

ಪಾಂಡವಪುರ: ಪಟ್ಟಣದ ಹಾರೋಹಳ್ಳಿ ಎಪಿಎಂಸಿ ಆವರಣದಲ್ಲಿ ತೆರೆಯಲಾಗಿರುವ ಭತ್ತ, ರಾಗಿ ಖರೀದಿ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧಿಕಾರಿಗಳು ದಲ್ಲಾಳಿಗಳ ಪರವಾಗಿದ್ದು, ರೈತರು ತರುವ ಭತ್ತ, ರಾಗಿ ಪಡೆಯಲು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ರೈತರು ಅಧಿಕಾರಿಗಳನ್ನು ಮಂಗಳವಾರ ತರಾಟೆಗೆ ತೆಗೆದುಕೊಂಡರು.
ಭತ್ತ, ರಾಗಿಯನ್ನು ಎಪಿಎಂಸಿ ಯಾರ್ಡ್‌ನಲ್ಲಿರುವ ಖರೀದಿ ಕೇಂದ್ರಕ್ಕೆ ತಂದು ಮೂರು ದಿನಗಳಾಗಿದೆ. ಆದರೆ, ಅಧಿಕಾರಿಗಳು ಖರೀದಿಸದೆ ಕೇವಲ ದಲ್ಲಾಳಿಗಳ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಬಾಡಿಗೆಗೆ ಪಡೆದುಕೊಂಡು ಬಂದಿರುವ ವಾಹನಗಳಿಗೆ ಪ್ರತಿನಿತ್ಯ 2ರಿಂದ 3 ಸಾವಿರ ರೂ. ಬಾಡಿಗೆ ತೆರಬೇಕಿದೆ. ಇದರಿಂದ ರೈತರಿಗೆ ನಷ್ಟ ಆಗುತ್ತಿದೆ. ಖರೀದಿ ಕೇಂದ್ರದಲ್ಲಿ ಗ್ರೇಡರ್‌ಗಳಿಲ್ಲ. ಅವರು ಬಂದು ಚೆಕ್ ಮಾಡುವವರೆಗೆ ನಮ್ಮ ಬೆಳೆಗಳನ್ನು ಖರೀದಿಸುವುದಿಲ್ಲ. ಇದನ್ನು ಪ್ರಶ್ನಿಸಿದರೆ ನಮ್ಮನ್ನೇ ದಬಾಯಿಸುತ್ತಾರೆ. ಸ್ಥಳಕ್ಕೆ ತಹಸೀಲ್ದಾರ್ ಆಗಮಿಸಿ ರೈತರ ಸಮಸ್ಯೆ ಪರಿಹರಿಸಬೇಕು ಎಂದು ಒತ್ತಾಯಿಸಿದರು.
ಖರೀದಿ ಕೇಂದ್ರ ತೆರೆಯುವ ಮುನ್ನವೇ ಸಾಕಷ್ಟು ರೈತರು ತಮ್ಮ ಬೆಳೆಗಳನ್ನು ದಲ್ಲಾಳಿಗಳಿಗೆ ಮಾರಾಟ ಮಾಡಿದ್ದಾರೆ. ಉಳಿದಿರುವ ಕೆಲವೇ ರೈತರು ನೇರವಾಗಿ ಮಾರಾಟ ಕೇಂದ್ರಕ್ಕೆ ಬಂದರೆ ಈ ರೀತಿಯ ಸಮಸ್ಯೆಗಳನ್ನು ಅಧಿಕಾರಿಗಳು ಉಂಟು ಮಾಡುತ್ತಿದ್ದಾರೆ. ಇದರಿಂದ ನಮ್ಮ ಸಮಯ ವ್ಯರ್ಥದ ಜತೆಗೆ ಬಾಡಿಗೆ ಕೊಡಬೇಕಾದ ಹಣವೂ ನಷ್ಟವಾಗುತ್ತಿದೆ. ಟ್ರಾನ್ಸ್‌ಫೋರ್ಟ್ ಮಾಲೀಕರು ಲಾರಿಗಳನ್ನು ಸರಿಯಾದ ಸಮಯಕ್ಕೆ ಕಳುಹಿಸುತ್ತಿಲ್ಲ. ಹೀಗಾಗಿ ತಡವಾಗುತ್ತಿದೆ ಎಂದು ಅಧಿಕಾರಿಗಳು ಉತ್ತರ ಕೊಡುತ್ತಾರೆ. ಲಾರಿಗಳು ಬಾರದಿದ್ದರೆ ಎಪಿಎಂಸಿಯಲ್ಲಿರುವ ಗೋದಾಮುಗಳಲ್ಲಿ ದಾಸ್ತಾನು ಮಾಡಿಕೊಳ್ಳಲಿ, ಇದರಿಂದ ರೈತರಿಗೆ ನಷ್ಟ ತಪ್ಪುತ್ತದೆ ಎಂದು ರೈತರು ಆಗ್ರಹಿಸಿದರು.
ರಾಜ್ಯ ಸಹಕಾರ ಮಹಾ ಮಂಡಳದ ಅಧಿಕಾರಿ ಲಿಂಗರಾಜು ಮಾತನಾಡಿ, ಇಲ್ಲಿ ಯಾವುದೇ ದಲ್ಲಾಳಿಗಳು ಇಲ್ಲ. ಭತ್ತ, ರಾಗಿ ತರುತ್ತಿರುವವರೆಲ್ಲ ರೈತರೇ ಆಗಿದ್ದಾರೆ. ನಾವು ನೇರವಾಗಿ ರೈತರಿಂದ ಖರೀದಿ ಮಾಡುತ್ತಿದ್ದೇವೆ. ಭತ್ತ, ರಾಗಿ ಗೋದಾಮಿಗೆ ಸಾಗಿಸಲು ಟೆಂಡರ್ ಪಡೆದಿರುವ ಟ್ರಾನ್ಸ್‌ಪೋರ್ಟ್ ಮಾಲೀಕರು ಸೋಮವಾರ ಲಾರಿಗಳನ್ನು ಕಳುಹಿಸದ ಕಾರಣ ಸಮಸ್ಯೆಯಾಗಿದೆ. ರೈತರಿಗೆ ತೊಂದರೆಯಾಗದಂತೆ ಎಲ್ಲವನ್ನೂ ಕ್ಲಿಯರ್ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಈ ವೇಳೆ ರೈತರಾದ ರಾಜ್‌ಕುಮಾರ್, ಮಲ್ಲೇಶ್, ಮಲ್ಲಕಾರ್ಜುನ, ಜಗದೀಶ್ ಇತರರು ಇದ್ದರು.