ದಳಪತಿಗಳ ತೆಕ್ಕೆಗೆ ಗುರುಮಠಕಲ್ ಪುರಸಭೆ

JDS
Published on

ಯಾದಗಿರಿ : ಬಹುದಿನಗಳಿಂದ ಖಾಲಿ ಉಳಿದಿದ್ದ ಇಲ್ಲಿನ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ ಪಾಪಣ್ಣ ಮನ್ನೆ ಅಧ್ಯಕ್ಷರಾಗಿ, ಭೀಮಮ್ಮ ಮುಕ್ಕಡಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಬೆಳಗ್ಗೆ 9.30ಕ್ಕೆ ಚುನಾವಣಾಧಿಕಾರಿಯಾದ ತಹಶೀಲ್ದಾರ್ ಸಂಗಮೇಶ ಜಿಡಗೆ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿದರು. ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿ ಪಾಪಣ್ಣ ಮನ್ನೆ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಖಾಜಾ ಮೈನೋದ್ಧೀನ್ ಉಮೇದುವಾರಿಕೆ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಾಳಯದಲ್ಲಿ ಅಭ್ಯರ್ಥಿ ಯಿಲ್ಲದ್ದರಿಂದ ಜೆಡಿಎಸ್ ಅಭ್ಯರ್ಥಿ ಭೀಮಮ್ಮ ನಾಮಪತ್ರ ಸಲ್ಲಿಸಿದರು.

ಚುನಾವಣಾ ನಿಯಮದನ್ವಯ ಮಧ್ಯಾಹ್ನ 1.20ಕ್ಕೆ ಉಮೇದುವಾರಿಕೆ ವಾಪಸ್ ಪಡೆಯಲು ಅವಕಾಶ ನೀಡಿದ ಚುನಾವಣಾಧಿಕಾರಿಗಳು 1.25ಕ್ಕೆ ಬಹುಮತಕ್ಕೆ ತಿಳಿಸುತ್ತಿದ್ದಂತೆ ಜೆಡಿಎಸ್ ಅಭ್ಯರ್ಥಿ ಪರವಾಗಿ ಪಕ್ಷದ 8 ಸದಸ್ಯರು, ಬಿಜೆಪಿಯ ಇಬ್ಬರು, ಒಬ್ಬ ಪಕ್ಷೇತರ ಹಾಗೂ ಶಾಸಕರು ಕೈ ಎತ್ತುವ ಮೂಲಕ ಒಟ್ಟು 12 ಜನರು ಮತ ಚಲಾಯಿಸಿದರು.

ಕಾಂಗ್ರೆಸ್ ಅಭ್ಯರ್ಥಿಯ ಪರ ಪಕ್ಷದ 9 ಜನ ಸದಸ್ಯರು ಮತ ಚಲಾವಣೆ ಮಾಡಿದ್ದು, ಪಕ್ಷದ ಮೂವರು ಸದಸ್ಯರು ಗೈರಾಗಿದ್ದರು. ಜೆಡಿಎಸ್ ಅಭ್ಯರ್ಥಿ ಪಾಪಣ್ಣ ಮನ್ನೆ ಬಹುಮತ ಹೊಂದಿದ್ದನ್ನು ಖಚಿತ ಪಡಿಸಿಕೊಂಡ ಚುನಾವಣಾಧಿಕಾರಿ ಸಂಗಮೇಶ ಜಿಡಗೆ ಅವರು ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಭೀಮಮ್ಮ ಮುಕುಡಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅವಿರೋಧ ಆಯ್ಕೆಯಾಗಿರುವುದಾಗಿ ಘೋಷಿಸುವ ಮೂಲಕ ಚುನಾವಣಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net