

ಬಳ್ಳಾರಿ : ಕಳೆದ ಒಂದು ದಶಕಕ್ಕೂ ಹೆಚ್ಚು ವರ್ಷಗಳಿಂದ ಜಿಲ್ಲೆಯಿಂದ ದೂರವಿದ್ದ ಮಾಜಿ ಸಚಿವ, ಗಂಗಾವತಿ ಹಾಲಿ ಶಾಸಕ ಜನಾರ್ದನರೆಡ್ಡಿ ಅವರಿಗೆ ಗಣಿನಾಡು ಬಳ್ಳಾರಿ ಪ್ರವೇಶಿಸಲು ಹಾಗೂ ಉಳಿದುಕೊಳ್ಳಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ರಾಜ್ಯದ ಗಡಿ ಒತ್ತುವರಿ, ಬೇಲ್ ಡೀಲ್ ಪ್ರಕರಣ, ಗಡಿ ಗುರುತು ಧ್ವಂಸ, ಅಕ್ರಮ ಗಣಿಗಾರಿಕೆ, ಅರಣ್ಯ ನಾಶ ಸೇರಿದಂತೆ ಸಾಲು ಸಾಲು ಪ್ರಕರಣಗಳು ಸಂಬಂಧಿಸಿದಂತೆ ಸಾಕ್ಷೃ ನಾಶ ಹಿನ್ನೆಲೆ ಗಣಿನಾಡು ಬಳ್ಳಾರಿ ಅಲ್ಲದೆ ನೆರೆಯ ಆಂಧ್ರಪ್ರದೇಶದ ಅನಂತಪುರ, ಕರ್ನೂಲು ಜಿಲ್ಲೆಗಳ ಪ್ರವೇಶಕ್ಕೆ ಹಲವು ವರ್ಷಗಳು ಕೋರ್ಟ್ ನಿರ್ಬಂಧ ಹೇರಿತ್ತು. ಕೆಲ ವರ್ಷಗಳಿಂದ ಜಿಲ್ಲೆಗೆ ಭೇಟಿ ನೀಡಲು ತುದಿಗಾಲಿನಲ್ಲಿ ನಿಂತಿದ್ದ ಜನಾರ್ದನರೆಡ್ಡಿಗೆ ಕೋರ್ಟ್ ಅನುಮತಿ ನೀಡಿದ್ದರಿಂದ ಕುಟುಂಬ, ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ನಾಲ್ಕೈದು ಬಾರಿ ಭೇಟಿ : ಅಕ್ರಮ ಗಣಿಗಾರಿಕೆಯಲ್ಲಿ ಮುಖ್ಯ ಆರೋಪಿಯಾಗಿದ್ದ ಜನಾರ್ದನರೆಡ್ಡಿ ಅವರನ್ನು 2011ರ ಸೆ.5 ರಂದು ಸಿಬಿಐ ಅಧಿಕಾರಿಗಳು ಬಂಧಿಸಿ, ನೆರೆಯ ಆಂಧ್ರದ ಚರ್ಲಪಲ್ಲಿ ಜೈಲಿನಲ್ಲಿ ಇಟ್ಟಿದ್ದರು. ಬಳಿಕ ಆಂಧ್ರದಿಂದ ಬೆಂಗಳೂರಿನ ಪರಪ್ಪನ ಆಗ್ರಹಾರಕ್ಕೆ ಸ್ಥಳಾಂತರಗೊಳಿಸಲಾಯಿತು. 2015ರಲ್ಲಿ ಜಾಮೀನು ಪಡೆದರೂ ಕೂಡ ಬಳ್ಳಾರಿ ಭೇಟಿಗೆ ಅವಕಾಶ ನೀಡಲಿಲ್ಲ. ನಂತರ 2016ರಲ್ಲಿ ಜಿಲ್ಲೆಗೆ ಪ್ರವೇಶಿಸಲು ಹದಿನೈದು ದಿನ ಕೋರ್ಟ್ ಅನುಮತಿ ಪಡೆದು ಪುತ್ರಿ ಬ್ರಾಹ್ಮಿಣಿ ಮದುವೆಯನ್ನು ಕೋಟ್ಯಾಂತರ ರೂ. ವೆಚ್ಚದಲ್ಲಿ ಅದ್ಧೂರಿಯಾಗಿ ನೆರವೇರಿಸಿದರು. ಪುತ್ರಿಯ ಎರಡನೇ ಹೆರಿಗೆ ವೇಳೆಯಲ್ಲಿ ಹಾಗೂ ಮೊಮ್ಮಗಳ ನಾಮಕರಣ ಸೇರಿದಂತೆ ನಾಲ್ಕೈದು ಬಾರಿ ಭೇಟಿ ನೀಡಿದ್ದರು. ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪತ್ನಿ ಅರುಣಾಲಕ್ಷ್ಮೀ ಕೆಆರ್‌ಪಿಪಿ ಪಕ್ಷದಿಂದ ನಗರಕ್ಕೆ ಸ್ಪರ್ಧಿಸಿದ್ದ ವೇಳೆ ರೆಡ್ಡಿಗೆ ಪ್ರಚಾರಕ್ಕೆ ಅನುಮತಿ ನೀಡಲಿಲ್ಲ. ಪತ್ನಿ ಏಕಾಂಗಿಯಾಗಿ ಪ್ರಚಾರ ನಡೆಸಿ ಎರಡನೇ ಸ್ಥಾನ ಪಡೆದರು.
ಉಪಚುನಾವಣೆ ಕದನ ಜೋರು : ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಸದರಾಗಿ ಈ. ತುಕಾರಾಮ್ ಆಯ್ಕೆಯಾಗಿದ್ದಾರೆ. ತೆರವಾದ ಶಾಸಕ ಸ್ಥಾನಕ್ಕೆ ಕೆಲವೇ ದಿನಗಳಲ್ಲಿ ಸಂಡೂರು ವಿಧಾನಸಭಾ ಉಪ ಚುನಾವಣೆ ನಡೆಯಲಿದೆ. ಒಂದು ಬಾರಿಯೂ ಸಂಡೂರು ಕ್ಷೇತ್ರ ಗೆಲ್ಲದ ಬಿಜೆಪಿ ಈ ಬಾರಿ ಶತಗತಾಯ ಗೆಲ್ಲುವ ತವಕದಲ್ಲಿದ್ದಾರೆ. ಆದ್ದರಿಂದ, ರಾಜ್ಯಾದ್ಯಕ್ಷ ಬಿ. ವೈ. ವಿಜಯೇಂದ್ರ ಅಧ್ಯಕ್ಷತೆಯಲ್ಲಿ ಈಗಾಗಲೇ ಬಿಜೆಪಿ ಎರಡ್ಮೂರು ಕಾರ್ಯಕರಣಿ ಸಭೆ ನಡೆಸಿ ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ. ಮಾಜಿ ಸಚಿವ ಶ್ರೀರಾಮುಲು, ಜನಾರ್ದನರೆಡ್ಡಿ ಸೇರಿ ಒಗ್ಗೂಟ್ಟಿನಿಂದ ಜತೆಗೂಡಿ ಈ ಬಾರಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಇತಿಹಾಸ ಸೃಷಿಯಾಗಲಿದೆ. ಅಲ್ಲದೆ, ಕಳೆದ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಹೀನಾಯವಾಗಿ ಸೋತಿದ್ದ ಬಿಜೆಪಿಗೆ ಬಲ ತುಂಬಲಿದೆ ಎಂಬುದು ಕಾರ್ಯಕರ್ತರ ಅಭಿಪ್ರಾಯ.
ಸಹೋದರನ ಮುನಿಸು ಶಮನವಾಗುವುದೆ ? : ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲಿಗೆ ಮುಖ್ಯ ಕಾರಣ ಕೆಆರ್‌ಪಿಪಿಯಿಂದ ಸ್ಪರ್ಧಿಸಿದ್ದ ಜನಾರ್ದನರೆಡ್ಡಿ ಪತ್ನಿ ಅರುಣಾ ಲಕ್ಷ್ಮೀ ಯಿಂದ ಎಂಬುದು ಹಲವರಿಗೆ ತಿಳಿದ ವಿಷಯ. ಲೋಕಸಭಾ ಚುನಾವಣೆಗೆ ಮುನ್ನ ಕೆಆರ್‌ಪಿಪಿ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದ್ದರು. ಆದರೆ, ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಪತ್ನಿ ಅರುಣಾ ಲಕ್ಷ್ಮೀ ಹಾಗೂ ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ ಒಟ್ಟಾಗಿ ಒಂದು ಪ್ರಚಾರ ನಡೆಸಿಲ್ಲ. ಅಲ್ಲದೆ, ಒಂದು ವೇದಿಕೆಯಲ್ಲಿಯೂ ಕೂಡ ಅರುಣ ಲಕ್ಷ್ಮೀ ಜತೆ ಪರಸ್ಪರ ಚರ್ಚೆ ಹಾಗೂ ಜನಾರ್ದನರೆಡ್ಡಿ ಬಗ್ಗೆಯಾಗಲಿ ಸಭೆಯಲ್ಲಿ ಸೋಮಶೇಖರರೆಡ್ಡಿ ಪ್ರಸ್ತಾಪಿಸಿಲ್ಲ. ಆದ್ದರಿಂದ, ಜಿಲ್ಲೆಗೆ ಭೇಟಿ ನೀಡಿದ ನಂತರವೂ ಶಮನ ಮುಂದುವರೆಯಬಹುದು ಎಂಬುದು ಕಾದು ನೋಡಬೇಕಿದೆ.
ಭರ್ಜರಿ ಸ್ವಾಗತಕ್ಕೆ ತಯಾರಿ : ಜನಾರ್ದನರೆಡ್ಡಿ ಬಳ್ಳಾರಿ ಪ್ರವೇಶ ಅನುಮತಿ ನೀಡಿದ ಕ್ಷಣದಿಂದಲೇ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಈಗಾಗಲೇ ಕನಕ ದುರ್ಗಮ್ಮ ದೇವಿಗೆ ತೆಂಗಿನಕಾಯಿ ಒಡೆದು, ವಿಶೇಷ ಪೂಜೆ ಸಲ್ಲಿಸಿ, ಕೇಕ್ ಕತ್ತರಿಸಿ ಹಾಗೂ ಪಟಾಕಿ ಹಚ್ಚಿ ಸಂಭ್ರಮಿಸಿದ್ದಾರೆ. ಸೆ.3 ಗುರುವಾರ ದಂದು ಗೋಧೂಳಿ ಲಗ್ನದಲ್ಲಿ ಭೇಟಿ ನೀಡಲಿರುವ ರೆಡ್ಡಿಗೆ ಜೆಸಿಬಿಗಳ ಮೂಲಕ ಪುಷ್ಪಾರ್ಚಾನೆ ಸಲ್ಲಿಸಿ ಮೂಲಕ ಸ್ವಾಗತ ಕೋರಲಿದ್ದಾರೆ. ಅಲ್ಲದೆ, ನಗರದಲ್ಲಿ ಭರ್ಜರಿಯಾಗಿ ರೋಡ್ ಷೋ ನಡೆಸಲು ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕೋಟ್… ಗೆಳೆಯ ಜನಾರ್ದನರೆಡ್ಡಿ ಬಳ್ಳಾರಿಗೆ ಆಗಮಿಸುವುದು ಸಂತಸದ ವಿಷಯ. ಕೆಲ ದಿನಗಳಲ್ಲಿ ನಡೆಯಲಿರುವ ಸಂಡೂರು ವಿಧಾನಸಭಾ ಉಪಚುನಾವಣೆಯ ಬಿಜೆಪಿಗೆ ಬಲ ತುಂಬಲಿದೆ. ಈ ಸಂಡೂರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಇತಿಹಾಸ ಬದಲಾವಣೆಯ ಮಾಡುವ ಕಾಲ ಸನಿಹವಾಗಿದೆ. ಸೆ. 3 ರಂದು ನಾನು ಜಿಲ್ಲೆಯಲ್ಲಿದ್ದಾರೆ ಜನಾರ್ದನರೆಡ್ಡಿ ಅವರನ್ನು ಖಂಡಿತ ಸ್ವಾಗತ ಕೋರುವೆ.