

ಚಾಮರಾಜನಗರ: ದೇಶದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ ಜಾತಿಗಳು ಒಂದಾಗದ ಹೊರತು ಉನ್ನತಮಟ್ಟದ ರಾಜಕೀಯ ಅಧಿಕಾರವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ಮಂಗಳವಾರ ಆಯೋಜಿಸಿದ್ದ 75 ವರ್ಷಗಳ ರಾಜಕಾರಣದಲ್ಲಿ ದಲಿತರಿಗೆ ನ್ಯಾಯ ದೊರಕಿದೆಯೇ? ಎಂಬ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪರಿಶಿಷ್ಟ ಜಾತಿಯಲ್ಲಿ ಸಾವಿರಕ್ಕಿಂತಲೂ ಹೆಚ್ಚು ಉಪಜಾತಿಗಳು ಇದ್ದು, ರಾಜಕೀಯವಾಗಿ ಒಗ್ಗಟ್ಟಾಗದೇ ಉನ್ನತ ರಾಜಕೀಯ ಅಧಿಕಾರ ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಹೊಲಯ ಮತ್ತು ಮಾದಿಗ ಜಾತಿಗಳ ಕಿತ್ತಾಟದಿಂದ ಬೇರೆ ಯಾವುದೋ ಜಾತಿಗಳಿಗೆ ಅನುಕೂಲವಾಗುತ್ತಿದೆ. ಬೋಗಸ್ ಜಾತಿ ದೃಢೀಕರಣ ಪತ್ರವನ್ನು ಬಳಸಿಕೊಂಡು ಅಧಿಕಾರ ಪಡೆದುಕೊಂಡವರನ್ನು ನಾವು ಕಾಣಬಹುದಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಡೆಸಿದ ಜಾತಿ ಜನಗಣತಿಯಲ್ಲಿ ಪರಿಶಿಷ್ಟ ಜಾತಿಯ ಜನರು ತಮ್ಮ ಉಪಜಾತಿಗಳನ್ನು ಸೂಕ್ತ ರೀತಿಯಲ್ಲಿ ನಮೂದು ಮಾಡಿದರೇ, ಮೀಸಲಾತಿ ಹಂಚಿಕೆಗೆ ಅನುಕೂಲವಾಗಲಿದೆ ಎಂದು ಹೇಳಿದರು.
ನ್ಯಾಯಾಧೀಶರೊಬ್ಬರು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದಾಗ ರಾಜ್ಯಾದ್ಯಂತ ದಲಿತ ಸಮುದಾಯ ಹೋರಾಟ ರೂಪಿಸಲಾಗಿತ್ತು. ಆದರೆ ಆ ನ್ಯಾಯಾಧೀಶರ ಮೇಲೆ ಏನು ಕ್ರಮವಾಯಿತು ಎಂಬುದನ್ನು ನಾವು ಅರಿತುಕೊಳ್ಳಬೇಕಿದೆ. ರಾಜ್ಯ ರಾಜಕಾರಣದಲ್ಲಿ ಬಿ.ರಾಚಯ್ಯ, ಎನ್.ರಾಚಯ್ಯ, ಕೆ.ಎಸ್.ರಂಗನಾಥ್ ಅವರು ಸಮುದಾಯಕ್ಕೆ ಅಪಾರವಾದ ಕೆಲಸವನ್ನು ಮಾಡಿದ್ದರು. ವ್ಯವಸ್ಥೆ ಅಂತವರಿಗೆ ಅಧಿಕಾರದ ಅವಕಾಶವನ್ನು ತಪ್ಪಿವಂತೆ ಮಾಡಿತು. ಎಲ್ಲಿಯವರೆಗೆ ಮೀಸಲು ಕ್ಷೇತ್ರದಿಂದ ಗೆಲುವು ಸಾಧಿಸುವ ಶಾಸಕರು ಒಂದಾಗುವುದಿಲ್ಲವೋ, ಅಲ್ಲಿಯವರೆಗೂ ಅಧಿಕಾರ ದೊರೆಯುವುದಿಲ್ಲ ಎಂದರು.
ಹಿರಿಯ ಪತ್ರಕರ್ತ ಕೆ.ಶಿವಕುಮಾರ್ ಮಾತನಾಡಿ, ದೇಶದ 15-16 ರಾಜ್ಯಗಳಲ್ಲಿ ದಲಿತರು ನಿರ್ಣಾಯಕ ಪಾತ್ರವನ್ನು ವಹಿಸಿದರೂ, ಉನ್ನತ ರಾಜಕೀಯ ಅಧಿಕಾರವನ್ನು ಪಡೆಯಲು ಸಾಧ್ಯವಾಗಿಲ್ಲ. ದೇಶದಲ್ಲಿ ಈ ವರೆಗೆ 357 ಜನರು ಮುಖ್ಯಮಂತ್ರಿಯಾಗಿದ್ದು, ಕೇವಲ 7 ದಲಿತರು ಮಾತ್ರ ಮುಖ್ಯಮಂತ್ರಿಯಾಗಿದ್ದಾರೆ. ದಲಿತ ರಾಜಕಾರಣಿಗಳ ಓಲೈಕೆ ರಾಜಕಾರಣ, ದಲಿತ ನಾಯಕರಿಂದಲೇ ದಲಿತರ ಮೇಲೆ ಶೋಷಣೆ ಹಾಗೂ ದಲಿತರಲ್ಲಿ ಒಗ್ಗಟ್ಟು ಇಲ್ಲದ ಕಾರಣದಿಂದ ಮುಖ್ಯಮಂತ್ರಿಯಂತಹ ಉನ್ನತ ಹುದ್ದೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.
ಈ ದೇಶದ ಜನಸಂಖ್ಯೆಗೆ ಅನುಗುಣವಾಗಿ ಅಧಿಕಾರ ವಿಕೇಂದ್ರಿಕರಣವಾಗಬೇಕು. ದಲಿತ ರಾಜಕಾರಣಿಗಳು ಎರಡನೇ ಸಾಲಿನ ನಾಯಕರನ್ನು ಬೆಳೆಸಬೇಕು. ರಾಜಕೀಯ ಪಕ್ಷಗಳು ಶೋಷಿತ ಸಮುದಾಯಗಳನ್ನು ವಿಭಾಗಿಸುವ ಹುನ್ನಾರದ ವಿರುದ್ಧ ದಲಿತರು ಜಾಗೃತಿವಹಿಸಬೇಕು. ಎಡ-ಬಲಗಳು ವೈರುಧ್ಯವನ್ನು ಮರೆತು ಒಂದಾಗುವ ಮೂಲಕ ರಾಜಕೀಯ ಅಧಿಕಾರವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಮುಳ್ಳೂರು ಶಿವಮಲ್ಲು, ವಿಚಾರವಾದಿ ಅರಕಲವಾಡಿ ನಾಗೇಂದ್ರ, ನಿವೃತ್ತ ಆರಕ್ಷಕ ನಿರೀಕ್ಷಕ ಪುಟ್ಟಸ್ವಾಮಿ, ಜಿ.ಪಂ ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್, ನಗರಸಭಾ ಸದಸ್ಯ ಆರ್.ಪಿ.ನಂಜುಂಡಸ್ವಾಮಿ, ಡಿಎಸ್‌ಎಸ್ ಸಿ.ಎಂ.ಶಿವಣ್ಣ, ಯರಿಯೂರು ರಾಜಣ್ಣ, ರಾಜಶೇಖರ್, ದೊಡ್ಡಿಂದವಾಡಿ ಸಿದ್ದರಾಜು, ಸೋಮಯ್ಯ ಮಲೆಯೂರು, ಡಾ.ಚನ್ನಕೇಶವಮೂರ್ತಿ, ರಾಮಸಮುದ್ರ ಸುರೇಶ್, ಹೊನ್ನಮ್ಮ, ರವಿಚಂದ್ರ ಪ್ರಸಾದ್ ಹಾಗೂ ಇತರರು ಹಾಜರಿದ್ದರು.
ಆತ್ಮವಿಮರ್ಶೆ ಅಗತ್ಯ:
ರಾಜ್ಯದಲ್ಲಿ ಲಿಂಗಾಯತರು, ಒಕ್ಕಲಿಗರು ಹಾಗೂ ಇನ್ನಿತರೆ ಸಣ್ಣ-ಪುಟ್ಟ ಸಮುದಾಯದವರು ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ್ದಾರೆ. ಆದರೇ ದಲಿತರು 75ವರ್ಷಗಳು ಕಳೆದರೂ ಸಿಎಂ ಹುದ್ದೆ ದೊರೆಯದ ಕುರಿತು ಸಮುದಾಯ ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದು ಹಿರಿಯ ಹೋರಾಟಗಾರ ವೆಂಕಟರಮಣಸ್ವಾಮಿ (ಪಾಪು) ತಿಳಿಸಿದರು. ಬಸವಲಿಂಗಪ್ಪ, ಬಿ.ರಾಚಯ್ಯ, ಎನ್.ರಾಚಯ್ಯ, ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆಗುವ ಎಲ್ಲಾ ಅವಕಾಶಗಳು ಇದ್ದರೂ ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನು ಮತ್ತು ಡಾ.ಎಚ್.ಸಿ.ಮಹದೇವಪ್ಪ ಇಬ್ಬರೂ ಬಿ.ರಾಚಯ್ಯ ಅವರ ಶಿಷ್ಯರು ಎಂದು ಹೇಳಿಕೊಳ್ಳುತ್ತಾರೆ. ಆಗಾಗಿ ಬಿ.ರಾಚಯ್ಯ ಅವರ ಋಣವನ್ನು ತೀರಿಸಲು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರರಿಗೆ ಸಚಿವ ಸ್ಥಾನವನ್ನು ನೀಡಬೇಕು. ಸತ್ತವರ ಮನೆಗಳಿಗೆ ಹೋಗುವುದೇ ಅಭಿವೃದ್ಧಿ ಎಂದು ಭಾವಿಸುವವರನ್ನು ಹೊರತುಪಡಿಸಿ, ಜನರ ಹಿತ ಕಾಯುವವರನ್ನು ಬೆಂಬಲಿಸಬೇಕಿದೆ ಎಂದು ಹೇಳಿದರು.
ದೇಶದಲ್ಲಿ ಹಲವಾರು ಚಳುವಳಿಗಳು ಹಾಗೂ ದಲಿತ ಹೋರಾಟಗಾರರು ದಲಿತ ರಾಜಕಾರಣಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದೆ. ದಲಿತರಿಗೆ ಎಷ್ಟು ಹೋರಾಟದ ಪ್ರತಿಲ ದೊರಕಿದೆ ಎಂಬುದು ಮುಖ್ಯವಾಗುತ್ತದೆ. ಪ್ರಸ್ತುತ ರಾಜ್ಯದಲ್ಲಿ ಶೇ.24.75 ರಷ್ಟು ದಲಿತರು ಇದ್ದು, ಇಂತಹ ರಾಜ್ಯದಲ್ಲಿ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ಸಿಗುತ್ತಿಲ್ಲ ಎಂಬುದೇ ದುದೃಷ್ಟಕರ.
-ಡಾ.ಆರ್.ರಾಜು, ನಿವೃತ್ತ ಐಎ್ಎಸ್ ಅಧಿಕಾರಿ, ಚಾಮರಾಜನಗರ
ನನ್ನ ಅವಧಿಯಲ್ಲಿ ಎರಡನೇ ಸಾಲಿನ ರಾಜಕಾರಣಿಗಳನ್ನು ಬೆಳೆಸಿದ್ದೇನೆ. ಅದರಂತೆ ಸಮರ್ಥವಾದ ಎಸ್.ನಂಜುಂಡಸ್ವಾಮಿ ಅವರನ್ನು ನಗರಸಭೆ ಅಧ್ಯಕ್ಷರಾಗಿ, ಎಸ್.ಮಹದೇವಯ್ಯ ಅವರನ್ನು ಮೊದಲ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಹಾಗೂ ರತ್ನಮ್ಮ ಅವರನ್ನು ಮೈಸೂರು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರನ್ನಾಗಿ ಮಾಡಿದೆ. ಆದರೆ ಅವರು ನನ್ನ ಎದೆಗೆ ಚೂರಿ ಹಾಕಿದರು. ಇಂತಹ ಕಾರಣಗಳು ದಲಿತ ರಾಜಕಾರಣಕ್ಕೆ ತೊಡಕಾಗಿದೆ.
-ಎ.ಆರ್.ಕೃಷ್ಣಮೂರ್ತಿ, ಶಾಸಕ, ಕೊಳ್ಳೇಗಾಲ