ಜನವರಿ 17ರಿಂದ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ಆರಂಭವಾಗಲಿದ್ದು, ದಶಕಗಳ ಮಾದಿಗರ ಹೋರಾಟಕ್ಕೆ ಯಶಸ್ಸು ಸಿಗುವ ಕಾಲ ಸನ್ನಿಹಿತವಾಗಿದೆ ಎಂದು ಕೇಂದ್ರ ಸಾಮಾಜಿಕ ಮತ್ತು ನ್ಯಾಯ ಸಬಲೀಕರಣ ಇಲಾಖೆ ರಾಜ್ಯ ಖಾತೆ ಸಚಿವ ಎ.ನಾರಾಯಣ ಸ್ವಾಮಿ ಹೇಳಿದರು.
ನಗರದ ಪಾಲಿಕಾ ಹೋಟೆಲ್ ಸಭಾಂಗಣದಲ್ಲಿ ಮಾದಿಗ ದಂಡೋರ ಸಮಿತಿ ವತಿಯಿಂದ ಶನಿವಾರ ಏರ್ಪಡಿಸಿದ್ದ ಮಾದಿಗ ಮುನ್ನಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಇತ್ತೀಚೆಗೆ ನಡೆದ ತೆಲಂಗಾಣ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಾವು ಒಳಮೀಸಲಾತಿ ಪರವಾಗಿ ಇರುವುದಾಗಿ ಘೋಷಿಸಿದ್ದರು. ತಳವರ್ಗದವರ ಪರವಾಗಿ ಬಹಿರಂಗವಾಗಿ ತಮ್ಮ ನಿಲುವು ಪ್ರಕಟಿಸಿದ ದೇಶದ ಏಕೈಕ ಪ್ರಧಾನಿ ನರೇಂದ್ರ ಮೋದಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಒಳಮೀಸಲಾತಿ ಹೆಚ್ಚಿಸಿದ್ದೆ, ಬಿಜೆಪಿ ಸೋಲಿಗೆ ಕಾರಣ ಎಂಬ ಚರ್ಚೆಗಳು ನಡೆದವು. ಆದರೆ, ಆರ್‌ಎಸ್‌ಎಸ್ ಈ ಆರೋಪವನ್ನು ಅಲ್ಲಗಳೆದಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಖಡಕ್ ಸಂದೇಶ ನೀಡಿರುವ ಸಂಘ ಪರಿವಾರದ ನಾಯಕರು ಚುನಾವಣೆ ಕಾರಣಕ್ಕಾಗಿ ಒಳಮೀಸಲಾತಿ ವಿಚಾರದಲ್ಲಿ ಹಿಂಜರಿಯುವುದು ಬೇಡ ಎಂದಿದೆ. ಮುಂದಿನ ಎರಡು ತಿಂಗಳಲ್ಲಿ ಮಾದಿಗರಿಗೆ ನ್ಯಾಯ ಸಿಕ್ಕೇ ಸಿಗುತ್ತದೆ. ಕಾಂಗ್ರೆಸ್ ಮಾಡಿದ ತಪ್ಪುಗಳನ್ನು ಬಿಜೆಪಿ ಯಾವ ಕಾರಣಕ್ಕೂ ಮಾಡುವುದಿಲ್ಲ ಎಂದು ಪ್ರತಿಪಾದಿಸಿದರು
1965ರಲ್ಲಿ ಮಾದಿಗ ಸಮುದಾಯದ 22 ಶಾಸಕರು ರಾಜ್ಯದಲ್ಲಿದ್ದರು. ಆದರೆ ಈಗ ಶಾಸಕರ ಸಂಖ್ಯೆ 6ಕ್ಕೆ ಇಳಿದಿದೆ. ಮಾದಿಗರಿಗೆ ಈ ರೀತಿ ಅನ್ಯಾಯವಾಗಲು ಪ್ರಮುಖ ಕಾರಣವೇ ಕಾಂಗ್ರೆಸ್ ಸರ್ಕಾರ. ಸಮುದಾಯದಲ್ಲಿ ಬಲಿಷ್ಠ ನಾಯಕತ್ವ ಇಲ್ಲದಿರುವುದೇ ಸಮಸ್ಯೆಗೆ ಮೂಲ ಕಾರಣ ಎಂದರು.
ಜನಸಂಖ್ಯೆಯಲ್ಲಿ ಪ್ರಬಲವಾಗಿರುವ ಮಾದಿಗ ಸಮುದಾಯಕ್ಕೆ ಸಾಮಾಜಿಕ, ಶೈಕ್ಷಣಿಕ ಹಾಗು ಆರ್ಥಿಕ ಸವಲತ್ತು ಸಿಗಬೇಕು. ಆ ಕಾರಣಕ್ಕಾಗಿಯೇ ಉತ್ತರ ಕರ್ನಾಟಕದ ಮಾದಿಗರು ಬುತ್ತಿ ಹಿಡಿದುಕೊಂಡು ಬೆಂಗಳೂರು, ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ಹೋರಾಟ ಮಾಡಿದ್ದಾರೆ. ಡಾ. ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟ ಮೀಸಲಾತಿ ಬಲಾಢ್ಯರ ಪಾಲಾಗುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ದೇಶದ ಸಂಪತ್ತು ಹಂಚಿಕೆ ಆಗ್ಬೇಕು ಎಂಬುದೇ ನಮ್ಮ ಬೇಡಿಕೆಯಾಗಿದೆ ಎಂದರು.
ಮಾದಿಗ ದಂಡೋರ ಸಮಿತಿ ಸಂಸ್ಥಾಪಕ ಅಧ್ಯಕ್ಷ ಎಂ.ಶಂಕರಪ್ಪ ಅವರು ಮಾತನಾಡಿ, ಬಸವರಾಜ ಬೊಮ್ಮಾಯಿ ಅವರು ಒಳಮೀಸಲಾತಿ ಹೆಚ್ಚಿಸಿ ಪರಿಶಿಷ್ಟ ಜಾತಿಗೆ ಶೇ. 15 ರಿಂದ 15 ಹಾಗು ಪರಿಶಿಷ್ಟ ಪಂಗಡಕ್ಕೆ ಶೇ. 3 ರಿಂದ 7 ಮೀಸಲಾತಿ ಹೆಚ್ಚಿಸಿ ಆದೇಶಿಸಿದರು. ಆದರೆ ಇದರ ಅನುಷ್ಠಾನ ಸಾಧ್ಯವಿಲ್ಲವೆಂದು ಕಾಂಗ್ರೆಸ್ ನಾಯಕರು ಎಲ್ಲಾ ಕಡೆ ಸುಳ್ಳು ಪ್ರಚಾರ ಮಾಡಿದರು. ಮಾದಿಗರು ಸಹ ಕಾಂಗ್ರೆಸ್‌ನ ಹೇಳಿಕೆಯೇ ಸರಿಯೆಂದು ಬಿಜೆಪಿ ವಿರುದ್ಧ ಮತಚಲಾಯಿಸಿದರು. ಹಿಂದಿನ ಬಿಜೆಪಿ ಸರ್ಕಾರ ಹೇಳಿದ್ದು, ಸರಿಯೋ ತಪ್ಪೋ ಎಂಬ ವಿಮರ್ಶೆಯನ್ನು ಯಾರೂ ಮಾಡಲಿಲ್ಲ. ಮುಂದಿನ ದಿನಗಳಲ್ಲಿ ಆ ರೀತಿಯ ತಪ್ಪುಗಳಾಗುವುದು ಬೇಡವೆಂದರು.
ಮುಖಂಡ ಡಾ. ಶಿವಪ್ರಸಾದ್ ಅವರು ಮಾತನಾಡಿ, ಜನಗಣತಿ ಎಂಬುದು ರಾಜಕೀಯ ಪಕ್ಷಗಳಿಗೆ ಹಬ್ಬ ಮಾಡಿದಂತೆ ಖುಷಿ ಕೊಡುತ್ತದೆ. 2000ರ ಬಳಿಕ ಆಂಧ್ರ ಪ್ರದೇಶದಲ್ಲಿ ಎದ್ದ ಒಳಮೀಸಲಾತಿ ಕೂಗು ಕರ್ನಾಟಕದಲ್ಲೂ ಕೇಳಿಬಂತು. 2004ರಲ್ಲಿ ಮುಖ್ಯಮಂತ್ರಿ ಆಗಿದ್ದ ಎಸ್.ಎಂ. ಕೃಷ್ಣ ಅವರು ಪರಿಶಿಷ್ಟರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಅಧ್ಯಯನಕ್ಕೆ ಆಯೋಗ ರಚಿಸಿದರು. ಆದರೆ ವರದಿ ತಯಾರಿಸಲು ಅನುದಾನ ಕೊಡಲಿಲ್ಲ. ನಂತರ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರ ಈ ಕಾರ್ಯಕ್ಕಾಗಿ 11 ಕೋಟಿ ರೂ. ನೀಡಿತು. ಆಗ ತಯಾರಾದ ವರದಿಯೇ ಸದಾಶಿವ ಆಯೋಗ. ನಂತರ ಸದಾನಂದ ಗೌಡರು ಸಿಎಂ ಆಗಿದ್ದ ವೇಳೆ ವರದಿಯನ್ನು ಒಪ್ಪಿದರು. ಅಷ್ಟರಲ್ಲಿ ಅವರ ಆಡಳಿತಾವಧಿ ಮುಕ್ತಾಯಗೊಂಡು ನಂತರ ಬಂದ ಯಾವ ಸರ್ಕಾರಗಳು ಅದರ ಕಡೆಗೆ ಗಮನಹರಿಸಲಿಲ್ಲ. ನಂತರ ಬಸವರಾಜ ಬೊಮ್ಮಾಯಿ ಅವರು ವರದಿ ಅಂಗಿಕರಿಸಿ ಮೀಸಲಾತಿಯನ್ನು ಶೇ. 15 ರಿಂದ 17ಕ್ಕೆ ಹೆಚ್ಚಿಸಿ ಒಳಮಿಸಲಾತಿ ಸಹ ಹೆಚ್ಚಿಸಿದರು. ಈ ವಿಚಾರದಲ್ಲಿ ಕಾಂಗ್ರೆಸ್‌ನ ಕೊಡುಗೆ ಶೂನ್ಯವಾಗಿದೆ. ಮಾದಿಗ ಸಮುದಾಯ ಇನ್ನಾದರು ಎಚ್ಚೆತ್ತು ಹೆಜ್ಜೆಯಿಡಬೇಕಿದೆ ಎಂದು ಕರೆ ನೀಡಿದರು.
ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಬಾಣಾವರ ವೆಂಕಟೇಶ್, ದೀಪಕ್ ದೊಡ್ಡಯ್ಯ, ಚಂದ್ರು, ವತ್ಸಲಾ ಶೇಖರಪ್ಪ, ನಾಗೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net